ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ನಿಂದಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದಿದ್ದು, ಬಾಲಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ದುಗ್ಲಾಪುರ ಗೇಟ್‌ನಲ್ಲಿ ಘಟನೆ ನಡೆದಿದೆ. ಅತೀ ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ, ಮಕ್ಕಳ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಏಳು ಮಕ್ಕಳ ಪೈಕಿ ಐವರು ಪಾರಾಗಿದ್ದಾರೆ. ಒಬ್ಬ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಒಬ್ಬಾಕೆ ಹಸುನೀಗಿದ್ದಾಳೆ ಎಂದು ತಿಳಿದುಬಂದಿದೆ.
ಬಾಲಕಿ ತುಳಸಿ (15) ಮೃತ ದುರ್ದೈವಿ. ನಿವೇದಿತಾ (14) ಎಂಬ ಬಾಲಕಿ ಪರಿಸ್ಥಿತಿ ಗಂಭಿರವಾಗಿದ್ದು, ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳ ಮೇಲೆ ಹರಿದ ಬಸ್ ಮನೆಯೊಂದಕ್ಕೆ ಢಿಕ್ಕಿ ಹೊಡೆದಿದೆ. ಮನೆಯ ಮುಂಭಾಗವೂ ಹಾನಿಯಾಗಿದೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಸ್‌ನ ಗಾಜುಗಳನ್ನು ಹೊಡೆದು ಹಾಕಿದ್ದಾರೆ.
ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.