ಮಣಿಪುರ ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಕುರಿತು ಸ್ಥಳೀಯ ಕೆಲವು ಪತ್ರಕರ್ತರು ಏಕಪಕ್ಷೀಯವಾಗಿ ವರದಿ ಮಾಡಿದ್ದಾರೆ ಎಂದು ವರದಿ ಬಿಡುಗಡೆ ಮಾಡಿದ್ದ ಕಾರಣಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸತ್ಯಶೋಧನಾ ಸಮಿತಿಯ ಮೂವರು ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸೋಮವಾರ ಖಂಡಿಸಿದೆ.
“ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಿಂತ ಸಂದೇಶವಾಹಕರನ್ನು ಗುಂಡಿಕ್ಕಿ ಕೊಂದ ಪ್ರಕರಣ ಇದಾಗಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ಮೂವರು ಸದಸ್ಯರ ವಿರುದ್ಧದ ಎಫ್‌ಐಆರ್ ಅನ್ನು ತಕ್ಷಣವೇ ಹಿಂಪಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಸುಮಾರು ನಾಲ್ಕು ತಿಂಗಳ ಕಾಲ ಜನಾಂಗೀಯ ಕಲಹದಿಂದ ತತ್ತರಿಸಿರುವ ರಾಜ್ಯದಲ್ಲಿ ಇನ್ನಷ್ಟು ಘರ್ಷಣೆಗಳನ್ನು ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಮಣಿಪುರ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆಯಾದರೂ ಇದೇ ಸೆಕ್ಷನ್ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸೆಕ್ಷನ್ ಅನ್ವಯ ಯಾರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ. ನಿಂದನಾತ್ಮಕ ಆನ್‌ಲೈನ್ ಪೋಸ್ಟ್ ಮಾಡುವ ಯಾರನ್ನೇ ಆದರೂ ಬಂಧಿಸಿ ಜೈಲಿಗೆ ತಳ್ಳುವ ಅಧಿಕಾರವನ್ನು ಈ ಸೆಕ್ಷನ್ 66ಎ ಸರಕಾರಕ್ಕೆ ನೀಡುತ್ತದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ವರದಿ | ಎಡಿಟರ್ಸ್ ಗಿಲ್ಡ್ ವಿರುದ್ಧ ಎಫ್‌ಐಆರ್ ದಾಖಲು
“ಇದು ದೇಶದ ಸರ್ವೋಚ್ಚ ಮಾಧ್ಯಮ ಸಂಸ್ಥೆಯನ್ನು ಬೆದರಿಸುವ ರಾಜ್ಯ ಸರ್ಕಾರದ ಪ್ರಬಲ ಶಸ್ತ್ರ ತಂತ್ರವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರವನ್ನು ಈಶಾನ್ಯ ರಾಜ್ಯದ ಪತ್ರಕರ್ತರು ಏಕಪಕ್ಷೀಯ ವರದಿಗಳನ್ನು ಬರೆದಿದ್ದಾರೆ. ಇಂಟರ್ನೆಟ್ ನಿಷೇಧವು ಪರಸ್ಪರ ಸಂವಹನ ಮಾಡುವ ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿದೆ ಮತ್ತು ಜನಾಂಗೀಯ ಸಂಘರ್ಷದಲ್ಲಿ ರಾಜ್ಯ ಸರ್ಕಾರವು ಪಕ್ಷಪಾತದ ನೀತಿಯನ್ನು ಅನುಸರಿಸಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸತ್ಯಶೋಧನಾ ಸಮಿತಿ ವರದಿ ಮಾಡಿತ್ತು.
ಗಿಲ್ಡ್‌ನ ಸದಸ್ಯರಾದ ಸೀಮಾ ಗುಹಾ, ಭರತ್ ಭೂಷಣ್ ಮತ್ತು ಸಂಜಯ್ ಕಪೂರ್ ಅವರನ್ನೊಳಗೊಂಡ ಮೂವರು ಸದಸ್ಯರ ಸತ್ಯಶೋಧನಾ ತಂಡವು, ಮಣಿಪುರದ ಮಾಧ್ಯಮಗಳ ಸಂಪಾದಕರು ಪರಸ್ಪರ ಸಮಾಲೋಚಿಸುವ ಮೂಲಕ ಮೀಟಿ ಸಮುದಾಯದ ಪರವಾದ ಮಾಧ್ಯಮವಾಗಿ ಮಾರ್ಪಟ್ಟಿದೆ ಎಂದು ತಿಳಿಸಿತ್ತು.
ಅಸ್ಸಾಂ ರೈಫಲ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮಣಿಪುರ ಪೊಲೀಸರಿಗೆ ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರವು ಏಕಪಕ್ಷೀಯ ಎಂಬುದನ್ನು ಮೌನವಾಗಿ ಬೆಂಬಲಿಸಿದೆ. ಸಂಘರ್ಷದ ಸಂದರ್ಭದಲ್ಲಿ ರಾಜ್ಯದ ನಾಯಕತ್ವ ಪಕ್ಷಪಾತಿಯಾಗಿರುವ ಸ್ಪಷ್ಟ ಸೂಚನೆಗಳಿದ್ದು, ಇಡೀ ರಾಜ್ಯವನ್ನು ಪ್ರತಿನಿಧಿಸಬೇಕಾದ ಪ್ರಜಾಪ್ರಭುತ್ವ ಸರ್ಕಾರವಾಗಿ ತನ್ನ ಕರ್ತವ್ಯವನ್ನು ಮಾಡಲು ವಿಫಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.