- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೊಮ್ಮೆ ಅವಧಿ ವಿಸ್ತರಣೆ
- ಸೆಪ್ಟೆಂಬರ್ 09 ರಿಂದ 14 ರೊಳಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ
ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಲಾಗಿದ್ದ ಅವಧಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೊಮ್ಮೆ ವಿಸ್ತರಿಸಿದ್ದು, ಸೆಪ್ಟೆಂಬರ್ 14ವರೆಗೂ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಯಜಮಾನರ ಸ್ಥಾನದಲ್ಲಿ ಮಹಿಳೆಯರು ಹೆಸರಿಲ್ಲದ ಕಾರಣ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕದ ಮಹಿಳೆಯರಿಗೆ ಮತ್ತೆ ಅವಕಾಶ ಸಿಕ್ಕಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವಿಟ್ ಮಾಡಿದ್ದು, “ಪಡಿತರ ಚೀಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಗೃಹ ಲಕ್ಷ್ಮಿಯೋಜನೆಗೆ ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 09 ರಿಂದ 14 ರೊಳಗೆ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ ಮಾಡಿಕೊಂಡು, ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದಾಗಿದೆ’ ಎಂದು ಇಲಾಖೆ ತಿಳಿಸಿದೆ.
“ಗೃಹ ಲಕ್ಷ್ಮಿಯೋಜನೆಯಡಿ ಈಗಾಗಲೇ ನೋಂದಾಯಿಸಿ ರೇಷನ್ ಕಾರ್ಡ್ ನಲ್ಲಿ ಯಜಮಾನಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ” ಎಂದು ಇಲಾಖೆ ಮಾಹಿತಿ ನೀಡಿದೆ.
ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಗೆ ಸೆಪ್ಟೆಂಬರ್ 1 ರಿಂದ 10ವರೆಗೂ ಮಾತ್ರ ಕಾಲಾವಕಾಶ ನೀಡಲಾಗಿತ್ತು.