ದೇಶದಲ್ಲೇ ಪ್ರಪ್ರಥಮ ಬಾರಿಗೆ ಉದ್ಯಾನನಗರಿ ಬೆಂಗಳೂರಿನಲ್ಲಿ 500 ಕೆವಿಎ ಭೂಗತ ಪರಿವರ್ತಕ ಕೇಂದ್ರ ನಿರ್ಮಿಸಲಾಗಿದೆ. ಈ ಭೂಗತ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಮಂಗಳವಾರ ಉದ್ಘಾಟನೆ ಮಾಡಿದರು.
ಬೆಂಗಳೂರು ವಿದ್ಯುತ್ ಸರಬರಾಜು ಕೇಂದ್ರ (ಬೆಸ್ಕಾಂ) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಭಾಗಿತ್ವದಲ್ಲಿ ₹1.97 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ವಿಭಾಗದಲ್ಲಿ ಈ ಭೂಗತ ಪರಿವರ್ತಕ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್, “ಪಾದಚಾರಿ ಮಾರ್ಗಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಟಿಸಿಗಳ ಸ್ಥಳಾಂತರ ಜತೆಗೆ ಭೂಗತ ಟ್ರಾನ್ಸ್‌ಫಾರ್ಮರ್‌ಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಇದು ದೇಶದ ಮೊದಲ ಭೂಗತ ಪರಿವರ್ತಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ತಿಳಿಸಿದರು.
“ಮುಂದಿನ ದಿನಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಭೂಗತ ಪರಿವರ್ತಕ ಕೇಂದ್ರಗಳನ್ನು ನಿರ್ಮಿಸುವ ಕುರಿತು ಈಗಾಗಲೇ ಯೋಜನೆ ರೂಪಿಸಿಕೊಂಡಿದ್ದು, ಪ್ರತಿ ಭೂಗತ ಟ್ರಾನ್ಸ್‌ಫಾರ್ಮರ್‌ಗಳ ನಿರ್ಮಾಣಕ್ಕೆ ಸುಮಾರು ₹2 ಕೋಟಿ ವೆಚ್ಚವಾಗಲಿದೆ” ಎಂದು ತಿಳಿಸಿದರು.
“ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಭೂಗತ ಉಪ ಕೇಂದ್ರಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಮೇಲ್ಮಾರ್ಗದ ಹೆಚ್.ಟಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಪರಿವರ್ತಿಸುವ ಯೋಜನೆಯನ್ನು ಬೆಸ್ಕಾಂ ಈಗಾಗಲೇ ಕಾರ್ಯಗತಗೊಳಿಸಿದೆ. ನೆಲದಡಿಯಲ್ಲಿ ಕೇಬಲ್ ಹಾಗೂ ವಿದ್ಯುತ್ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಮಾತನಾಡಿ, “ಸಾರ್ವಜನಿಕರ ಸುರಕ್ಷತೆಯನ್ನು ಕೇಂದ್ರೀಕರಿಸಿ ಈ ಕಾಮಗಾರಿಯ ಕುರಿತು 2022ರಲ್ಲೇ ಇಂಧನ ಇಲಾಖೆಯೊಂದಿಗೆ ಚರ್ಚಿಸಲಾಗಿತ್ತು. ಅನುದಾನದ ಕೊರತೆ ಹಾಗೂ ನಾನಾ ಕಾರಣಗಳಿಂದ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಮಲ್ಲೇಶ್ವರಂನಲ್ಲಿ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ” ಎಂದರು.
ಏನಿದು ಭೂಗತ ವಿದ್ಯುತ್ ಪರಿವರ್ತಕ ಕೇಂದ್ರ?
ಜನರ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಭೂಮಿಯ ಕೆಳಭಾಗದಲ್ಲಿ ನಾಲ್ಕು ಕಡೆ ಕಾಂಕ್ರಿಟ್‌ನಿಂದ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಭೂಮಿಯ ಕೆಳಭಾಗದಲ್ಲಿ 30 ಎಂಎಂನ ಸಿಮೆಂಟ್ ಕಟ್ಟೆ ನಿರ್ಮಾಣ ಮಾಡಲಾಗುತ್ತದೆ. ಈ ಕಟ್ಟೆಗಳ ಮೇಲೆ ಪರಿವರ್ತಕಗಳನ್ನು ಇಡಲಾಗುತ್ತದೆ. ಇದೀಗ ಮಲ್ಲೇಶ್ವರಂನಲ್ಲಿ ಸ್ಥಾಪಿಸಲಾಗಿರುವ ಈ ಕೇಂದ್ರದಲ್ಲಿ ರಸ್ತೆಯ ಮೇಲ್ಮೈನಿಂದ 10 ಅಡಿ ಆಳದಲ್ಲಿ ಪರಿವರ್ತಕ ಅಳವಡಿಸಲಾಗಿದೆ.
ಬೆಸ್ಕಾಂನಿಂದ ವಿದ್ಯುತ್ ಸಂಬಂಧಿತ ಕಾಮಗಾರಿ ಹಾಗೂ ಬಿಬಿಎಂಪಿಯಿಂದ ಸಿವಿಲ್ ಕಾಮಗಾರಿಗಳನ್ನು ಮಾಡಿದೆ. 365 ದಿನಗಳಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಪರಿವರ್ತಕಗಳ ದುರಸ್ತಿ ಕಾರ್ಯದ ವೇಳೆಯೂ ಭೂಮಿಯ ಕೆಳಭಾಗ ಹೋಗಲು ವ್ಯವಸ್ಥೆ ಮಾಡಲಾಗಿದೆ.
ಈ ಕೇಂದ್ರದ ಮೇಲೆ ಪಾದಚಾರಿಗಳು ಸಂಚರಿಸುವುದರಿಂದ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಪರಿವರ್ತಕ ಸ್ಫೋಟವಾದಂತಹ ಘಟನೆ ಸಂಭವಿಸಿದರೂ ಕೇಂದ್ರದ ಮೇಲ್ಭಾಗದಲ್ಲಿ ಯಾವುದೇ ಅವಘಡ ಆಗುವುದಿಲ್ಲ. ವಿದ್ಯುತ್ ಅವಘಡ, ವಿದ್ಯುತ್ ವ್ಯತ್ಯಯ ತಡೆಯಲು ಸಹಕಾರಿಯಾಗಲಿದೆ.
ಈ ಸುದ್ದಿ ಓದಿದ್ದೀರಾ? ನ್ಯಾ. ಪಾಟೀಲ್ ನಾಗಲಿಂಗನಗೌಡರಿಂದ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ : ವಜಾಕ್ಕೆ ಆಗ್ರಹ
ಭೂಗತ ಟಿಸಿ ವಿವರ
ಬೆಸ್ಕಾಂ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಒಟ್ಟು ₹1.97 ಕೋಟಿ ವೆಚ್ಚದಲ್ಲಿ ಈ ಪರಿವರ್ತಕ ಕೇಂದ್ರವನ್ನು (ಟಿಸಿ) ಮಲ್ಲೇಶ್ವರಂನ 15ನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದಡಿಯಲ್ಲಿ ನಿರ್ಮಿಸಲಾಗಿದೆ. ಈ ಕೇಂದ್ರದ ಉದ್ದ 14 ಮೀಟರ್, ಅಗಲ 5 ಮೀಟರ್ ಹಾಗೂ ಆಳ 4 ಮೀಟರ್ ಇದೆ.
ಬೆಸ್ಕಾಂ ₹1.33 ಕೋಟಿ ವೆಚ್ಚದಲ್ಲಿ 500 ಕೆವಿಎ ತೈಲರಹಿತ ಪರಿವರ್ತಕ, 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯುನಿಟ್, 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ, 2 ಕೆವಿಎ ಯುಪಿಎಸ್, 1 ಹೆಚ್.ಪಿ ವಾಟರ್ ಪಂಪ್ (ಸ್ವಯಂಚಾಲಿತ), ಹವಾನಿಯಂತ್ರಣ ವ್ಯವಸ್ಥೆ (ಸ್ವಯಾಂಚಾಲಿತ), ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಭೂಗತ ಪರಿವರ್ತಕ ಕೇಂದ್ರಕ್ಕೆ ಅವಶ್ಯವಿರುವ ಎಲ್ಲ ವಿದ್ಯುತ್ ಉಪಕರಣಗಳನ್ನು ಅಳವಡಿಸಿದೆ. ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ ₹64 ಲಕ್ಷ ಅನುದಾನ ನೀಡಿದೆ.
ವಿತರಣ ಪರಿವರ್ತಕಗಳು, ರಿಂಗ್ ಮೇನ್ ಯೂನಿಟ್‌ಗಳು, ಫೀಡರ್ ಪಿಲ್ಲರ್ ಬಾಕ್ಸ್‌ಗಳು ಸೇರಿದಂತೆ ಸಂಪೂರ್ಣ ವ್ಯವಸ್ಥೆಯನ್ನು ಭೂಗತವಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವುದರ ವಿದ್ಯುತ್ ಪೂರೈಕೆ ನಷ್ಟವನ್ನು ತಗ್ಗಿಸಬಹುದಾಗಿದೆ. ಜತೆಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿದೆ.