“ಮಾಸ್ತಿಯವರು ಯಾವಾಗಲೂ ಹೇಳುತ್ತಿದ್ದ ಮಾತೆಂದರೆ ಸಾತ್ವಿಕ ಶಕ್ತಿ ಸುಮ್ಮನಿದ್ದರೆ, ತಾಮಸ ಶಕ್ತಿ ವಿಜೃಂಭಿಸುತ್ತದೆ. ಆಧುನಿಕ ಶಿಕ್ಷಣ ಪದ್ಧತಿ ನಮ್ಮ ಪರಿಸರವನ್ನು ಮಾತ್ರವಲ್ಲ ಅಂತರಂಗವನ್ನು ಕಲುಷಿತಗೊಳಿಸಿದೆ. ನಾವು ಮತ್ತೆ ಸ್ಥಳೀಯ ಸಂಸ್ಕೃತಿಯ ಕಡೆಗೆ ಮುಖ ಮಾಡಬೇಕಿದೆ. ಜಾನಪದರಿಗೆ ಲೋಕಜ್ಞಾನ ಅರಿವಿತ್ತು. ಅವರು ಯಾವತ್ತೂ ಆತ್ಮತೃಪ್ತಿ ಮತ್ತು ಸಹಬಾಳ್ವೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು” ಎಂದು ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಹೊನ್ನಾವರದ ಜಾನಪದ ವಿಶ್ವ ಪ್ರತಿಷ್ಠಾನ, ಅಭಿನವ, ಪ್ರಣತಿ ದೊಡ್ಡಹೊಂಡ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕುವೆಂಪು ದೀಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಹೂನ್ನಾವರದಂಥ ತಾಲ್ಲೂಕು ಕೇಂದ್ರದಲ್ಲಿ ನಲವತ್ತು ವರ್ಷಗಳಿಂದ ದೀಪಾರಾಧನೆಯಂಥ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಎನ್.ಆರ್. ನಾಯಕ ದಂಪತಿಯ ಕೆಲಸ ಮಾದರಿಯಾದುದು. ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಈ ದಂಪತಿಗಳು ಮಾಡುತ್ತಿರುವುದು ಸ್ವಾಗತಾರ್ಹ” ಎಂದರು.
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ, “ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಗೌರವಿಸಿದಾಗ ಬೇರೆಯವರಿಗೂ ಪ್ರೇರಣೆಯಾಗುತ್ತದೆ. ಸಾಧನೆ ಮಾಡಿದವರಿಗೂ ಆಸಕ್ತಿ ಹೆಚ್ಚಾಗಿ ಅವರಲ್ಲಿಯೂ ಹುರುಪು ಬಂದು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ, ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಮಾಜ ನಿರಂತರವಾಗಿ ಮಾಡಬೇಕಿದೆ” ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಸಿ. ನಾಗಭೂಷಣ ಅವರು ಮಾತನಾಡಿ, “ಕೃಷಿಯ ಬಗೆಗೆ ಜಾನಪದದಲ್ಲಿ ಮಾತ್ರವಲ್ಲ, ಅನೇಕ ಶಾಸನ ಹಾಗೂ ಹಸ್ತ ಪ್ರತಿಗಳಲ್ಲಿ ಹಲವು ವಿವರಗಳಿವೆ. ಅವುಗಳನ್ನು ಹೊಸ ಬೆಳಕಿನಲ್ಲಿ ವಿಶ್ಲೇಷಿಸಿ, ರೈತರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಒಂದು ಹಸ್ತಪ್ರತಿಯಲ್ಲಿ ಹತ್ತು ಬಗೆಯ ಅಡಿಕೆ ತಳಿಗಳ ಬಗೆಗೆ ಹೇಳುತ್ತಾರೆ. ಅವುಗಳನ್ನು ಗುರುತಿಸಿ ಹೆಚ್ಚು ಇಳುವರಿ ಪಡೆಯಬಹುದಾದ ತಳಿಯನ್ನು ಮುನ್ನಲೆಗೆ ತಂದರೆ ರೈತ ಸಮುದಾಯಕ್ಕೆ ಒಳಿತಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಾಯಿ, ಮಗನ ಬರ್ಬರ ಹತ್ಯೆ; ಆರೋಪಿ ಪತ್ತೆಗೆ ತಂಡ ರಚನೆ
ಇದೇ ಸಂದರ್ಭದಲ್ಲಿ 2023ನೇ ಸಾಲಿನ ‘ಕುವೆಂಪು ದೀಪ’ ಪ್ರಶಸ್ತಿಗೆ ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಸಿ. ನಾಗಭೂಷಣ, ‘ಕಲಾದೀಪ ಪ್ರಶಸ್ತಿ’ಗೆ ಕಲಾವಿದ ಎಚ್.ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಅಂಕೋಲದ ಕಮ್ಮಾರ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಯೋಗಪಟು ಶ್ರೀನಿಧಿ ಪ್ರಕಾಶ್ ಗೌಡ ಅವರಿಗೆ ಪ್ರಶಸ್ತಿ ನೀಡಲಾಯಿತು. ಈ ಎಲ್ಲ ಪ್ರಶಸ್ತಿಗಳನ್ನು ಎನ್.ಆರ್. ನಾಯಕ ಮತ್ತು ಶಾಂತಿ ನಾಯಕ ಅವರು ಪ್ರದಾನ ಮಾಡಿದರು. ಈ ಪ್ರಶಸ್ತಿಯು ₹6,000 ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಡಾ. ಪಿ. ಚಂದ್ರಿಕಾ. ವೈ ಜಿ. ಮುರಳೀಧರ, ರಜನಿ ನರಹಳ್ಳಿ, ಬಿ ಆರ್ ಲಕ್ಷ್ಮಣರಾವ್, ವಿದ್ಯಾಭನವದ ನಾಗಲಕ್ಷ್ಮಿ ಕೆ. ರಾವ್, ಸೀತಾ ರಾಮಚಂದ್ರ ಮುಂತಾದವರು ಸೇರಿದಂತೆ ಅನೇಕ ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.