ಒಂದು ದೇಶ, ಒಂದು ಚುನಾವಣೆ | ‘ಒಂದುತನ’ದ ವ್ಯಸನ; ಒಕ್ಕೂಟ ವ್ಯವಸ್ಥೆಯ ವಿನಾಶ

Date:

ನಮ್ಮದು ಮೂಲತಃ ಒಕ್ಕೂಟ ವ್ಯವಸ್ಥೆಯೇ ವಿನಾ ಏಕೀಕೃತ ವ್ಯವಸ್ಥೆಯಲ್ಲ. ಸಂವಿಧಾನದಲ್ಲಿ ಇದನ್ನು ‘ರಾಜ್ಯಗಳ ಒಕ್ಕೂಟ’ ಎಂದು ಕರೆಯಲಾಗಿದೆ. ಉಪಖಂಡದೋಪಾದಿಯಲ್ಲಿರುವ ಭಾರತದಲ್ಲಿ ‘ಒಂದು’ ಎನ್ನುವುದು ಅಸಂಗತ-ಅಪ್ರಾಯೋಗಿಕ-ಅವ್ಯವಹಾರಿಕ. ಈ ಬಗೆಯ ‘ಒಂದು’ ಕ್ರಮಗಳು ಅತ್ಯಂತ ಸೂಕ್ಷ್ಯ ಸ್ಥಿತಿಯಲ್ಲಿರುವ ಪ್ರಜಾಪ್ರಭುತ್ವಕ್ಕೆ ವಿರೋಧಿಯಾದುದು

ನಮ್ಮ ದೇಶದಲ್ಲಿ 2014ರ ನಂತರ ಇಂತಹ ‘ಒಂದುತನ’ದ ಘೋಷಣೆಗಳ ಆಕ್ರಮಣ ತೀವ್ರತರನಾಗಿ ನಡೆಯುತ್ತಿದೆ. ‘ಒಂದು ದೇಶ: ಒಂದು ತೆರಿಗೆ’. ‘ಒಂದು ದೇಶ: ಒಂದು ಮಾರುಕಟ್ಟೆ’,‘ಒಂದು ದೇಶ: ಒಂದು ರೇಷನ್ ಕಾರ್ಡ್’ ಮುಂತಾದವುಗಳ ಗುಂಪಿಗೆ ಸೇರುವ ‘ಒಂದು ದೇಶ: ಒಂದು ಚುನಾವಣೆ’ ಪ್ರಣಾಳಿಕೆಯು ಅಂತಿಮವಾಗಿ ‘ಒಂದು ದೇಶ: ಒಬ್ಬ ನಾಯಕ’ಎನ್ನುವಲ್ಲಿಗೆ ಹೋಗಿ ನಿಲ್ಲುವ ಸಾಧ್ಯತೆಯಿದೆ.

ನಮ್ಮದು ಮೂಲತಃ ಒಕ್ಕೂಟ ವ್ಯವಸ್ಥೆಯೇ ವಿನಾ ಏಕೀಕೃತ ವ್ಯವಸ್ಥೆಯಲ್ಲ. ಸಂವಿಧಾನದಲ್ಲಿ ಇದನ್ನು ‘ರಾಜ್ಯಗಳ ಒಕ್ಕೂಟ’ ಎಂದು ಕರೆಯಲಾಗಿದೆ. ಉಪಖಂಡದೋಪಾದಿಯಲ್ಲಿರುವ ಭಾರತದಲ್ಲಿ ‘ಒಂದು’ ಎನ್ನುವುದು ಅಸಂಗತ-ಅಪ್ರಾಯೋಗಿಕ-ಅವ್ಯವಹಾರಿಕ. ಈ ಬಗೆಯ ‘ಒಂದು’ ಕ್ರಮಗಳು ಅತ್ಯಂತ ಸೂಕ್ಷ್ಯ ಸ್ಥಿತಿಯಲ್ಲಿರುವ ಪ್ರಜಾಪ್ರಭುತ್ವಕ್ಕೆ ವಿರೋಧಿಯಾದುದು. ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲ ರಚನೆ ಎಂದ ಕೇಶವಾನಂದ ಭಾರತಿ ಪ್ರಕರಣದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧವಾದುದು. ಇವೆಲ್ಲಕ್ಕೂ ‘ಒಂದು ದೇಶ: ಒಂದು ಚುನಾವಣೆ’ ಪ್ರಣಾಳಿಕೆಯು ಮಣ್ಣು ಸುರಿಯುತ್ತದೆ. ಇದೀಗ ‘ಒಂದು ದೇಶ: ಒಂದು ಚುನಾವಣೆ’ ಪ್ರಣಾಳಿಕೆಯನ್ನು ಅನುಷ್ಠಾನಗೊಳಿಸಲು ಒಂದು ಕಾರ್ಯತಂತ್ರವನ್ನು ರೂಪಿಸಿ ಕೊಡಲು ಒಕ್ಕೂಟ ಸರ್ಕಾರವು ಹಿಂದಿನ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ ‘ಒಂದು ದೇಶ: ಒಂದು ಚುನಾವಣೆ’ ಪ್ರಣಾಳಿಕೆಯ ವಿನಾಶಕಾರಿ ಸಂಗತಿಗಳನ್ನು ಗಮನಿಸುವುದು ಅಗತ್ಯ.

‘ಒಂದುತನ’ದ ವ್ಯಸನ
ಪ್ರಸ್ತುತ ಒಕ್ಕೂಟ ಸರ್ಕಾರವು ‘ಒಂದುತನ’ದ ವ್ಯವಸನದಿಂದ ನರಳುತ್ತಿದೆ. ಇಂದಿನ ಆಳುವ ಪಕ್ಷದ ಮಾರ್ಗದರ್ಶಿ ಸಂಸ್ಥೆಯಾದ ಆರ್‍ಎಸ್‍ಎಸ್ ಪ್ರತಿಪಾದಿಸಿಕೊಂಡು ಬರುತ್ತಿರುವ ಗೂಢ ಅಜೆಂಡಾದ ಒಂದು ಭಾಗ ಇದಾಗಿದೆ. ಇಂದಿನ ಆಳುವ ಪಕ್ಷದ ಮಾರ್ಗದರ್ಶಿ ಸಂಸ್ಥೆಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನದ ಬಗ್ಗೆ ನಂಬಿಕೆಯಿಲ್ಲ. ಈ ಬಗ್ಗೆ ಅದರ ಮುಖ್ಯಸ್ಥರೊಬ್ಬರ (ಅವರನ್ನು ಸರಸಂಘಚಾಲಕರು ಎಂದು ಕರೆಯುತ್ತಾರೆ) ಮಾತುಗಳು ಹೀಗಿವೆ:

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಮ್ಮದು ಒಂದು ದೇಶ, ಒಂದು ಸಮಾಜ ಮತ್ತು ಒಂದು ರಾಷ್ಟ್ರ. ಆದ್ದರಿಂದ ರಾಷ್ಟ್ರದ ಆಗುಹೋಗುಗಳು ಏಕಾತ್ಮಕ ರೀತಿಯ ಒಂದು ಸರ್ಕಾರದ ಮೂಲಕ ನಡೆಯಬೇಕಾದುದು ಸಹಜ ಕ್ರಮ”,ಮುಂದುವರಿದು “ನಮ್ಮದು ಸಮರಸವಾದ ಏಕರಾಷ್ಟ್ರತ್ವ ಎಂಬ ದೃಢ ನಂಬಿಕೆ ನಮ್ಮ ಈಗಿನ ಸಂವಿಧಾನವನ್ನು ರಚಿಸಿದವರ ಮನಸ್ಸಿನಲ್ಲಿಯೂ ಬೇರೂರಿಲಿಲ್ಲ ಎಂಬುದು ನಮ್ಮ ಒಕ್ಕೂಟ ಸ್ವರೂಪದ ಸಂವಿಧಾನ ರಚನೆಯಿಂದಲೇ ಸ್ಪಷ್ಟ. ಆದ್ದರಿಂದ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲ ಮಾತನ್ನು ಆಳವಾಗಿ ಹೂಳಬೇಕು. ವಿಭಜನಾತ್ಮಕ, ಪ್ರಾದೇಶಿಕ, ಜಾತೀಯ, ಭಾಷಾವಾರು ಮತ್ತು ಇದೇ ರೀತಿಯ ಇತರೆ ಸಂಗತಿಗಳ ಬಗ್ಗೆ ಹೆಮ್ಮಪಡುವುದರಿಂದ ನಮ್ಮ ಒಂದು ದೇಶ, ಒಂದು ಸರ್ಕಾರ. ಒಂದು ಶಾಸಕಾಂಗ, ಒಂದು ಕಾರ್ಯಾಂಗ ಎಂಬ ವ್ಯವಸ್ಥೆಗೆ ಇವೆಲ್ಲ ಹಾನಿಯುಂಟು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಸಂವಿಧಾನವನ್ನು ಪುನರ್ ಪರಿಶೀಲಿಸೋಣ, ಪುನರ್ ರೂಪಿಸೋಣ, ಆ ಮೂಲಕ ಏಕಾತ್ಮಕ ರೂಪದ ಸರ್ಕಾರವನ್ನು ಸ್ಥಾಪಿಸೋಣ”(ವಿವರಗಳಿಗೆ ನೋಡಿ: ದೇವನೂರ ಮಹಾದೇವ 2022. ಆರ್‍ಎಸ್‍ಎಸ್: ಆಳ-ಅಗಲ). ತಮ್ಮ ಮಾರ್ಗದರ್ಶಿ ಸಂಘಟನೆ ಎಂದು ಹೇಳಿಕೊಳ್ಳುವ ಇಂದಿನ ಒಕ್ಕೂಟ ಸರ್ಕಾರವು ಮೇಲಿನ ಸಂವಿಧಾನ-ವಿರೋಧಿ ಮತ್ತು ಒಕ್ಕೂಟತ್ವ-ವಿರೋಧಿ ಹೇಳಿಕೆಗಳನ್ನು ತಿರಸ್ಕರಿಸಿಲ್ಲ ಮತ್ತು ವಿರೋಧಿಸಿಲ್ಲ.

ಈ ಸಂವಿಧಾನ–ವಿರೋಧಿ ಮತ್ತು ಒಕ್ಕೂಟತ್ವ ವಿರೋಧಿ ಧೋರಣೆಯ ಮುಂದುವರಿದ ಭಾಗವೇ ಒಂದು ದೇಶ; ಒಂದು ಚುನಾವಣೆ ಪ್ರಣಾಳಿಕೆ. ಈ ಬಗೆಯ ಒಂದುತನದ ಪ್ರಯೋಗಗಳು ‘ಒಂದು ದೇಶ: ಒಂದು ತೆರಿಗೆ’ಎಂಬ ತೆರಿಗೆ ಸುಧಾರಣಾ ಕ್ರಮದಿಂದ ಆರಂಭವಾಯಿತು. ಆ ವ್ಯವಸ್ಥೆಯಲ್ಲಿ ಏನೆಲ್ಲ ಅನುಕೂಲಗಳಿದ್ದರೂ ಅದು ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಕಸಿದು ಕೊಂಡಿತು. ಈಗ ಸಂವಿಧಾನಾತ್ಮಕ ತೆರಿಗೆ ವಿಧಿಸುವ ಹಕ್ಕಿನಿಂದ ವಂಚಿತವಾದ ರಾಜ್ಯಗಳು ಸಂಪನ್ಮೂಲದ ಮೇಲಿನ ಅಧಿಕಾರವನ್ನು ಕಳೆದುಕೊಂಡು ತಮ್ಮದೇ ಆದ ಅಭಿವೃದ್ಧಿ ಕಾರ್ಯನೀತಿಯನ್ನು ಜಾರಿಗೊಳಿಸಲು ಹೆಣಗಾಡ ಬೇಕಾಗಿದೆ. ಒಂದು ದೇಶ-ಒಂದು ಮಾರುಕಟ್ಟೆ ಎಂಬದನ್ನು ಅರೆಬರೆ ರೀತಿಯಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು. ‘ಒಂದು ದೇಶ; ಒಂದು ಕೃಷಿ’ ಎಂಬುದನ್ನು ತನ್ನ ವ್ಯಾಪ್ತಿಯಲ್ಲಿ(ಒಕ್ಕೂಟ ಪಟ್ಟಿ) ಇಲ್ಲದಿದ್ದರೂ ಜಾರಿಗೊಳಿಸಲು ಹೋಗಿ (ಕೃಷಿ ಕಾಯಿದೆಗಳು)ಮೋದಿ ಸರ್ಕಾರವು ಕೈಸುಟ್ಟುಕೊಂಡಿತು. ನಮ್ಮ ದೇಶದ ಕೃಷಿಯ ಬಗ್ಗೆ ಅನಕ್ಷರಸ್ಥರು-ಅಜ್ಞಾನಿಗಳು ಮಾತ್ರ ಇಂತಹ ‘ಒಂದು ಕೃಷಿ’ ಬಗ್ಗೆ ಯೋಚಿಸಬಲ್ಲರು. ದೇಶದಮಟ್ಟದಲ್ಲಿರಲಿ, ಕರ್ನಾಟಕದಂತಹ ಒಂದು ರಾಜ್ಯದಲ್ಲಿಯೂ ‘ಒಂದು ಕೃಷಿ’ಯನ್ನು ಕಾಣಲು ಸಾಧ್ಯವಿಲ್ಲ. ಈ ಎಲ್ಲ ಕ್ರಮಗಳಿಂದ ರಾಕ್ಷಸೀಶಕ್ತಿಯನ್ನು ಪಡೆದುಕೊಂಡು ಸರ್ಕಾರ ಈಗ ರಾಷ್ಟ್ರಮಟ್ಟದಲ್ಲಿನ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ‘ಒಂದು ಚುನಾವಣೆ’ಯ ಪ್ರಣಾಳಿಕೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಸರ್ಕಾರವು ನೇಮಿಸಿರುವ ಸಮಿತಿಯ ನೇತೃತ್ವ ವಹಿಸಿರುವ ಮಾಜಿ ರಾಷ್ಟ್ರಪತಿಗಳು 2019ರಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ‘ಒಂದು ದೇಶ: ಒಂದು ಚುನಾವಣೆ’ಯು ‘ಅಭಿವೃದ್ಧಿ ಪ್ರಣೀತ ಪ್ರಸ್ತಾವ’ಎಂದು ಹೇಳಿ ದೇಶದ ಎಲ್ಲ ಪಕ್ಷಗಳು ಇದಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದ್ದರು. ಜಂಟಿ ಅಧಿವೇಶನದಲ್ಲಿನ ಮಾತುಗಳು:
“ಇಂದು ‘ಒಂದು ದೇಶ – ಏಕಕಾಲದಲ್ಲಿ ಚುನಾವಣೆ’ ಎನ್ನುವುದು ತುರ್ತಿನ ಕರೆಯಾಗಿದೆ. ಇದು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿ ದೇಶ ಬಾಂಧವರಿಗೆ ಅನುಕೂಲ ಒದಗಿಸುತ್ತದೆ. ಈ ಬಗೆಯ ವ್ಯವಸ್ಥೆಯು ಅಸ್ತಿತ್ವದಲ್ಲಿದ್ದಾಗ ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ವಿಚಾರ ಪ್ರಣಾಳಿಕೆಗನುಗುಣವಾಗಿ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ತಮ್ಮ ಸಾಮಥ್ರ್ಯಯನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಅಭಿವೃದ್ಧಿ ಪ್ರಣೀತ ಪ್ರಸ್ತಾವವಾದ ‘ಒಂದು ದೇಶ – ಏಕಕಾಲದಲ್ಲಿ ಚುನಾವಣೆ’ ಬಗ್ಗೆ ಸಂಸತ್ತಿನ ಎಲ್ಲ ಸದಸ್ಯರೂ ಗಂಭಿರವಾಗಿ ಯೋಚಿಸಬೇಕು ಎಂದು ಒತ್ತಾಯಿಸುತ್ತೇನೆ”(ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಅವರ ಭಾಷಣದ ಪೂರ್ಣ ಪಠ್ಯ. ಎನ್‍ಡಿಟಿವಿ. ಕಾಮ್. ಜೂನ್ 20, 2019. ಪ್ಯಾರ: 103).

ಒಂದು ದೇಶ-ಏಕಕಾಲದಲ್ಲಿ ಚುನಾವಣೆ ಎನ್ನುವುದು ಹೇಗೆ ಅಭಿವೃದ್ಧಿ ಪ್ರಣಾಳಿಕೆ ಎಂಬ ವಿವರಣೆ ಅಲ್ಲಿಲ್ಲ. ಈ ಬಗ್ಗೆ ಆಳುವ ಪಕ್ಷದ ವಕ್ತಾರರು ಮತ್ತು ಪ್ರಧಾನಮಂತ್ರಿ ಅವರು ನೀಡುತ್ತಿರುವ ವಿವರಣೆಗಳೂ ವಿಚಿತ್ರವಾಗಿವೆ. ಸಾರ್ವತ್ರಿಕ ಚುನಾವಣೆ ಮತ್ತು ರಾಜ್ಯಗಳಲ್ಲಿನ ಚುನಾವಣೆಗಳು ಬೇರೆ ಬೇರೆ ನಡೆದರೆ ಅದರಿಂದ ಅಪಾರ ಹಣದ ವೆಚ್ಚವಾಗುತ್ತದೆ. ಇದರ ಜೊತೆಯಲ್ಲಿ ಚುನಾವಣಾ ಸಾಮಗ್ರಿಗಳ ಹಾಗೂ ಆಡಳಿತಾತ್ಮಕ ವೆಚ್ಚಗಳು ಸೇರಿ ಇದೊಂದು ದುಬಾರಿ ವ್ಯವಸ್ಥೆಯಾಗುತ್ತದೆ. ಇದರಿಂದ ವರ್ಷವೆಲ್ಲ ಸದಾಕಾಲ ದೇಶದ ಒಂದಲ್ಲ ಒಂದು ಕಡೆ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಈ ಸಮಯದಲ್ಲಿ ಚುನಾವಣಾ ಸಂಹಿತೆಯು ಜಾರಿಯಾಗುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಳ್ಳುತ್ತವೆ. ಸರ್ಕಾರದ ನೀತಿ-ನಿರೂಪಣೆಗೆ ಪಾರ್ಶ್ವವಾಯು ಹೊಡೆತಂತಾಗುತ್ತದೆ(ಪಾಲಿಸಿ ಪ್ಯಾರಲಿಸಿಸ್). ಆದ್ದರಿಂದ ಲೋಕ ಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಅಭಿವೃದ್ದಿಯ ದೃಷ್ಟಿಯಿಂದ ಅಪೇಕ್ಷಣಿಯ ಎಂಬುದು ಆಳುವ ಪಕ್ಷದ ಪ್ರತಿಪಾದನೆ.

ಪ್ರಜಾತಂತ್ರ-ವಿರೋಧಿ ಕ್ರಮ
ರಾಜ್ಯಗಳ ಶಾಸಕಾಂಗಗಳ ಚುನಾವಣೆಗಳನ್ನು ಏಕೆ ಲೋಕಸಭಾ ಚುನಾವನೆಯ ಜೊತೆಯಲ್ಲಿ ಸಂಯೋಜಿಸಬೇಕು?, ಇಂತಹ ಒಂದುತನವು ಜನತಂತ್ರಕ್ಕೆ ದಕ್ಕೆಯುಂಟು ಮಾಡುತ್ತದೆ. ಉದಾ: ಒಂದು ರಾಜ್ಯದಲ್ಲಿ ಆಡಳಿತ ಪಕ್ಷವು ಸರ್ಕಾರವನ್ನು ವಿಸರ್ಜಿಸಿ ಹೊಸ ಚುನಾವನೆಗೆ ಶಿಫಾರಸ್ಸು ಮಾಡಬಹುದು ಅಥವಾ ಸರ್ಕಾರವೊಂದು ಬಹುಮತವನ್ನು ಕಳೆದುಕೊಂಡು ಬಿದ್ದು ಹೋಗಬಹುದು. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಬಹುಮತವನ್ನು ಸಾಧಿಸಲು ವಿರೋಧ ಪಕ್ಷವನ್ನು ಕೇಳಬಹದು ಇಲ್ಲವೇ ಹೊಸ ಚುನಾವಣೆಗೆ ಶಿಫಾರಸ್ಸು ಮಾಡಬಹುದು. ಇಂತಹ ಸಂದರ್ಭದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯವರೆವಿರಗೂ ರಾಜ್ಯಪಾಲರು ಒಕ್ಕೂಟದಲ್ಲಿನ ಸರ್ಕಾರದ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಬಹುದು. ಇದು ಜನತಂತ್ರ ವಿರೋಧಿಯಾಗದಿದ್ದರೆ ಮತ್ತಾವುದು ಜನತಂತ್ರ ವಿರೋಧಿಯಾಗುತ್ತದೆ?

ಈ ಸ್ಥಿತಿಯು ಒಕ್ಕೂಟ ಸರ್ಕಾರಕ್ಕೂ ಅನ್ವಯಿಸಬಹುದು. ಒಂದು ವೇಳೆ ಒಕ್ಕೂಟ ಸರ್ಕಾರವೊಂದು ಐದು ವರ್ಷಗಳ ಅವಧಿಯ ಮಧ್ಯದಲ್ಲಿ ಬಹುಮತ ಕಳೆದುಕೊಂಡು ಬಿದ್ದು ಹೋದರೆ ಒಂದೋ ವಿರೋಧ ಪಕ್ಷವು ಬಹುಮತ ಸಾಧಿಸಿ ಸರ್ಕಾರ ರಚಿಸಬಹುದು ಇಲ್ಲವೇ ಚುನಾವಣೆಗೆ ಹೋಗಬೇಕಾಗಬಹುದು. ಏಕಕಾಲದ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಸಭೆಯ ಜೀವಿತಾವಧಿ ಐದು ವರ್ಷಗಳು ಮುಗಿಯುವವರೆಗೆ ದೇಶದಲ್ಲಿ ರಾಷ್ಟ್ರಪತಿ ಆಡಳಿತವಿರಬೇಕೇನು? ಇದು ಪ್ರಜಾಪ್ರಭುತ್ವ ಹೇಗಾದೀತು? ಪ್ರಜಾಪ್ರಭುತ್ವದ ಪ್ರಾತಿನಿಧೀಕರಣವೇ ಇಲ್ಲಿ ಇಲ್ಲದಂತಾಗುತ್ತದೆ.

ಚುನಾವಣಾ ವೆಚ್ಚ ಮತ್ತು ಜನತಂತ್ರ
ಒಂದು ದೇಶ: ಒಂದು ಚುನಾವಣೆಗೆ ನೀಡುತ್ತಿರುವ ವಿಪರೀತ ವೆಚ್ಚದ ವಾದದಲ್ಲಿ ಹುರುಳಿಲ್ಲ. ಒಂದು ಅಂದಾಜಿನ ಪ್ರಕಾರ 2019ರ ಚುನಾವಣೆಯಲ್ಲಿ ಚುನಾವಣಾ ಆಯೋಗ ಮಾಡಿದ ವೆಚ್ಚ ಅಂದಾಜು ರೂ. 10,000 ಕೋಟಿ ಎನ್ನಲಾಗಿದೆ. ಇದು 2018-19ರ ಜಿಡಿಪಿಯಾದ ರೂ. 186.97 ಲಕ್ಷ ಕೋಟಿಯಲ್ಲಿ ಶೇ. 1ಕ್ಕಿಂತ ಕಡಿಮೆ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಅದರ ಜಿಡಿಪಿಯ ಶೇ. 0.5 ಅಥವಾ 0.6 ರಷ್ಟನ್ನು ಜನತಂತ್ರದ ಭದ್ರತೆಗಾಗಿ ವಾರ್ಷಿಕ ಚುನಾವಣೆಗೆ ವ್ಯಯಿಸುವುದು ಹೇಗೆ ದುಂದು ವೆಚ್ಚವಾಗುತ್ತದೆ? ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ವರದಿಯ ಪ್ರಕಾರ 2019ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕೆ, ಮತದಾರರಿಗೆ ನೇರವಾಗಿ ನೀಡಿದ ರುಷುವತ್ತಿಗೆ ಮಾಡಿದ ಅಂದಾಜು ವೆಚ್ಚ ರೂ. 30,000 ಕೋಟಿ. ಏಕಕಾಲದ ಚುನಾವಣೆಗೂ ಅಪಾರ ವೆಚ್ಚವಾಗುತ್ತದೆ. ಆಗಲೂ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಮತ್ತು ಮತದಾರರನ್ನು ಸೆಳೆಯಲು ಹಣ ವೆಚ್ಚ ಮಾಡುತ್ತವೆ. ದುಂದು ವೆಚ್ಚ ಎಂಬುದು ವಿಕೃತವಾದ ವಾದವಾಗಿದೆ. ಜನತಂತ್ರವನ್ನು ಬಲಪಡಿಸುವುದಕ್ಕಾಗಿ ಮತ್ತು ಅದನ್ನು ಆರೋಗ್ಯಕರವಾಗಿ ಕಾಪಿಟ್ಟುಕೊಳ್ಳಲು ಮಾಡುವ ವೆಚ್ಚವನ್ನು ‘ದುಂದು’ಎಂದು ಕರೆಯುವುದು ಒಂದು ಅನೈತಿಕ ನಿಲುವು.

ಒಕ್ಕೂಟ ವ್ಯವಸ್ಥೆಯ ವಿನಾಶ
ಏಕಕಾಲದ ಚುನಾವಣಾ ಪ್ರಣಾಳಿಕೆಯು ಒಕ್ಕೂಟ ವ್ಯವಸ್ಥೆಯನ್ನು ಅಪ್ರಸ್ತುತ ಮಾಡಿಬಿಡುತ್ತದೆ. ಒಂದು ಚುನಾವಣೆಯ ದೊಡ್ಡ ಅಪಾಯ ಇದಾಗಿದೆ. ಏಕಕಾಲದ ಚುನಾವಣೆಯು ರಾಷ್ಟ್ರೀಯ ಪಕ್ಷಗಳಿಗೆ ಬೃಹತ್ ಅವಕಾಶ ನೀಡುತ್ತದೆ. ಒಕ್ಕೂಟ ಮತ್ತು ಬಹಳಷ್ಟು ರಾಜ್ಯಗಳಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅದಕ್ಕೆ ಏಕಕಾಲದ ಚುನಾವಣಾ ಪ್ರಣಾಳಿಕೆಯು ಹೆಚ್ಚು ಅನುಕೂಲ ಒದಗಿಸುತ್ತದೆ. ದೊಡ್ಡ ಪ್ರಮಾಣದ ವ್ಯವಸ್ಥೆ(ಎಕನಾಮೀಸ್ ಆಫ್ ಸ್ಕೇಲ್) ಒದಗಿಸುವ ಎಲ್ಲ ಲಾಭಗಳು ಇಲ್ಲಿ ಬೃಹತ್ ಪಕ್ಷಗಳಿಗೆ ದೊರೆಯುತ್ತವೆ. ಸಿಎಸ್‍ಡಿಎಸ್ ನಡೆಸಿರುವ ಚುನಾವಣಾ ಅಧ್ಯಯನಗಳು ಮತ್ತು ಇತರೆ ಅಧ್ಯಯನಗಳು ತೋರಿಸುತ್ತಿರುವಂತೆ 2009 ಮತ್ತು 2014ರ ಚುನಾವಣೆಗಳಲ್ಲಿ ಅರ್ಧದಷ್ಟು ಮತದಾರರು ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರಗಳಿಗೆ ಸಮನಾದ ಪ್ರಾಮುಖ್ಯತೆಯನ್ನು ಮತದಾನದಲ್ಲಿ ನೀಡಿದ್ದರು ಎನ್ನಲಾಗಿದೆ. ಐಡಿಎಪ್‍ಸಿ ಸಂಸ್ಥೆಯ ಅಧ್ಯಯನದ ಪ್ರಕಾರ ಶೇ. 77 ರಷ್ಟು ಮತದಾರರು ರಾಜ್ಯಮಟ್ಟದಲ್ಲಿ ಮತ್ತು ಲೋಕಸಭೆಯಲ್ಲಿ ಗೆಲ್ಲುವ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಅಂದರೆ ಏಕಕಾಲದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮಹತ್ವ ದೊರೆತು ರಾಜ್ಯಗಳು ನಗಣ್ಯವಾಗಿ ಬಿಡುತ್ತವೆ. ಪ್ರಾದೇಶಿಕ ಪಕ್ಷಗಳು ನಿರ್ನಾಮವಾಗಿ ಬಿಡುತ್ತವೆ. ಸಾರ್ವತ್ರಿಕ ಚುನಾವಣೆಗೆ ಮೊದಲೇ ರಾಜ್ಯದಲ್ಲಿ ಸರ್ಕಾರ ಬಿದ್ದು ಹೋದರೆ ಅಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆವರೆಗೆ ಒಕ್ಕೂಟ ಸರ್ಕಾರದ ಮಾರ್ಗದರ್ಶನದಲ್ಲಿ ರಾಷ್ಟ್ರಪತಿ ಆಡಳಿತ ಅನಿವಾರ್ಯವಾಗುತ್ತದೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಹೇಗೆ ಕರೆಯುವುದು?

ಕೇಶವಾನಂದ ಭಾರತಿ

ಎರಡನೆಯದಾಗಿ ಸರ್ವೋಚ್ಛ ನ್ಯಾಯಾಲಯದ ಸಾಂವಿಧಾನ ಪೀಠವು 1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಒಕ್ಕೂಟ ವ್ಯವಸ್ಥೆಯು ನಮ್ಮ ಸಂವಿಧಾನದ ಮೂಲ ರಚನೆ ಮತ್ತು ಇದನ್ನು ತಿದ್ದುಪಡಿ ಮಾಡಲಾಗದು ಎಂದು ಘೋಷಿಸಿದೆ. ಏಕಕಾಲದ ಚುನಾವಣಾ ಪ್ರಣಾಳಿಕೆಯನ್ನು ಜಾರಿಗೆ ತರಲು ಸಂವಿಧಾನದ ಐದು ಪರಿಚ್ಛೇದಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ(ಪರಿಚ್ಛೇದ 83 ಮತ್ತು 172: ಅನುಕ್ರವಾಗಿ ಲೋಕ ಸಭೆ ಮತ್ತು ಶಾಸನ ಸಭೆಗಳ ಅವಧಿ ಐದು ವರ್ಷ ಎಂಬುದನ್ನು ಶಾಸನಬದ್ದಗೊಳಿಸುತ್ತವೆ. ಪರಿಚ್ಛೇದ 85 ಮತ್ತು 174: ಇವು ಲೋಕಸಭೆ ಮತ್ತು ವಿಧಾನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿವೆ. ಪರಿಚ್ಛೇದ 356: ವಿಧಾನಸಭೆಯನ್ನು ರದ್ದುಪಡಿಸಿ ರಾಷ್ಟ್ರಪತಿ ಆಡಳಿತ ಹೇರುವ ನಿಯಮ). ಈ ಪರಿಚ್ಛೇದಗಳಿಗೆ ತಿದ್ದುಪಡಿ ತಂದರೆ ಅವು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುತ್ತದೆ. ಆದ್ದರಿಂದ ಏಕಕಾಲದ ಚುನಾವಣೆಯು ಸಂವಿಧಾನ ವಿರೋಧಿ ಕ್ರಮ ಮತ್ತು ಒಕ್ಕೂಟ ವಿರೋಧಿ ಕ್ರಮ. ಇಂದಿನ ಒಕ್ಕೂಟ ಸರ್ಕಾರ ಮತ್ತು ಪ್ರಧಾನಿ ಹೇಳುವ ‘ಸಹಕಾರವಾದಿ ಒಕ್ಕೂಟ’ಎನ್ನುವುದು ಕೇವಲ ಘೋಷಣೆಯಾಗಿ ಕೇಂದ್ರೀಕೃತ ಒಕ್ಕೂಟ ಕ್ರಮಗಳನ್ನು ಅದು ಆಚರಣೆಯಲ್ಲಿ ತರಲಾಗುತ್ತಿದೆ. ಈ ದಿಕ್ಕಿನಲ್ಲಿ ಬಹುದೊಡ್ಡ ಕ್ರಮ ಏಕಕಾಲದ ಚುನಾವಣೆ. ನಮ್ಮದು ಏಕಾತ್ಮಕ ರಾಜಕೀಯ ವ್ಯವಸ್ಥೆಯಲ್ಲ. ಇದು ಯೂನಿಯನ್ ಆಫ್‌ ಸ್ಟೇಟ್ಸ್. ಸಂವಿಧಾನದ ಈ ಭಾವನೆಗೆ ಏಕಕಾಲದ ಚುನಾವನೆ ದಕ್ಕೆ ತರುತ್ತದೆ.

ಸ್ಥಳೀಯ ಸರ್ಕಾರಗಳ ಚುನಾವಣೆ
ಇಂದು ನಮ್ಮ ದೇಶದ ಒಕ್ಕೂಟವು ಮೂರು ಹಂತಗಳ ವ್ಯವಸ್ಥೆಯಾಗಿದೆ. ಅವು ಯಾವುದು ಎಂದರೆ (1). ಒಕ್ಕೂಟ ಸರ್ಕಾರ, (2). ರಾಜ್ಯಗಳ ಸರ್ಕಾರಗಳು ಮತ್ತು (3) ಸ್ಥಳೀಯ ಸರ್ಕಾರಗಳು. ಏಕಕಾಲದ ಚುನಾವಣೆಯು ಒಕ್ಕೂಟ ಮತ್ತು ರಾಜ್ಯಗಳ ಚುನಾವಣೆಗಳಲ್ಲದೆ ಸ್ಥಳೀಯ ಸರ್ಕಾರಗಳ(ಗ್ರಾಮೀನ ಸ್ಥಳೀಯ ಮತ್ತು ನಗರ ಸ್ಥಳೀಯ ಸರ್ಕಾರಗಳು) ಚುನಾವಣೆಯನ್ನು ಒಳಗೊಳ್ಳುತ್ತದೆ. ಗ್ರಾಮೀಣ ಮತ್ತು ನಗರ ಸ್ಥಳೀಯ ಸರ್ಕಾರಗಳು ಎನ್ನುವುದು ಒಂದು ಬೃಹತ್ ವ್ಯವಸ್ಥೆ. ಇಲ್ಲಿ 2.4 ಲಕ್ಷ ಗ್ರಾಮ ಪಂಚಾಯತಿಗಳಿವೆ, 6672 ತಾಲ್ಲೂಕು ಪಂಚಾಯತಿಗಳಿವೆ ಮತ್ತು 500ಕ್ಕೂ ಮಿಕ್ಕು ಜಿಲ್ಲಾ ಪಂಚಾಯಿತಗಳಿಗೆ. ಈ ವ್ಯವಸ್ಥೆಯಲ್ಲಿ 30 ಲಕ್ಷ ಚುನಾಯಿತ ಪ್ರತಿನಿಧಿಗಳಿದ್ದಾರೆ. ಇವರಲ್ಲಿ 13 ಲಕ್ಷ ಮಹಿಳಾ ಚುನಾಯಿತ ಜನಪ್ರತಿನಿಧಿಗಳಿದ್ದಾರೆ. ಇದೇ ರೀತಿಯಲ್ಲಿ ನಗರ ಸ್ಥಳಿಯ ಸರ್ಕಾರದಲ್ಲಿ 107 ಮುನಿಸಿಪಲ್ ಕಾರ್ಪೋರೇಷನ್‌ಗಳು, 1443 ಮುನಿಸಿಪಾಲಿಟಿಗಳು ಮತ್ತು 2019 ಪಟ್ಟಣ ಪಂಚಾಯತಿಗಳಿವೆ. ಒಕ್ಕೂಟ ಮತ್ತು ರಾಜ್ಯಗಳ ಚುನಾವಣೆಯನ್ನು ಭಾರತೀಯ ಚುನಾವಣಾ ಆಯೋಗ ನಡೆಸಿದರೆ ಸ್ಥಳೀಯ ಸರ್ಕಾರಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗಗಳು ನಡೆಸುತ್ತವೆ. ಏಕಕಾಲದ ಚುನಾವಣೆಯಲ್ಲಿ ರಾಜ್ಯಗಲು ಚುನಾವಣಾ ಆಯೋಗಗಳು ಅಪ್ರಸ್ತುತವಾಗುತ್ತವೆ.

ಇದನ್ನು ಓದಿ ಏನಿದು ‘ಒಂದು ರಾಷ್ಟ್ರ, ಒಂದು ಚುನಾವಣೆ?’ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವೇನು?

ಈ ಮೂರು ಘಟಕಗಳನ್ನು ಒಳಗೊಂಡಂತೆ ಉಪಖಂಡದೋಪಾದಿ ಭಾರತದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದು ದುಸ್ಸಾದ್ಯವಾದ ಕೆಲಸ. ಇದು ಅವ್ಯವಹಾರಿಕ ಮತ್ತು ಅಪ್ರಾಯೋಗಿಕ. ಇದು ಮುಚ್ಚಿಟ್ಟಂತೆ ಏಕಚಕ್ರಾಧಿಪತ್ಯಕ್ಕೆ ಅವಕಾಶ ಮಾಡಿಕೊಡುತ್ತದೆ. ಚರಿತ್ರೆಯಲ್ಲಿ ಯಾವತ್ತೂ ಭಾರತವು ಏಕಚಕ್ರಾಧಿಪತ್ಯದ ಆಳ್ವಿಕೆಯಲ್ಲಿರಲಿಲ್ಲ. ‘ಒಂದು ದೇಸ: ಒಂದು ಚುನಾವಣೆ’ ಪ್ರಣಾಳಿಕೆಯು ರಾಜ್ಯಗಳನ್ನು ಮತ್ತು ಸ್ಥಳಿಯ ಸರ್ಕಾರ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸುತ್ತದೆ ಮತ್ತು ಕೀಳಾಗಿಸುತ್ತದೆ. ಈ ಪ್ರಣಾಳಿಕೆಯಲ್ಲಿ ಏನೆಲ್ಲ ಅನುಕೂಲಗಳಿವೆ ಎಂದು ಪಟ್ಟಿ ಮಾಡಿದರೂ ಇದು ಭಾರತದ ಐಕ್ಯತೆಯನ್ನು ಮತ್ತು ಸಮಗ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಈ ಕ್ರಮವು ಭಾರತೀಯ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಸ್ಥೆಯ ಜೀವಾಳವಾಗಿರುವ “ಬಹುತ್ವ”ಕ್ಕೆ ಮಾರಕವಾಗುತ್ತದೆ. ಆಳುವ ಪಕ್ಷವು ಹೇಳುತ್ತಿರುವಂತೆ ಇದರ ಅನುಕೂಲಗಳು ಹತ್ತಿದ್ದರೆ ಅನಾನುಕೂಲಗಳು, ಆಪಾಯಗಳು, ಆತಂಕಗಳು ನೂರಾರು. ಇಲ್ಲಿ ಅನುಕೂಲಗಳು-ಅನಾನುಕೂಲಗಳನ್ನು ನೋಡುವ ವುದ್ಯಮಾನ ಇದಲ್ಲ. ಭಾರತವನ್ನು ಬಾರತವಾಗಿ ಉಳಿಸಿಕೊಳ್ಳುವ ವಿದ್ಯಮಾನದ ನೆಲೆಯಿಂದ ಇದನ್ನು ನೋಡಬೇಕಾಗಿದೆ.

ಟಿ ಆರ್ ಚಂದ್ರಶೇಖರ
+ posts

ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಟಿ ಆರ್ ಚಂದ್ರಶೇಖರ
ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಲೋಕನ | ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’; ದೇಶದ ಆರ್ಥಿಕತೆಯ ನಿಜ ದರ್ಶನ ಮಾಡಿಸುವ ಕೃತಿ

ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...

ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು...

ಸಾಮಾನ್ಯರ ಭಾರತವು ಒಳ್ಳೆಯ ದಿನಗಳನ್ನು ಕಂಡಿದೆಯೇ?

ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ....