- ಜಾತಿ ತಾರತಮ್ಯದ ಆಚರಣೆ ಬಗ್ಗೆ ಯಾವುದಾದರೂ ಉದಾಹರಣೆ ನೀಡಬಹುದೇ ಎಂದು ಕೇಳಿದ ಪತ್ರಕರ್ತ
- ಕೆಳಜಾತಿಯ ಕಾರಣಕ್ಕೆ ದ್ರೋಣಾಚಾರ್ಯರು ಏಕಲವ್ಯನಿಗೆ ಬಿಲ್ವಿದ್ಯೆ ಕಲಿಸಲಿಲ್ಲ ಎಂದ ಉದಯನಿಧಿ ಸ್ಟಾಲಿನ್
ಸನಾತನ ಧರ್ಮ ನಿರ್ಮೂಲನೆ ಹೇಳಿಕೆಯು ದೇಶಾದ್ಯಂತ ಬಿಜೆಪಿ ಮತ್ತು ಸಂಘಪರಿವಾರವನ್ನು ಕೆರಳುವಂತೆ ಮಾಡಿರುವ ಮಧ್ಯೆಯೇ ಮತ್ತೊಮ್ಮೆ ಸ್ಪಷ್ಟವಾಗಿ ತನ್ನ ನಿಲುವನ್ನು ಪ್ರಕಟಿಸಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್, “ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹೊಸ ಸಂಸತ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದು ಜಾತಿ ತಾರತಮ್ಯ ಅತ್ಯುತ್ತಮ ಉದಾಹರಣೆ” ಎಂದು ಹೇಳಿದ್ದಾರೆ.
ಚೆನ್ನೈನಲ್ಲಿ ಸನಾತನ ಧರ್ಮದ ಜಾತಿ ತಾರತಮ್ಯ ಆಚರಣೆಯ ಬಗ್ಗೆ ನೀವು ಯಾವುದಾದರೂ ಉದಾಹರಣೆಯನ್ನು ನೀಡಬಹುದೇ ಎಂದು ಪತ್ರಕರ್ತನೋರ್ವ ಕೇಳಿದಾಗ ಉತ್ತರಿಸಿರುವ ತಮಿಳುನಾಡು ಕ್ರೀಡಾ ಸಚಿವ, “ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿಲ್ಲ. ಇದು ಪ್ರಸ್ತುತ ಅತ್ಯುತ್ತಮವಾದ ಉದಾಹರಣೆಯಾಗಿದೆ” ಎಂದು ಹೇಳಿದರು.
ನೀವೇನಾದರೂ ಕ್ಷಮೆ ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಉದಯನಿಧಿ ಸ್ಟಾಲಿನ್, ಯಾರಾದರೂ ಕ್ಷಮೆ ಕೇಳಲು ಹೇಳಿದ್ದಾರಾ? ಇಲ್ಲ, ನಾನು ಕ್ಷಮೆ ಕೇಳುವ ಮಾತೇ ಇಲ್ಲ, ‘ಸಾರಿ’. ಈಗ ಹೇಳಿದ ‘ಸಾರಿ ಅವರಿಗಾಗಿ ಅಲ್ಲ. ಇದು ನಿಮ್ಮ (ವರದಿಗಾರರ) ಪ್ರಶ್ನೆಗೆ” ಎಂದು ‘ಸನಾತನ ಧರ್ಮ’ ಕುರಿತು ಕ್ಷಮೆಯಾಚಿಸುವ ಬೇಡಿಕೆಗಳ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಂಗಳವಾರ ಶಿಕ್ಷಕರ ದಿನಾಚರಣೆಯ ಸಂದೇಶದಲ್ಲಿ ಮಾತನಾಡಿದ್ದ ಕ್ರೀಡಾ ಸಚಿವ, “ಏಕಲವ್ಯ ಕೆಳಜಾತಿಯವನೆಂಬ ಕಾರಣಕ್ಕೆ ದ್ರೋಣಾಚಾರ್ಯರು ಆತನಿಗೆ ಬಿಲ್ವಿದ್ಯೆ ಕಲಿಸಲು ನಿರಾಕರಿಸಿದರು. ಆದರೆ ಆತ ತನ್ನ ಸ್ವಂತ ಪರಿಶ್ರಮದಿಂದ ಬಿಲ್ಲುಗಾರಿಕೆಯನ್ನು ಕಲಿತದ್ದು ಮಾತ್ರವಲ್ಲದೇ, ನುರಿತ ಬಿಲ್ಲುಗಾರನಾದನು. ದ್ರೋಣಾಚಾರ್ಯರ ಶಿಷ್ಯ ಅರ್ಜುನನಿಗಿಂತಲೂ ಉತ್ತಮನಾದನು. ಇದನ್ನು ತಿಳಿದ ನಂತರ ಕೋಪಗೊಂಡ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ನೀಡಬೇಕೆಂದು ಒತ್ತಾಯಿಸಿದರು. ಏಕಲವ್ಯ ಅದನ್ನು ಪಾಲಿಸಿದನು, ಇದರಿಂದಾಗಿ ಅವನು ಬಿಲ್ಲುಗಾರಿಕೆ ಮಾಡಲು ಅಸಮರ್ಥನಾದನು” ಎಂದು ಮಹಾಭಾರತದಲ್ಲಾದ ತಾರತಮ್ಯವನ್ನು ಉದಯನಿಧಿ ಉಲ್ಲೇಖಿಸಿದ್ದರು.
“ನಮ್ಮ ದ್ರಾವಿಡ ಚಳವಳಿಯ ಶಿಕ್ಷಕರು ವಿದ್ಯಾರ್ಥಿಗಳ ಹೆಬ್ಬೆರಳು ಕೇಳದೆ ಶಿಕ್ಷಣವನ್ನು ಬೋಧಿಸುವ ಮೂಲಕ ಮಕ್ಕಳೊಂದಿಗಿನ ಬಾಂಧವ್ಯವನ್ನು ಶಾಶ್ವತವಾಗಿ ಮುಂದುವರಿಸುತ್ತಿದ್ದಾರೆ” ಎಂದು ಉದಯನಿಧಿ ಹೇಳಿಕೆ ನೀಡಿದ್ದರು.