- ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ನಯಾ ಪೈಸೆ ಅನುದಾನ ಇಲ್ಲ
- ಅನ್ಯಾಯವಾಗುತ್ತಿರುವಾಗ ರಾಜ್ಯ ಬಿಜೆಪಿಯ 25 ಸಂಸದರ ಕೆಲಸವೇನು?
23 ಇಲಾಖೆಗಳ 61 ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಿಗೆ ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ತೀವ್ರವಾಗಿ ತರಾಟೆಗೆ ತಗೆದುಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟ್ಟರ್)ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, “ಈ ಹಿಂದೆ ಜೆ ಪಿ ನಡ್ಡಾ ಅವರು ಕಾಂಗ್ರೆಸ್ ಗೆದ್ದರೆ ಕೇಂದ್ರದ ಅನುದಾನ ನಿಲ್ಲಲಿದೆ ಎಂದು ಬೆದರಿಕೆ ಹಾಕಿದ್ದರು, ಇಂದು ಅದೇ ಬೆದರಿಕೆಯಂತೆ ನಡೆದುಕೊಳ್ಳುತ್ತಿದೆಯೇ ಕೇಂದ್ರ ಸರ್ಕಾರ” ಎಂದು ಪ್ರಶ್ನಿಸಿದೆ.
“ರಾಜ್ಯ ಬಿಜೆಪಿಯ 25 ಸಂಸದರ ಕೆಲಸವೇನು? ಕರ್ನಾಟಕಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ಏಕೆ ಪ್ರಶ್ನಿಸುತ್ತಿಲ್ಲ? ಕರ್ನಾಟಕದ ಮೇಲೆ ಈ ರೀತಿ ದ್ವೇಷ ಸಾಧಿಸುವ ನರೇಂದ್ರ ಮೋದಿ ಅವರು ವಾಜಪೇಯಿಯವರು ಹೇಳಿದ್ದ “ರಾಜಧರ್ಮ”ದ ಪಾಠವನ್ನು ನೆನಪಿಸಿಕೊಳ್ಳಲಿ” ಎಂದು ಕಿಡಿ ಕಾರಿದೆ.
ಈ ಸುದ್ದಿ ಓದಿದ್ದೀರಾ? ಆಪರೇಷನ್ ಹಸ್ತ ಚರ್ಚೆ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ತೇಜಸ್ವಿನಿ ಅನಂತಕುಮಾರ್
“ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಿಗೆ ಬಿಡಿಗಾಸನ್ನೂ ನೀಡದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ನೆನಪಾಗುವುದು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರನಾ?” ಎಂದು ಲೇವಡಿ ಮಾಡಿದೆ.
“ಮೂರು ದಿನಕ್ಕೊಮ್ಮೆ ರೋಡ್ ಶೋ ಮಾಡಿ ಕೈಬೀಸಿದ್ದರಲ್ಲ, ಈಗ ಕನ್ನಡಿಗರ ಹಿತ ಮರೆತು ಹೋಯ್ತೆ? ತೆರಿಗೆ ಪಾವತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಕರ್ನಾಟಕಕ್ಕೆ ಮರಳಿ ಕೊಡುತ್ತಿರುವುದು ಶೂನ್ಯ. ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಮೋದಿ ಎದುರು ಮಾತನಾಡಲು ಬಿಜೆಪಿ ಸಂಸದರಿಗೆ ಭಯವೇಕೆ? ಸಂಸದರ ಸ್ಥಾನ ಪಡೆದಿರುವುದು ಮೋದಿ ಎದುರು ಜಿ ಹುಜೂರ್ ಎನ್ನುವುದಕ್ಕೆ ಮಾತ್ರವೇ?” ಎಂದು ಕುಟುಕಿದೆ.