ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಹವಾಮಾನ ಇಲಾಖೆ ತಜ್ಞ ಪ್ರಸಾದ್, “ಕಳೆದ ಎರಡು ದಿನ ಮಳೆಯಾಗಿರುವ ಕಾರಣ ಬೆಂಗಳೂರಿನಲ್ಲಿ ತಂಪು ವಾತಾವರಣವಿದೆ. ಈ ವಾತಾವರಣ ನಾಳೆಯವರೆಗೂ ಮುಂದುವರೆಯಲಿದೆ. ರಾಜ್ಯದಾದ್ಯಂತ ಒಂದು ವಾರದ ಕಾಲ ಮಳೆಯಾಗಲಿದೆ” ಎಂದು ತಿಳಿಸಿದರು.
“ಕರಾವಳಿ ಜಿಲ್ಲೆ ಮತ್ತು ಉತ್ತರ ಒಳನಾಡಿನಲ್ಲಿ ಒಂದು ವಾರಗಳ ಕಾಲ ಮಳೆಯಾಗಲಿದೆ. ಈ ಭಾಗಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕೊಪ್ಪಳ, ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿಯೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿಯೂ ಮಳೆಯಾಗುತ್ತಿರುವ ಕಾರಣ ನಗರದಲ್ಲಿ ತಂಪು ವಾತಾವರಣವಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗ, ಉತ್ತರ ಕನ್ನಡ ಜಿಲ್ಲೆಯ ಪೂರ್ವಭಾಗ, ಧಾರವಾಡ, ಹಾವೇರಿ, ಗದಗ, ವಿಜಯನಗರ, ಮೈಸೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ” ಎಂದರು.
ಮಂಗಳವಾರ ಮಳೆರಾಯನ ಆರ್ಭಟ
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಿಂದಲೇ ಗಾಳಿ ಸಹಿತ ನಗರದ ಹಲವೆಡೆ ಭಾರೀ ಮಳೆಯಾಗಿದೆ. ಸಂಜೆ ಜಿಟಿಜಿಟಿಯೊಂದಿಗೆ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿದಿದೆ.
ಈ ಸುದ್ದಿ ಓದಿದ್ದೀರಾ? ಕೃಷ್ಣ ಜನ್ಮಾಷ್ಟಮಿ | ಸೆ. 6 ಮತ್ತು 7ರಂದು ಬೆಂಗಳೂರಿನ ಕೆಲವೆಡೆ ಸಂಚಾರ ಬದಲಾವಣೆ; ಇಲ್ಲಿದೆ ನೋಡಿ
ಬೆಂಗಳೂರಿನ ಟೌನ್ಹಾಲ್, ಮೆಜೆಸ್ಟಿಕ್, ಕಾರ್ಪೊರೇಷನ್ ವೃತ್ತ, ಕೆ.ಆರ್.ಸರ್ಕಲ್, ಚಾಲುಕ್ಯ ಸರ್ಕಲ್, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಮಲ್ಲೇಶ್ವರಂ, ಗೋವಿಂದರಾಜ ನಗರ, ವಿಜಯನಗರ, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಪರದಾಡುವಂತಾಯಿತು. ಹಲವೆಡೆ ಟ್ರಾಫಿಕ್ ಜಾಮ್ ಆಗಿತ್ತು. ನಗರದ ರಸ್ತೆಗಳೆಲ್ಲ ಮಳೆ ನೀರಿನಿಂದ ಜಲಾವೃತವಾಗಿತ್ತು.