- ಸರ್ಕಾರಕ್ಕೆ ನೂರು ದಿನ, ಆದರೂ ವಿಪಕ್ಷದ ನಾಯಕನ ಆಯ್ಕೆ ಆಗಿಲ್ಲ ಎಂದ ಮಾಜಿ ಸಿಎಂ
- ಗದಗದಲ್ಲಿ ಬಿಜೆಪಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ವಾಗ್ದಾಳಿ
“ಬಿಜೆಪಿಯ ಮಾಜಿ ಶಾಸಕರು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಕಾಂಗ್ರೆಸ್ ಪಕ್ಷ ಸೇರಲು ಬಹಳಷ್ಟು ಜನ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಯಾರು ಸೇರುತ್ತಾರೆಂದು ಹೇಳಲ್ಲ, ನಿರ್ಧಾರವಾದಾಗ ಹೆಸರು ಹೇಳುತ್ತೇನೆ” ಎಂದು ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಗದಗದಲ್ಲಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದಮಾಜಿ ಸಿಎಂ, “ಸರ್ಕಾರ ರಚಿಸಿ ನೂರು ದಿನಗಳಾದರೂ ರಾಜ್ಯದಲ್ಲಿ ವಿಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಬಿಜೆಪಿ ಎಷ್ಟು ಶೋಚನೀಯ ಪರಿಸ್ಥಿತಿಯಲ್ಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಚೀಟಿ ಎತ್ತುವ ಮೂಲಕವಾದರೂ ಬಿಜೆಪಿ ತಾತ್ಕಾಲಿಕ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿ. ರಾಜ್ಯ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿದೆ. ಹೀಗಾಗಿ ಸುಧಾರಣೆ ಆಗಿಲ್ಲ” ಎಂದು ಪರೋಕ್ಷವಾಗಿ ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದರು.
“ಬಿಜೆಪಿಯಲ್ಲಿ ‘ಮಿಸ್ ಮ್ಯಾನೇಜ್‌ಮೆಂಟ್’ ಇದೆ. ಬಿಜೆಪಿಯ ಮಾಜಿ ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ. ಕಾಂಗ್ರೆಸ್ ಬರಬೇಕು ಎಂದು ಬಹಳಷ್ಟು ಜನರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ. ಅವರಾಗಿಯೇ ಬರುತ್ತಿದ್ದಾರೆ. ಮಾಜಿ ಸಚಿವ ಬಿ.ಸಿ.ಪಾಟೀಲ್ ಸಂಪರ್ಕದಲ್ಲಿಲ್ಲ” ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
“ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಕೂಗಿಗೆ ಈಗ ಹೋರಾಟದ ರೂಪ ಸಿಗುತ್ತಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತರನ್ನು ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರ ನೇತೃತ್ವವನ್ನು ಧರ್ಮದ ಜಗದ್ಗುರುಗಳು ವಹಿಸಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದರು.