ಸ್ವತಂತ್ರ ಭಾರತದ ಆಧಾರ ಸ್ತಂಭವಾಗಿರುವ ದೇಶ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಶಕದ ಕಾಲ ದೇಶವನ್ನು ಆಳುತ್ತಿದ್ದಾರೆ. ರೈತರ ಸಂಕಷ್ಟ ನೋವುವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ವಿಫಲರಾಗಿದ್ದಾರೆ. ದೇಶದ ರೈತರ ಸಾಲ ಮನ್ನಾ ಮಾಡಿದರೆ ಮಾತ್ರ ಅವರು ಮತ್ತೆ ಪ್ರಧಾನಿ ಆಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಎಸ್‌ಸಿ/ಎಸ್,ಒಬಿಸಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದ್ದಾರೆ.
ರೈತರ ಸಮಸ್ಯೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ದೇಶದ ಪ್ರತಿಯೊಬ್ಬರ ಹಸಿವನ್ನು ಇಂಗಿಸಿ ಅನ್ನ ನೀಡುವ ರೈತರ ಸಂಕಷ್ಟಕ್ಕೆ ಸರ್ಕಾರಗಳು ನೆರವಾಗಬೆಕು. ಆದರೆ, ಮೋದಿ ಅವರು ರೈತರ ವಿಚಾರದಲ್ಲಿ ಚುನಾವಣೆಗೂ ಮುನ್ನ ಕೊಟ್ಟಿದ್ದ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಮುಂದಿನ ಲೋಕಸಭಾ ಚುನಾವಣೆ ಒಳಗಾಗಿ ಸಂಕಷ್ಟದಲ್ಲಿರುವ ದೇಶದ ರೈತರ ವಿವಿಧ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು, ತಕ್ಷಣ ಸಂಪೂರ್ಣ ಸಾಲ ಮನ್ನಾ ಮಾಡಬೆಕು. ಇದುವರೆಗೆ ಆತ್ಮಹತ್ಯೆ ಒಳಗಾದ ರೈತರ ಕುಟುಂಬಕ್ಕೆ ಕೇಂದ್ರದಿಂದ 20 ಲಕ್ಷ ರೂ. ಪರಿಹಾರ ನೀಡಬೇಕು. ರೈತರಿಗೆ ಸಕಾಲಕ್ಕೆ ಹೆಚ್ಚಿ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಮಾಡಬೇಕು. ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ಪ್ರತಿಯೊಂದು ತಾಲೂಕಿನಲ್ಲಿ ಕೃಷಿ ಆಧಾರಿತ ಕೈಗಾರಿಕೆ, ನಿರಂತರ ಉದ್ಯೋಗ ಆಧಾರಿತ ಬೆಳೆಗಳನ್ನು ಬೆಳೆಯಲು ಕೃಷಿ ಪ್ರೋತ್ಸಾಹ ಹಣ ಹೆಚ್ಚಿಸಬೇಕು” ಎಂದು ಆಗ್ರಹಿಸಿದ್ದಾರೆ.