ಒಂದೇ ಸೂರಿನಡಿ ತರಕಾರಿ-ಹಣ್ಣು, ಮೀನು-ಮಾಂಸ ಸಿಗುವ ರಸೆಲ್ ಮಾರುಕಟ್ಟೆ ನಗರದ ಪ್ರಮುಖ ಮತ್ತು ಪುರಾತನ ವಾಣಿಜ್ಯ ಕೇಂದ್ರವಾಗಿದೆ. ಮಾರುಕಟ್ಟೆಯ ಮೂಲಸೌಕರ್ಯ ಹಾಳಾಗಿ ದಶಕಗಳೇ ಗತಿಸಿವೆ. 1984ರಿಂದ ಈ ರಸೆಲ್ ಮಾರುಕಟ್ಟೆ ಬಿಬಿಎಂಪಿಯ ಕಡೆಗಣನೆಗೆ ಒಳಗಾಗಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಮುಸ್ಲಿಮರು ವಾಸಿಸುವ ಸ್ಥಳವಾದ ಶಿವಾಜಿನಗರದಲ್ಲಿರುವ ರಸೆಲ್ ಮಾರ್ಕೆಟ್ ಪಾರಂಪರಿಕ ತಾಣವಾಗಿದೆ. 1927ರಲ್ಲಿ ಬ್ರಿಟಿಷ್ ಸೈನಿಕರಿಗೆ ಬೇಕಾದ ವಸ್ತುಗಳನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ಮಾರುಕಟ್ಟೆ ತಲೆ ಎತ್ತಿತ್ತು. ಅಂದಿನಿಂದ ಇಂದಿನವರೆಗೂ ಈ ಮಾರುಕಟ್ಟೆ ತನ್ನದೇ ಆದ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಈ ಮಾರುಕಟ್ಟೆ ನಿರ್ಮಾಣವಾಗಿ ಬರೋಬ್ಬರಿ 96 ವರ್ಷ ಕಳೆದಿವೆ. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಲಕ್ಷ್ಯಕ್ಕೆ ಗುರಿಯಾಗಿ ಗಬ್ಬೆದ್ದು ನಾರುತ್ತಿದೆ.
ರಸೆಲ್ ಮಾರುಕಟ್ಟೆ ಪಾರಂಪರಿಕ ಕಟ್ಟಡ. ಬೆಂಗಳೂರಿನ ಅತಿ ದೊಡ್ಡ ಶಾಪಿಂಗ್ ಮಾರುಕಟ್ಟೆ. ಇಲ್ಲಿ ಪ್ರಾಚೀನ ವಸ್ತುಗಳು ಮತ್ತು ಸೆಕೆಂಡ್ ಹ್ಯಾಂಡ್ ಸರಕುಗಳಿಂದ ಹಿಡಿದು ಮೀನು-ಮಾಂಸ, ಹಣ್ಣು-ತರಕಾರಿಗಳು ಸೇರಿದಂತೆ ನಾನಾ ಬಗೆಯ ಒಟ್ಟು 475 ಅಂಗಡಿಗಳಿವೆ. ಮಾರುಕಟ್ಟೆಯ ಪ್ರವೇಶದ್ವಾರದ ಬಳಿ ಹೂವಿನ ಅಂಗಡಿಗಳಿದ್ದರೆ, ಕೊನೆಯಲ್ಲಿ ಮೀನು ಸೇರಿದಂತೆ ಇನ್ನಿತರ ಮಾಂಸದ ಅಂಗಡಿಗಳಿವೆ. ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ಶಿವಾಜಿನಗರದ ರಸೆಲ್ ಮಾರುಕಟ್ಟೆ ತನ್ನದೇ ಆದ ವಿಶೇಷ ಆಕರ್ಷಣೆಯನ್ನು ಇಂದಿಗೂ ಉಳಿಸಿಕೊಂಡಿದೆ.
ಆದರೆ, ಮಾರುಕಟ್ಟೆಯ ಕಟ್ಟಡ 96 ವರ್ಷ ಹಳೆಯದಾಗಿದ್ದರೂ ಗೋಡೆಗೆ ಸುಣ್ಣ ಕಂಡಿಲ್ಲ. ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ. ಜನರು ಓಡಾಟ ನಡೆಸಲು ಉತ್ತಮ ಪಾದಚಾರಿ ಮಾರ್ಗವಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಇನ್ನು ಶೌಚಾಲಯ ವ್ಯವಸ್ಥೆ ಮೊದಲೇ ಇಲ್ಲ. ಒಟ್ಟಾರೆಯಾಗಿ, ಈ ರಸೆಲ್ ಮಾರುಕಟ್ಟೆ ಮೂಲಸೌಲಭ್ಯಗಳ ಕೊರತೆಗಳಿಂದ ಕಸದ ತೊಟ್ಟಿಯಾಗಿದೆ, ಗಬ್ಬೆದ್ದು ನಾರುತ್ತಿದೆ. ಈ ಮಾರುಕಟ್ಟೆಯನ್ನೇ ನಂಬಿ ಜೀವನ ನಡೆಸುತ್ತಿರುವ ಹಲವಾರು ವ್ಯಾಪಾರಿಗಳು ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಬೇರೆ ದಾರಿ ಕಾಣದೆ ಅದನ್ನೇ ನಂಬಿಕೊಂಡು ನಿತ್ಯ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಒಂದೇ ಸೂರಿನಡಿ ತರಕಾರಿ-ಹಣ್ಣು, ಮೀನು-ಮಾಂಸ, ಸಿಗುವ ರಸೆಲ್ ಮಾರುಕಟ್ಟೆ ನಗರದ ಪ್ರಮುಖ ಮತ್ತು ಪುರಾತನ ವಾಣಿಜ್ಯ ಕೇಂದ್ರವಾಗಿದೆ. ಮಾರುಕಟ್ಟೆಯ ಮೂಲಸೌಕರ್ಯ ಹಾಳಾಗಿ ದಶಕಗಳೇ ಗತಿಸಿವೆ. 1984ರಿಂದ ಈ ರಸೆಲ್ ಮಾರುಕಟ್ಟೆ ಬಿಬಿಎಂಪಿಯ ಕಡೆಗಣನೆಗೆ ಒಳಗಾಗಿದೆ.
ಪ್ರತಿದಿನ ಬೆಳಗ್ಗೆ 5 ರಿಂದ 8.30 ರ ನಡುವೆ, ಈ ಸ್ಥಳವು ಸಗಟು ಮಾರುಕಟ್ಟೆಯಾಗಿರುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ತಂದು ಖರೀದಿದಾರರಿಗೆ ಮಾರಾಟ ಮಾಡುತ್ತಾರೆ. ನಂತರ, ಚಿಲ್ಲರೆ ಮಾರುಕಟ್ಟೆಯಾಗಿ ರೂಪಾಂತರಗೊಳ್ಳುತ್ತದೆ. ಈ ಮಾರುಕಟ್ಟೆಗೆ ದಿನಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಈ ಅವ್ಯವಸ್ಥೆಯ ಕಾರಣದಿಂದ ಜನರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ದಿನಕ್ಕೆ ಎರಡು ಬಾರಿಯಾದರೂ ಈ ಮಾರುಕಟ್ಟೆಯಲ್ಲಿ ಬಿದ್ದಿರುವ ಕಸ ಹಾಗೂ ತ್ಯಾಜ್ಯವನ್ನು ತೆರವು ಮಾಡಲೇಬೇಕು. ಇಲ್ಲವಾದರೆ, ಗ್ರಾಹಕರು ಮಾರುಕಟ್ಟೆಗೆ ಭೇಟಿ ನೀಡುವುದು ಅನುಮಾನ.
ಮಾರುಕಟ್ಟೆಯ ಎತ್ತ ನೋಡಿದರೂ ಕಸ ತುಂಬಿದೆ. ಎಲ್ಲೆಂದರಲ್ಲಿ ನೀರು ನಿಂತಿದೆ. ಗೋಡೆಗಳು ಕುಸಿದಿವೆ. ಮಾರುಕಟ್ಟೆಯ ಮಳಿಗೆಗಳ ಬಾಗಿಲುಗಳು ಮುರಿದಿವೆ. ಮಾರಾಟಗಾರರು ತಮ್ಮ ಸರಕುಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಮೀನಿನ ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ರಸ್ತೆ ಮಧ್ಯದಲ್ಲಿರುವ ಮ್ಯಾನ್ಹೋಲ್ ಕಳೆದ ಹಲವು ದಿನಗಳಿಂದ ತೆರೆದು ನಿಂತಿದೆ. ಮುಚ್ಚುವವರಿಲ್ಲದೆ, ಇದರ ತ್ಯಾಜ್ಯ ನೀರು ಮಾರುಕಟ್ಟೆಗೆ ನುಗ್ಗುತ್ತದೆ. ತಿಳಿಯದ ದಾರಿಹೋಕರು, ಗ್ರಾಹಕರು ಈ ಮಾರ್ಗದಲ್ಲಿ ಬಂದರೆ, ಮ್ಯಾನ್ಹೋಲ್ನಲ್ಲಿ ಬೀಳುವ ಸಾಧ್ಯತೆಯಿದೆ.
ಮಾರುಕಟ್ಟೆಯ ಛಾವಣಿ ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂದಾಗ ಕಟ್ಟಡ ಸೋರುತ್ತದೆ. ಗೇಟ್ಗಳು ಮುರಿದಿವೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲ, ಒಳಗಡೆ ಹುಳುಕು ಹೊರಗಡೆ ಥಳಕು ಎಂಬಂತೆ ರಸೆಲ್ ಮಾರುಕಟ್ಟೆಯ ಹೊರಾಂಗಣಕ್ಕೆ ಬಣ್ಣ ಬಳಿಯಲಾಗದೆ. ಒಳಗಡೆಯ ಗೋಡೆಗಳು ಇನ್ನೂ ಬಣ್ಣ ಕಂಡಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೀದಿ ದೀಪ ಕಾಣದೆ ಕಗ್ಗತ್ತಲಾದ ರಾಮಚಂದ್ರ ರಸ್ತೆ; ವಾಹನ ಸವಾರರ ಪರದಾಟ
ಮಾರುಕಟ್ಟೆಯಲ್ಲಿ ತ್ಯಾಜ್ಯ
ಮಾರುಕಟ್ಟೆಯಲ್ಲಿ ನಿತ್ಯ ಹಸಿ ಮತ್ತು ಒಣ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಮೀನು, ಮಾಂಸ, ತರಕಾರಿ ಮತ್ತು ಹಣ್ಣಿನ ತ್ಯಾಜ್ಯವನ್ನೆಲ್ಲ ಮಾರುಕಟ್ಟೆಯ ಬಲಭಾಗದಲ್ಲಿ ಸುರಿಯಲಾಗುತ್ತದೆ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಳವಾಗಿದೆ. ಇದರಿಂದ ಮಾರುಕಟ್ಟೆಯ ವ್ಯಾಪಾರಸ್ಥರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಳವಾಗಿದೆ.
2012ರ ಫೆಬ್ರುವರಿ 26 ರಂದು ಶಾರ್ಟ್ ಸರ್ಕ್ಯೂಟ್ನಿಂದ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ₹89.2 ಲಕ್ಷದಷ್ಟು ಅಪಾರ ಹಾನಿ ಉಂಟಾಗಿತ್ತು. ಇದಾದ ಬಳಿಕ ಒಂದು ವರ್ಷಗಳ ಕಾಲ ಇಲ್ಲಿನ ವ್ಯಾಪಾರಸ್ಥರು ವಿದ್ಯುತ್ ಸಮಸ್ಯೆ ಅನುಭವಿಸಿದರು. ಕಳೆದ 10 ವರ್ಷಗಳಿಂದ ಮಾರುಕಟ್ಟೆಯಲ್ಲಿ ಯಾವುದೇ ಸಣ್ಣ ಕಾಮಗಾರಿಯೂ ನಡೆಯದಿರುವುದು ದುರಂತದ ಸಂಗತಿ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ರಸೆಲ್ ಮಾರುಕಟ್ಟೆಯ ವ್ಯಾಪಾರಿಯೊಬ್ಬರು, “ಪಾರಂಪರಿಕ ತಾಣವನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಈ ಕಟ್ಟಡವನ್ನು ಪುನರುಜ್ಜೀವನಗೊಳಿಸಬೇಕು. ಮಾರುಕಟ್ಟೆಯ ಬಗ್ಗೆ ಇದೇ ನಿರ್ಲಕ್ಷ್ಯ ಮುಂದುವರೆದರೆ, ಕಟ್ಟಡ ಸಂಪೂರ್ಣ ನಶಿಸಿ ಹೋಗಲಿದೆ. ಆದಷ್ಟು ಬೇಗ ಬಿಬಿಎಂಪಿ ಈ ಬಗ್ಗೆ ಕ್ರಮ ಕೈಗೊಂಡು ಮಾರುಕಟ್ಟೆಯನ್ನು ಮರು ನಿರ್ಮಾಣ ಮಾಡಬೇಕು” ಎಂದು ತಿಳಿಸಿದರು.
“ಮಾರುಕಟ್ಟೆಯಲ್ಲಿನ ಮೂಲಸೌಕರ್ಯದ ಕೊರತೆಯಿಂದ 200ಕ್ಕೂ ಹೆಚ್ಚು ಮಳಿಗೆಗಳು ಮುಚ್ಚಿವೆ. ಮಳಿಗೆಗಳಲ್ಲಿ ಅವ್ಯವಸ್ಥೆಯ ಕಾರಣದಿಂದ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಆದಷ್ಟು ಬೇಗ ಬಿಬಿಎಂಪಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಬೇಕು. ಯಥಾಸ್ಥಿತಿ ಮೂಲಸೌಕರ್ಯಗಳ ಕೊರತೆ ಮುಂದುವರೆದರೆ ಗ್ರಾಹಕರು ಕೊಳ್ಳಲು ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ವ್ಯಾಪಾರಿಗಳಿಗೆ ಭಾರೀ ಹೊಡೆತ ಬೀಳಲಿದೆ” ಎಂದು ಮತ್ತೋರ್ವ ವ್ಯಾಪಾರಿ ಈ ದಿನ.ಕಾಮ್ಗೆ ಹೇಳಿದರು.
ರಸೆಲ್ ಮಾರುಕಟ್ಟೆಯನ್ನು ಬ್ರಿಟಿಷರು 1927ರಲ್ಲಿ ನಿರ್ಮಾಣ ಮಾಡಿದರು. 1933ರಲ್ಲಿ ಇಸ್ಮಾಯಿಲ್ ಸೇಟ್ ಅವರು ಉದ್ಘಾಟಿಸಿದರು. ಈ ಮಾರುಕಟ್ಟೆಗೆ ಅಂದಿನ ಮುನ್ಸಿಪಲ್ ಕಮಿಷನರ್ ಟಿ ಬಿ ರಸೆಲ್ ಅವರ ಹೆಸರು ಇಡಲಾಗಿದೆ. 1983ರಲ್ಲಿ ಕೊನೆಯದಾಗಿ ನಡೆದಿದ್ದ ‘ಮಾರ್ಕೆಟ್ ಶೋ’, ಇತ್ತೀಚೆಗೆ 2022ರಲ್ಲಿ ನಡೆದಿತ್ತು. ಈ ರೀತಿಯ ಹಳೆಯ ಮಾರುಕಟ್ಟೆಗಳು ಬೆಂಗಳೂರಿನ ಸಂಪತ್ತು. ಇವುಗಳನ್ನು ಕಾಪಾಡಿಕೊಂಡು ಹೋಗುವುದು ನಗರದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸರ್ಕಾರ ಈ ಕೂಡಲೇ ಎಚ್ಚೆತ್ತು ಮಾರುಕಟ್ಟೆಯ ಪುನರುಜ್ಜೀವನ ಕಾರ್ಯ ಕೈಗೊಳ್ಳಬೇಕಾಗಿದೆ.