ರಾಜ್ಯದಲ್ಲಿ ಕಾವೇರಿ ವಿವಾದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಮುಳುಬಾಗಿಲು ಗ್ರಾಮದ ಭೀಮನಕಟ್ಟೆಯಲ್ಲಿರುವ ತುಂಗಾ ನದಿಯಿಂದ ಜಾಕ್ವೆಲ್ ಮೂಲಕ ತಾಲೂಕಿನ 36 ಗ್ರಾಮ ಪಂಚಾಯಿತಿಯ 1600 ಮಜರೆ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ.
ನಿತ್ಯವೂ ಸುಮಾರು 5 ಕೋಟಿ ಲೀಟರ್ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುವ ಯೋಜನೆಯಾಗಿದೆ. ಅಷ್ಟು ಪ್ರಮಾಣದ ನೀರು ಪ್ರಸ್ತುತ ಯೋಜನಾ ಸ್ಥಳದಲ್ಲಿ ಲಭ್ಯವಿಲ್ಲ. ಅಲ್ಲದೆ, ಮಲೆನಾಡಿನ ಹಳ್ಳಿಗಳು ಕುಡಿಯುವ ನೀರಿನ ಸ್ವಾವಲಂಬನೆ ಹೊಂದಿದ್ದು, ಅವೈಜ್ಞಾನಿಕ ಕಾಮಗಾರಿ ಪರಿಚಯಿಸುವ ಮೂಲಕ ಸ್ಥಳೀಯ ನೈಸರ್ಗಿಕ ಸಮತೋಲನ ಹಾಳು ಮಾಡಲಾಗುತ್ತಿದೆ ಎಂದು ಸ್ಥಳೀಯ ರೈತರು ಇತ್ತೀಚಿಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳೀಯರು, ರೈತರನ್ನು ಹೊರಗಿಟ್ಟು ಅಂದಾಜು ₹ 267.70 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಯೋಜನೆಯ ಡಿಪಿಆರ್, ಅಂದಾಜು ಮೊತ್ತ, ಕಾರ್ಯಾದೇಶದ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆಂದು ಆರೋಪಿಸಿ, ರೈತ ಸಂಘ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂಭಾಗ ಹೆಗ್ಗೋಡು, ಹೊಸಹಳ್ಳಿ, ಮೇಲಿನ ಕುರುವಳ್ಳಿ, ಮುಳುಬಾಗಿಲು, ತೀರ್ಥಮುತ್ತೂರು, ಬಸವಾನಿ, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರನ್ನು ಒಗ್ಗೂಡಿಸಿ ಧರಣಿ ನಡೆಸಿದರು.

ಯೋಜನೆಯ ಬಗ್ಗೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿರುವ ಅಭಿಲಾಷ್ ಸೌಳಿ ಈ ದಿನ.ಕಾಮ್ ಜೊತೆ ಮಾತನಾಡಿ, “ಈಗಾಗಲೇ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕೋಡ್ಲು ಗ್ರಾಮದಲ್ಲಿ ಉದ್ದೇಶಿತ ಕಾಮಗಾರಿ ಚಾಲ್ತಿಯಲ್ಲಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಕಾಮಗಾರಿ ಮಾಹಿತಿ ನೀಡುವಂತೆ 36 ದಿನಗಳ ಹಿಂದೆ ಅರ್ಜಿ ಸಲ್ಲಿಸಿ ಮಾಹಿತಿ ಒದಗಿಸಲು ತಗಲುವ ₹2,500 ಮೊತ್ತ ಭರಿಸಿದ್ದೇವೆ. ಆದರೆ ಅಧಿಕಾರಿಗಳು ನೀವು ಮೇಲ್ಮನವಿ ಸಲ್ಲಿಸಿ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಗ್ರಾಮಸ್ಥರನ್ನು ಹೊರಗಿಟ್ಟು ಯೋಜನೆ ಅನುಷ್ಠಾನ ಮಾಡುವ ಅಗತ್ಯ ಇತ್ತೇ” ಎಂದು ಪ್ರಶ್ನಿಸಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಕೂಡ್ಲೂ ವೆಂಕಟೇಶ್ ಈ ದಿನ.ಕಾಮ್ ಜೊತೆ ಮಾತನಾಡಿ, “ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರಂಭದಲ್ಲಿ ಪವರ್ ಪ್ಲಾಂಟ್ ಎಂಬ ಸುದ್ದಿಯನ್ನು ಹರಿಯಬಿಟ್ಟು ಕಾಮಗಾರಿ ಮಾಡಲು ಮುಂದಾಗಿರುವುದು ಗ್ರಾಮಸ್ಥರಲ್ಲಿ ಅನುಮಾನ ಸೃಷ್ಟಿಸಿದೆ. ಅಧಿಕಾರಿಗಳು ಮಾಹಿತಿ ಕೊಡಲು ಸತಾಯಿಸುತ್ತಿರುವ ಒಳಹುನ್ನಾರ ಏನೆಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳು ಮಾಹಿತಿ ನಿರಾಕರಣೆ ಮಾಡುತ್ತಿರುವ ಹಿಂದಿನ ಒಳಗುಟ್ಟು ಏನು ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ರಾಯಚೂರು | ಶುದ್ಧ ನೀರಿನ ಘಟಕ ಉದ್ಘಾಟನೆಯಾದರೂ ಕಾರ್ಯಾಚರಣೆ ಭಾಗ್ಯವಿಲ್ಲ
ಕಚೇರಿಯಲ್ಲಿಲ್ಲ ಅಧಿಕಾರಿಗಳು
“ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಲು ಲಭ್ಯವಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿ ಆಗಮಿಸುತ್ತಿದ್ದು, ಜನಪ್ರತಿನಿಧಿಗಳ ನಿಯಂತ್ರಣ ತಪ್ಪಿದಂತಿದೆ” ಎಂದು ಕೂಡ್ಲೂ ವೆಂಕಟೇಶ್ ಆಕ್ರೋಶ ಹೊರಹಾಕಿದ್ದಾರೆ.
“ಎಲ್ಲ ಪಕ್ಷಗಳು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು, ಗ್ರಾಮಸ್ಥರನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸುತ್ತೇವೆ. ಇನ್ನೆರಡು ದಿನಗಳಲ್ಲಿ ಮಾಹಿತಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸರಿಯಾದ ಮಾಹಿತಿ ನೀಡದೆ ಕಾಮಗಾರಿ ಮುಂದುವರೆಸಿದರೆ ತೀವ್ರ ಹೋರಾಟ ಮಾಡಲಾಗುವುದು” ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೂಡ್ಲೂ ವೆಂಕಟೇಶ್ ಎಚ್ಚರಿಕೆ ನೀಡಿದರು.
