ತಂದೆ ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ದೆಶದ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟದ ಶಿಕ್ಷಣ ನೀಡಿ ಅವರ ವ್ಯಕ್ತಿತ್ವ ರೂಪಿಸುವುದರೊಂದಿಗೆ ದೇಶದ ಆಸ್ತಿಯನ್ನಾಗಿಸುವುದು ಮಕ್ಕಳ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಡಾ. ಎಚ್.ಕೆ ಪಾಟೀಲ ತಿಳಿಸಿದರು.
ಗದಗ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. “ಭಾರತದ ಮೊದಲ ಉಪರಾಷ್ಟ್ರಪತಿ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರು ತಮ್ಮ ಜನ್ಮ ದಿನಾಚರಣೆಯನ್ನೇ ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಲು ಆದೇಶಿಸಿದರು. ಡಾ. ರಾಧಾಕೃಷ್ಣನ್‍ರವರು ಅತ್ಯುತ್ತಮ, ಆದರ್ಶ ಶಿಕ್ಷಕರಾಗಿದ್ದು ಶಿಕ್ಷಣದ ಬಗ್ಗೆ ಪರಿಕಲ್ಪನೆ ಹೇಗಿರಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು. ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಉನ್ನತ ಸ್ಥಾನವನ್ನು ಪಡೆದಿದ್ದರು. ಅಂತಹವರ ಸ್ಮರಣೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ” ಎಂದರು.
“ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವೆ ಭಾವನಾತ್ಮಕ ಸಂಬಂಧವಿರಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವದಕ್ಕೋಸ್ಕರ ಸರ್ಕಾರವು ಅಲ್ಪಸಂಖ್ಯಾತರ, ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಹಾಸ್ಟೆಲ್ ಸೌಲಭ್ಯ ಒದಗಿಸಿ ಅಲ್ಲಿ ಗುಣಮಟ್ಟದ ಊಟ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಕಂಡುಬಂದರೆ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆಯೊಂದಿಗೆ ಶಿಕ್ಷಕರ ಗುಣಮಟ್ಟದ ಅಧ್ಯಯನ ಅತ್ಯವಶ್ಯಕವಾಗಿದೆ. ಗದಗ ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರಿಗಾಗಿ ಒಂದು ಪ್ರತ್ಯೇಕ ಗ್ರಂಥಾಲಯ ಸ್ಥಾಪನೆ ಕ್ರಮ ಕೈಗೊಳ್ಳಬೇಕು. ಮಕ್ಕಳಲ್ಲಿನ ಮೊಬೈಲ್ ಗೀಳು ಹೋಗಲಾಡಿಸಿ ಅವರಲ್ಲಿ ಮನೋಬಲ ಹೆಚ್ಚಿಸುವ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ. ಶಿಕ್ಷಕರಿಗೆ ಯಾವುದೇ ಶೋಷಣೆಯಾಗಬಾರದು ಹಾಗೂ ಶಿಕ್ಷಕರನ್ನು ಗೌರವಿಸುವ ಕೆಲಸವಾಗಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ನುಡಿದರು.
ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಎಸ್. ಅರಸನಾಳ ಮಾತನಾಡಿ, “ಡಾ. ರಾಧಾಕೃಷ್ಣನ್ ಅವರು ಶ್ರೇಷ್ಠ ತತ್ವಜ್ಞಾನಿಯಾಗಿದ್ದರು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಶಿಕ್ಷಣ ಮತ್ತು ಶಿಕ್ಷಕ ಹೇಗಿರಬೇಕು ಎಂಬ ಕಲ್ಪನೆ ಇಟ್ಟುಕೊಂಡಂತಹ ರಾಷ್ಟ್ರದ ಪ್ರಥಮ ಉಪರಾಷ್ಟ್ರಪತಿ ಯಾಗಿದ್ದರು. ಗುರು ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು ಶಿಕ್ಷಣ ಮತ್ತು ಶಿಕ್ಷಕ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಣ ಕ್ಷೇತ್ರ ಒಂದು ಉದ್ಯಮವಾಗಿ ಪರಿವರ್ತನೆ ಹೊಂದದೇ ರಾಧಾಕೃಷ್ಣನ್ ರವರ ಪರಿಕಲ್ಪನೆಯಂತೆ ಶಿಕ್ಷಣವು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಬುರಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಕಪೋತಗಿರಿ ನಂದಿವೇರಿ, ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರವಿ ಗುಂಜೀಕರ್ , ಡಯಟ್ ದ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಎಚ್.ಎಸ್. ಜಿನಗಿ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ಎಸ್.ಎನ್.ಬಳ್ಳಾರಿ, ವಿವೇಕಾನಂದಗೌಡ ಪಾಟೀಲ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಪದಾಧಿಕಾರಿಗಳು , ಸದಸ್ಯರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು , ಸದಸ್ಯರು, ಶಿಕ್ಷಕ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಜಿಲ್ಲೆಯಲ್ಲಿನ ಶಾಲಾ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.