ಪಠ್ಯದ ಬದಲು ಧ್ವನಿ ಆಧಾರಿತ ಮೂಲಕ ಯುಪಿಐಯಲ್ಲಿ ಪಾವತಿ ಸೇವೆಗಳನ್ನು ಶೀಘ್ರದಲ್ಲಿಯೇ ಪಡೆಯಬಹುದಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023ರ ಕಾರ್ಯಕ್ರಮದಲ್ಲಿ ಯುಪಿಐನಲ್ಲಿ ಧ್ವನಿ ಆಧಾರಿತ ಪಾವತಿ ಸೇವೆಯ ಹೊಸ ಫೀಚರ್‌ಗಳನ್ನು ಪ್ರಾರಂಭಿಸಿದ್ದಾರೆ.
‘ಹಲೋ ಯುಪಿಐ’ ಎಂದು ಹೇಳುವ ಮೂಲಕ ಬಳಕೆದಾರರು ಯುಪಿಐ ಆ್ಯಪ್‌ಗಳು, ದೂರವಾಣಿ ಕರೆಗಳು ಹಾಗೂ ಐಒಟಿ ಸಾಧನಗಳ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ತಿಳಿಸಿದೆ.
ಯುಪಿಐ ಮೂಲಕ ವಹಿವಾಟು ನಡೆಸಲು ಬಳಕೆದಾರರು ಇನ್ನು ಮುಂದೆ ಹಸ್ತಚಾಲಿತವಾಗಿ ಸಂದೇಶ ಕಳುಹಿಸುವ ಅಗತ್ಯವಿಲ್ಲ. ಪಾವತಿಗಳನ್ನು ಪೂರ್ಣಗೊಳಿಸಲು ಅವರು ಎಐ-ಚಾಲಿತ ಪರಿಹಾರದೊಂದಿಗೆ ಸರಳವಾಗಿ ಮಾತನಾಡಬಹುದು. ಇದು ನೇರ ಧ್ವನಿ ಕರೆ(ಆನ್ ಕಾಲ್) ಹಾಗೂ ಯುಪಿಐ ಆ್ಯಪ್ ಮೂಲಕ ಧ್ವನಿ ಸಂದೇಶದ ಮೂಲಕವೂ ಲಭ್ಯವಿರುತ್ತದೆ. ಆನ್ ಕಾಲ್ ಸೌಲಭ್ಯವು ಬಳಕೆದಾರರನ್ನು ನೇರವಾಗಿ ಕರೆ ಮಾಡಲು ಅನುಮತಿಸುತ್ತದೆ. ಆ್ಯಪ್ ಸೌಲಭ್ಯದ ವಿಧಾನವು ಧ್ವನಿ ಇನ್‌ಪುಟ್‌ಗಳ ಮೂಲಕ ಪಾವತಿ ಸೇವೆಗಳನ್ನು ಪಡೆಯಬಹುದು. ಇದಲ್ಲದೆ, ಸಾಧನವು ಮೌಖಿಕ ವಿನಂತಿಯನ್ನು ಗುರುತಿಸುತ್ತದೆ ಮತ್ತು ವಿನಂತಿಗೆ ಪ್ರತಿಕ್ರಿಯಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು
ಪಾವತಿ ಮಾಡುವ ವಿಧಾನ
- ಮೊದಲಿಗೆ ಬಳಕೆದಾರರು ‘ಹಲೋ ಯುಪಿಐ’ ಧ್ವನಿ ಸಂದೇಶವನ್ನು ಕಳುಹಿಸುತ್ತಾರೆ
- ಮುಂದಿನ ಹಂತದಲ್ಲಿ, ಸ್ವಯಂಚಾಲಿತ ಧ್ವನಿಯನ್ನು ಗುರುತಿಸುವಿಕೆಯ ಫೀಚರ್ ಕಾಣಿಸಿಕೊಂಡು. ಧ್ವನಿ ಆಜ್ಞೆಯನ್ನು ಪಠ್ಯವಾಗಿ ಪರಿವರ್ತಿಸಲಾಗುತ್ತದೆ.
- ಬಳಕೆದಾರರ ಸೇವೆಯ ಉದ್ದೇಶವನ್ನು ಪ್ರಾದೇಶಿಕ ಭಾಷೆಯ ಮೂಲಕ ಗ್ರಹಿಸಿ, ಧ್ವನಿ ಸೇವಾ ವಿಷಯವನ್ನು ಯಂತ್ರ ಅನುವಾದದ ಮೂಲಕ ಇಂಗ್ಲಿಷ್‌ಗೆ ಪರಿವರ್ತಿಸಲಾಗುತ್ತದೆ.
- ನಂತರದಲ್ಲಿ, ಯಂತ್ರವು ಬಳಕೆದಾರರ ಉದ್ದೇಶವನ್ನು ಪರಿಶೀಲಿಸುತ್ತದೆ.
- ಪರಿಶೀಲನೆ ಪೂರ್ಣಗೊಂಡ ನಂತರ, ಧ್ವನಿಯು ತಲುಪಬೇಕಾದ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಹಲೋ ಯುಪಿಐ’ ಧ್ವನಿ ಸಂದೇಶ ಸೇವೆಯು ಹೆಚ್ಚಾಗಿ ತಂತ್ರಜ್ಞಾನ ತಿಳಿಯದ, ಸ್ಮಾರ್ಟ್ ಫೋನ್ ಬಳಸದ, ಡಿಜಿಟಲ್ ಸಾಕ್ಷರತೆ ತಿಳಿಯದ ಬಳಕೆದಾರರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಎನ್‌ಸಿಪಿಐ ತಿಳಿಸಿದೆ.
ಇದರ ಜೊತೆಗೆ ಎನ್‌ಸಿಪಿಐ, ಯುಪಿಐ ಕ್ರೆಡಿಟ್ ಲೈನ್, ಲೈಟ್ ಎಕ್ಸ್, ಟ್ಯಾಪ್ ಅಂಡ್ ಪೇ, ಬಿಲ್ ಕನೆಕ್ಟ್, ವಾಯ್ಸ್ ಕಮ್ಯಾಂಡ್ ಫೀಚರ್‌ಗಳನ್ನು ಪರಿಚಯಿಸಿದೆ.
ಯುಪಿಐ ಕ್ರೆಡಿಟ್ ಲೈನ್
ಕ್ರೆಡಿಟ್ ಕಾರ್ಡ್ಗಳಿಗೆ ನೀಡುವ ಮಿತಿ ಸಾಲ ಸೌಲಭ್ಯವನ್ನು ಯುಪಿಐ ಖಾತೆಗಳಿಗೆ ಕೊಡಲಾಗುತ್ತದೆ. ಯಾವ ಯುಪಿಐ ಖಾತೆಗೆ ಎಷ್ಟು ಕ್ರೆಡಿಟ್ ಮಿತಿ ಎಂಬುದನ್ನು ಆಯಾ ಬ್ಯಾಂಕ್ನವರು ನಿರ್ಧರಿಸುತ್ತಾರೆ.
ಯುಪಿಐ ಲೈಟ್ ಎಕ್ಸ್
ಇದರಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದ ಅಥವಾ ಸಿಗ್ನಲ್ ದುರ್ಬಲ ಇರುವ ಸ್ಥಳಗಳಲ್ಲಿ ಆಫ್ಲೈನ್ ಮೂಲಕ ಹಣವನ್ನು ಕಳುಹಿಸಲು ಇಂಟರ್ನೆಟ್ ಲೈಟ್ ಎಕ್ಸ್ ಫೀಚರ್ ಸಹಾಯವಾಗುತ್ತದೆ.
ಯುಪಿಐ ಟ್ಯಾಪ್ ಅಂಡ್ ಪೇ
ಕ್ಯೂಆರ್ ಕೋಡ್ ಅನ್ನು ಯುಪಿಐ ಆ್ಯಪ್ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸಾಮಾನ್ಯ ವಿಧಾನ. ಈಗ ಹೊಸ ಫೀಚರ್ ತರಲಾಗಿದ್ದು, ವರ್ತಕರ ಬಳಿ ಇರುವ ಎನ್ಎಫ್ಸಿ ಚಾಲಿತ ಕ್ಯುಅರ್ ಕೋಡ್ಗಳನ್ನು ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲದೇ ಕೇವಲ ಒತ್ತಿದರೂ ಸಾಕು ಹಣ ಪಾವತಿಯಾಗುತ್ತದೆ. ನಿಯರ್ ಫೀಲ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿಯನ್ನು ಇಲ್ಲಿ ಬಳಸಲಾಗಿದೆ.
ಬಿಲ್ಪೇ ಕನೆಕ್ಟ್
ಭಾರತದಾದ್ಯಂತ ಬಿಲ್ ಪಾವತಿಗಳಿಗಾಗಿ ರಾಷ್ಟ್ರೀಕೃತ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಗೆ ಗ್ರಾಹಕರು ‘Hi’ ಎಂದು ಮೆಸೇಜ್ ಕಳುಹಿಸಿದರೆ ಬಿಲ್ ಪಾವತಿ ವ್ಯವಸ್ಥೆ ಪಡೆಯಬಹುದು. ಫೀಚರ್ ಫೋನ್ ಹೊಂದಿರುವವರು ಆ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರೂ ಕೂಡ ಬಿಲ್ ಪೇಮೆಂಟ್ ಮಾಡುವ ಅವಕಾಶ ಸಿಗುತ್ತದೆ.