- ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಘೋಷಿಸಿ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯ
- ರೈತರ ಬೇಡಿಕೆಗಳಿಗೆ ಜಿಲ್ಲೆಯ ಎಲ್ಲಾ ಶಾಸಕರು ಬೆಂಬಲ ಸೂಚಿಸಿ ಸರ್ಕಾರದ ಗಮನಕ್ಕೆ ತರಬೇಕು
ಬೀದರ್ ಜಿಲ್ಲೆ ಕಳೆದ ಒಂದು ದಶಕದಿಂದ ಅತಿವೃಷ್ಟಿ – ಅನಾವೃಷ್ಟಿಗೆ ತುತ್ತಾಗಿದೆ. ಈ ವರ್ಷವೂ ಅನಾವೃಷ್ಟಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬಸವಕಲ್ಯಾಣ ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
“ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಎರಡೂ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಿಸಿ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. ನಮ್ಮ ಬೇಡಿಕೆಗಳಿಗೆ ಜಿಲ್ಲೆಯ ಎಲ್ಲಾ ಶಾಸಕರು ಬೆಂಬಲ ಸೂಚಿಸಿ ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಅರಣ್ಯ ಸಚಿವರು ಆಗಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳಿಂದ ಬೆಳೆ ಹಾನಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರಾದ ರುದ್ರಸ್ವಾಮಿ, ಖಾಸಿಂಸಾಬ್ ಅಲಿ, ವೀರಾರೆಡ್ಡಿ, ಮಹೇಶ ಬಂಡೆ, ಬಸವರಾಜ ಬಂಡೆ, ಕಾಶಪ್ಪ ಬಿರಾದರ, ರಾಜಕುಮಾರ ಬೇಲೂರ, ಇಕ್ರಾಮೋದ್ದೀನ್ ಖಾದಿವಾಲೆ ಸೇರಿದಂತೆ ಇತರರಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಲಘು ಭೂಕಂಪನ
ಬೇಡಿಕೆಗಳು:
1. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸೂಕ್ತ ಪರಿಹಾರ ನೀಡಬೇಕು.
2. ಐಪಿ ಸೆಟ್ ಗಳಿಗೆ ಏಳು ಗಂಟೆ ವಿದ್ಯುತ್ ಪೂರೈಸಬೇಕು.
3. ರೈತರ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ರಕ್ಷಣೆಗೆ ಶಾಶ್ವತ ಪರಿಹಾರ ಒದಗಿಸಿ ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು.