ಜನರ ಸೇವೆ ಮಾಡಲು ಹಲವಾರು ವಿಧಗಳಿವೆ. ಮಾನವ ಜೀವ ಅತ್ಯಮೂಲ್ಯವಾಗಿದ್ದು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಯುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ನಮ್ಮ ಆರೋಗ್ಯ ಸ್ಥಿರವಾಗಿರಲು ಸಹಕಾರಿಯಾಗುತ್ತದೆ” ಎಂದು ಶಾಸಕ ಡಾ. ಸಿದ್ಧಲಿಂಗಪ್ಪಾ ಪಾಟೀಲ್ ಹೇಳಿದರು.
ಬಳ್ಳಾರಿ ಜಿಲ್ಲೆ ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿರುವ ಆರ್ಬಿಟ್ ಸಂಸ್ಥೆಯಲ್ಲಿ ಮದರ್ ತೆರೇಸಾ ಅವರ ಸ್ಮರಣಾರ್ಥವಾಗಿ ಆರ್ಬಿಟ್ ಸಂಖ್ಯೆ, ಐಸಿವೈಎಮ್ ಕಲಬುರಗಿ ಧರ್ಮ ಕ್ಷೇತ್ರ ಮತ್ತು ಜಿಲ್ಲಾ ರಕ್ತ ನಿಧಿ ಘಟಕ ಬೀದರ್ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಕಾಯಕ್ರಮದಲ್ಲಿ ಮಾತನಾಡಿದರು.
“ಬಹುತೇಕರು ರಕ್ತದಾನ ಮಾಡಲು ಭಯ ಮತ್ತು ಆತಂಕಕ್ಕೆ ಒಳಗಾಗಿ ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಜನರಿಗೆ ಹೆಚ್ಚಿನ ಅರಿವಿನ ಕಾರ್ಯಕ್ರಮಗಳು ಅಗತ್ಯವಾಗಿದೆ” ಎಂದು ನುಡಿದರು.
ಅರ್ಬಿಟ್ ಸಂಸ್ಥೆ ಫಾದರ್ ವಿಕ್ಸರ್ ವಾಸ್ ಮಾತನಾಡಿ, “ಕಳೆದ 30 ವರ್ಷಗಳಿಂದ ಬೀದರ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಡವರು, ನಿರ್ಗತಿಕರು, ಶೋಷಿತರು, ದಿಕ್ಕಿಲ್ಲದವರಿಗೆ, ಹಿಂದುಳಿದ ವರ್ಗದವರ ಸೇವೆ ನೀಡುತ್ತಾ ಬಂದಿದೆ. ಮದರ್ ತೆರೇಸಾ ತಮ್ಮ ಜೀವನದಲ್ಲಿ ದೀನದಲಿತರ ಸೇವೆ ಸಲ್ಲಿಸಿದರು. ಅವರ ಸೇವೆಯೇ ನಮ್ಮ ಸಂಸ್ಥೆಗೆ ಪ್ರೇರಣೆಯಾಗಿದೆ. ಅವರ ಪುಣ್ಯ ಸ್ಮರಣೆಯ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ರಕ್ತದಾನ ಶಿಬಿರದ ನಿಮಿತ್ತ ಸಮಯಕ್ಕೆ ಸರಿಯಾಗಿ ಅಗತ್ಯವಿರುವವರಿಗೆ ರಕ್ತ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು ಸಿಎಂ ಜೊತೆ ಡಿಕೆಶಿ ವ್ಯಾಪಾರ ಸಂಬಂಧ; ಕಾವೇರಿ ಸಮಸ್ಯೆ ಬಗೆಹರಿಯಲ್ಲ: ಯೋಗೇಶ್ವರ್ ಆರೋಪ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲಬುರಗಿ ಧರ್ಮ ಕ್ಷೇತ್ರದ ಗುರು ಫಾದರ್ ಲೋಬೊರವರು ಮಾತನಾಡಿ, “ಮದರ್ ತೆರೇಸಾ ಅವರು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ್ದರು. ಅವರು ತೋರಿದ ಮಾರ್ಗದಲ್ಲಿ ನಾವು ನಡೆಯಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಜನಿ ಕೇಂದ್ರ ನಿರ್ದೇಶಕ ಫಾದರ್ ಸುನಿಲ್, ಜಿಲ್ಲಾ ರಕ್ತ ಘಟಕದ ವೈದ್ಯಾಧಿಕಾರಿ ಮಲ್ಲಣ ಪಾಟೀಲ್, ಕಟ್ಟಡ ಕಾರ್ಮಿಕ ನಿರೀಕ್ಷಣಾಧಿಕಾರಿ ಗಂಗಾಧರ, ಫಾದರ್ ಸಚಿನ್, ಫಾದರ್ ವಿಜಯ್ ಕುಮಾರ್ ಹಾಗೂ ನಿರ್ಮಲ, ಅಮಿತಾ, ರವಿ ಚಳಕಾಪುದ್ ಇದ್ದರು.