ಮುಂಗಾರು ಮಳೆ ಆಗದೆ ಬೆಳೆಗಳು ವಿನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ಶಂಕರಗೌಡ ಹಿರೇಗೌಡರ್ ಆಗ್ರಹಿಸಿದರು.
ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
“ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು. ಬಾಕಿ ಉಳಿದಿರುವ ಕಬ್ಬಿನ ಬಿಲ್ಲನ್ನು ತುರ್ತಾಗಿ ಮಂಜೂರು ಮಾಡಬೇಕು. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು. ಕನಿಷ್ಠ ಬೆಂಬಲ ಬೆಲೆ ಪ್ರತಿ ಟನ್ನಿಗೆ ₹5,000 ನಿಗದಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ; ರೈತ ಸಂಘ ಆಗ್ರಹ
“ಕೃಷಿ ಸಾಲ ವಸೂಲಾತಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಗುಣಾತ್ಮಕ ತ್ರೀ ಫೇಸ್ ವಿದ್ಯುತ್ ಶಕ್ತಿಯನ್ನು ಕನಿಷ್ಠ ಏಳು ಗಂಟೆಗಳ ಕಾಲ ನಿರಂತರ ಸರಬರಾಜು ಮಾಡಬೇಕು. ಒಣ ದ್ರಾಕ್ಷಿ ಬೆಲೆಯನ್ನು ಪ್ರತಿ ಕೆಜಿಗೆ ₹250-₹300 ನಿಗದಿಗೊಳಿಸಬೇಕು. ಆಲಮಟ್ಟಿಯ ಜಲಾಶಯದ ಮೂರನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಮುಖಂಡರುಗಳಾದ, ಬಾಪುಗೌಡ ಬಿರಾದಾರ್, ಸಿದ್ದರಾಯ್ ಜಂಗಮಶೆಟ್ಟಿ, ಗುರುಗೌಡ ಬಿರಾದಾರ್, ಗಿರೀಶ್ ಹಿರೇಮಠ್, ಶಿವಶರಣ ರೆಡ್ಡಿ ಅವರಾದಿ, ವಾಣಿ ಮುಳುವಾಡ, ಸರಸ್ವತಿ ಸೇರಿದಂತೆ ಇತರರು ಇದ್ದರು.