ಪ್ರಪಂಚದಾದ್ಯಂತ ಕುಟುಂಬ ವ್ಯವಸ್ಥೆಯು ಅವನತಿಯತ್ತ ಸಾಗುತ್ತಿದ್ದರೆ, ಭಾರತದಲ್ಲಿ ಸತ್ಯದಿಂದ ಕುಟುಂಬ ವ್ಯವಸ್ಥೆ ಸುಭದ್ರವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಮೋಹನ್ ಭಾಗವತ್ ಅವರ ಹೇಳಿಕೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು, ವಿಶ್ವದಲ್ಲಿ ಅತಿ ಹೆಚ್ಚು ಜಾತಿ/ವರ್ಣಮಯ ವ್ಯವಸ್ಥೆ ಭಾರತದಲ್ಲಿ ಮಾತ್ರ ಇದೆ. ನಿಮ್ಮ ಸಂಘ, ನಿಮ್ಮ ಸಂಘದ ಹೆಸರಿನಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದಲಿತರ, ಅಲ್ಪಸಂಖ್ಯಾತರ ಶೋಷಣೆಯ ಬಗ್ಗೆ ಬಿಜೆಪಿ ಸರ್ಕಾರ ಮೌನವಹಿಸಿದೆ. ನಿಮ್ಮದೆ ಆಡಳಿತವಿರುವ ಉತ್ತರ ಭಾರತದ ರಾಜ್ಯಗಳಲ್ಲಿ ದಲಿತರು, ಆದಿವಾಸಿಗಳನ್ನು ಹಿಂಸಿಸಲಾಗುತ್ತಿದೆ. ಹಾಡಹಗಲಲ್ಲೇ ಕ್ರೂರವಾಗಿ ಥಳಿಸಿ ಹತ್ಯೆ ಮಾಡಲಾಗುತ್ತಿದೆ. ಇದೂ ಕೂಡ ಭಾರತದ ನಿಜವಾದ ವ್ಯವಸ್ಥೆ ಎಂದು ಹಲವರು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲೂ ದಲಿತ, ಹಿಂದಿಳಿದವರನ್ನು ಮುಟ್ಟಿಸಿಕೊಳ್ಳುತ್ತಿಲ್ಲ, ಮನೆಗಳಿಗೆ ಸೇರಿಸುತ್ತಿಲ್ಲ. ದೇಗುಲಕ್ಕೆ ಪ್ರವೇಶ ನೀಡುತ್ತಿಲ್ಲ. ಬಹಿಷ್ಕಾರ ನೀಡುವ ಸಾವಿರಾರು ಘಟನೆಗಳು ನಿತ್ಯ ಭಾರತದಲ್ಲಿಯೇ ನಡೆಯುತ್ತಿದೆ ಎಂದು ಮೋಹನ್ ಭಾಗವತ್ ಅವರಿಗೆ ನೆಟ್ಟಿಗರು ಹಲವು ಉದಾಹರಣೆಗಳನ್ನು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ದಲಿತ ಮಹಿಳೆ ತಯಾರಿಸಿದ ಅಡುಗೆ ಸೇವಿಸಲು ನಿರಾಕರಿಸಿದ ವಿದ್ಯಾರ್ಥಿಗಳು
ಮಂಗಳವಾರ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಹಿರಿಯ ನಾಗರಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ”ನಮ್ಮ ಸಂಸ್ಕೃತಿಯ ಬೇರುಗಳು ‘ಸತ್ಯ’ದ ಮೇಲೆ ಆಧಾರಿತವಾಗಿವೆ. ಆದರೂ ಈ ಸಂಸ್ಕೃತಿಯನ್ನು ಬೇರುಸಹಿತ ಕಿತ್ತುಹಾಕಲು ಪ್ರಯತ್ನಿಸಲಾಗುತ್ತಿದೆ. ಕೆಲವರು ತಮ್ಮ ಸ್ವಾರ್ಥದ ಉದ್ದೇಶದಿಂದ ಲೌಕಿಕ ಸುಖಗಳನ್ನು ಪೂರೈಸುವ ಈ ಪ್ರವೃತ್ತಿಯನ್ನು ಸರಿ ಎಂದು ಸಮರ್ಥಿಸಲು ಪ್ರಯತ್ನಿಸುತ್ತಾರೆ. ಇದನ್ನು ಇಂದು ಸಾಂಸ್ಕೃತಿಕ ಮಾರ್ಕ್ಸ್‌ವಾದ ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದರು.
“ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುವ ಜನರಿಗೆ ಅವ್ಯವಸ್ಥೆಗಳು ಸಹಾಯ ಮಾಡುತ್ತದೆ. ಆದರೆ ಮೇಲುಗೈ ಸಾಧಿಸಲು ಸಾಧ್ಯವಾಗುತ್ತಿಲ್ಲ.ಕೆಲವು ಜನರು ವಿವಿಧ ತತ್ವಗಳು ಮತ್ತು ಸಿದ್ಧಾಂತಗಳ ಬಗ್ಗೆ ಮಾತನಾಡುವ ಮೂಲಕ ಒಳ್ಳೆಯದನ್ನು ನಾಶಮಾಡಲು ಬಯಸುತ್ತಾರೆ” ಎಂದು ಭಾಗವತ್ ಹೇಳಿದ್ದರು.
ಕುಟುಂಬ ವ್ಯವಸ್ಥೆಯು ವಿಶ್ವದಲ್ಲಿ ಅವನತಿಯತ್ತ ಸಾಗುತ್ತಿದೆ. ಆದರೆ ಸತ್ಯ ಆಧಾರವಾಗಿರುವ ಕಾರಣ ಭಾರತದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಭಾರತದ ನಮ್ಮ ಸಂಸ್ಕೃತಿಯ ಬೇರುಗಳು ದೃಢವಾಗಿವೆ ಮತ್ತು ಸತ್ಯದಿಂದ ಆಧರಿಸಿವೆ ಎಂದು ತಿಳಿಸಿದ್ದರು.