- ಚುನಾವಣೆಯಲ್ಲಿ ಒಂದು ವರ್ಗ ಸೆಳೆಯಲು ಈ ರೀತಿ ಮಾಡುತ್ತಾರೆ: ಬೊಮ್ಮಾಯಿ
- ‘ಸಮಾಜದಲ್ಲಿ ಅಶಾಂತಿ ಇರಬೇಕು ಎಂದು ಬಯಸುವವರು ಈ ರೀತಿ ಹೇಳಿದ್ದಾರೆ’
ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಮತ್ತು ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಸ್ವಾಮೀಜಿಗಳು ಖಂಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿ, “ಸ್ಟಾಲಿನ್ ಹೇಳಿಕೆ ಖಂಡನೀಯವಾಗಿದ್ದು, ಅವರ ಹೇಳಿಕೆ ನೋಡಿದರೆ ಅವರ ಹಿಟ್ಲರ್ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಚುನಾವಣೆಯಲ್ಲಿ ಒಂದು ವರ್ಗವನ್ನು ಸೆಳೆಯಲು ಈ ರೀತಿ ಮಾಡುತ್ತಾರೆ” ಎಂದು ಟೀಕಿಸಿದ್ದಾರೆ.
“ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉದಯನಿಧಿ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು. ಸನಾತನ ಧರ್ಮ ಸರ್ವೇಜನ ಸುಖಿನೋಭವಂತು ಅಂತ ಹೇಳುತ್ತದೆ. ಮಾನವರಷ್ಟೇ ಅಲ್ಲ ಎಲ್ಲ ಜೀವಿಗಳು ಸುಖವಾಗಿರಲಿ ಅಂತ ಸನಾತನ ಧರ್ಮ ಬಯಸುತ್ತದೆ. ಸನಾತನ ಧರ್ಮವನ್ನು ಕಿತ್ತೊಗೆಯಬೇಕೆಂಬ ಮಾತು ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಉದಯನಿಧಿ ಹೇಳಿಕೆ ಬಗ್ಗೆ ‘ಇಂಡಿಯಾ’ ಮೈತ್ರಿಕೂಟದ ಮಿತ್ರ ಪಕ್ಷಗಳು ಗೊಂದಲದಲ್ಲಿವೆ. ಭಾರತದಲ್ಲಿ ಎಲ್ಲ ಧರ್ಮಗಳಿಗೆ ಅವಕಾಶ ಇದೆ. ಇಲ್ಲಿ ಬೌದ್ಧ, ಜೈನ, ಸಿಖ್, ಇಸ್ಲಾಂ, ಸಿಖ್ ಧರ್ಮಗಳು ನೆಮ್ಮದಿಯಾಗಿವೆ. ಸುತ್ತಲಿನ ರಾಷ್ಟ್ರಗಳಲ್ಲಿ ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಅಧಿಕಾರದ ಆಸೆಗೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ. ಭಾರತದ ಜನರು ಇದೆಲ್ಲವನ್ನು ಗಮನಿಸುತ್ತಾರೆ. ಅವರು ಸೂಕ್ತ ಉತ್ತರ ನೀಡುತ್ತಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರ ಘೋಷಣೆಯಲ್ಲ, ಪೀಡಿತರಿಗೆ ಪರಿಹಾರ ಮುಟ್ಟಿಸುವುದು ಮುಖ್ಯ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಅವರ ಅಪ್ಪ ಬಂದರೂ ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಅಯೋಗ್ಯರು, ರಾಕ್ಷಸರು ಈ ರೀತಿ ಮಾತನಾಡುತ್ತಾರೆ. ಹಿಂದೆಯೂ ಸಾಕಷ್ಟು ಜನ ಈ ರೀತಿ ಮಾತನಾಡಿದ್ದಾರೆ. ಅವರೆಲ್ಲಾ ನಾಶವಾಗಿದ್ದಾರೆ. ಇವರೂ ನಾಶವಾಗುತ್ತಾರೆ. ಈ ದೇಶ ಉಳಿದಿರುವುದೇ ಸನಾತನ ಧರ್ಮದಿಂದ” ಎಂದು ಕಿಡಿಕಾರಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಈ ಕುರಿತು ಪ್ರತಿಕ್ರಿಯಿಸಿದ್ದು, ಜವಾಬ್ದಾರಿ ಸ್ಥಾನದಲ್ಲಿರುವ ಉದಯನಿಧಿ ಸ್ಟಾಲಿನ್ ಧರ್ಮದ ಕುರಿತು ಈ ರೀತಿ ಮಾತನಾಡಬಾರದು. ನಮ್ಮ ನಡವಳಿಕೆ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯಾಗಬಾರದು ಎಂಬುದು ಸನಾತನ ಧರ್ಮದ ಉದ್ದೇಶ. ಆದರೆ, ಸನಾತನ ಧರ್ಮ ವಿರೋಧಿಸುವವರ ಮನಸ್ಥಿತಿ ಹೇಗಿದೆ ಎಂದರೆ ಸಮಾಜದಲ್ಲಿ ಸದಾ ಅಶಾಂತಿ ಇರಬೇಕು ಎಂದು ಬಯಸುತ್ತಾರೆ ಎಂದು ಟೀಕಿಸಿದ್ದಾರೆ.
ಮಾಜಿ ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿ, ತಮಿಳುನಾಡು ಸಚಿವ ಉದಯನಿಧಿ ದುರಹಂಕಾರದ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ. ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಬೇಕು. ದುರಹಂಕಾರದ ಹೇಳಿಕೆಯನ್ನು ಹಿಂಪಡೆಯಲಿ. ಉದಯನಿಧಿ ಸ್ಟಾಲಿನ್ ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.