ತರಕಾರಿ ವಾಹನದಲ್ಲಿ ರಕ್ತಚಂದನ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅಧಿಕಾರಿಗಳು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ಅಮೃತಹಳ್ಳಿಯ ಮನುಗುರಪ್ಪ ಬಡಾವಣೆಯ ನಿವಾಸಿ ಆರ್ ಎಲ್ ರವಿ(47) ಚಾಮರಾಜನಗರ ತಾಲೂಕಿನ ಸರಗೂರು ಮೋಳೆಯ ಎನ್ ಎಂ ಗೋವಿಂದರಾಜ್(43), ಆನಂದ್ ಎಸ್ ಡಿ (40) ಚಾಮರಾಜನಗರದ ಭ್ರಮರಾಂಬ ಬಡಾವಣೆಯ ಆಸ್ಕರ್ ಪಾಷ(63) ಹಾಗೂ ಚಾಮರಾಜನಗರ ತಾಲೂಕಿನ ಹಾಗೂ ನಾಗವಳಿ ಗ್ರಾಮದ ಮಹೇಂದ್ರ(32) ಬಂಧಿತ ಆರೋಪಿಗಳು. ಇವರಿಂದ ಸುಮಾರು ಐವತ್ತು ಕೆಜಿ ತೂಕದ ರಕ್ತಚಂದನ ತುಂಡುಗಳನ್ನು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಸಂಜೆ ಸುಮಾರು 6-30ರಲ್ಲಿ ತುಂಬಿದ ಬೊಲೆರೋ ವಾಹನದಲ್ಲಿ ರಕ್ತಚಂದನ ಮರಗಳ ತುಂಡುಗಳನ್ನು ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಹುಲಿ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ನಿರ್ದೇಶನದಂತೆ ಗುಂಡ್ಲುಪೇಟೆ ಬಫರ್ ಝೋನ್ ವಲಯ ಮತ್ತು ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳು ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ ರವೀಂದ್ರ ಮತ್ತು ಪರಮೇಶ್ವರ್ ಹಾಗೂ ನವೀನ್ ಕುಮಾರ್ ಮೂರು ತಂಡಗಳಾಗಿ ಬೇರೆ ಬೇರೆ ಸ್ಥಳಗಳಲ್ಲಿ ನಿಯೋಜನೆ ಮಾಡಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ತಾಲೂಕಿನ ಲಕ್ಕೂರು ಗ್ರಾಮದ ಬಳಿ ಕೆ ಎ 45 5301 ಸಂಖ್ಯೆಯ ಬೊಲೆರೋ ವಾಹನ ತಡೆದು ಪರಿಶೀಲನೆ ಮಾಡಿದಾಗ ಮೇಲ್ಭಾಗದಲ್ಲಿ ಹೂಕೋಸು ಜೊತೆ ಕೆಳಭಾಗದಲ್ಲಿ ರಕ್ತಚಂದನ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಕಂಡುಬಂದಿದ್ದು, ಇವರನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಗುಂಡ್ಲುಪೇಟೆ ಬಫರ್ ಝೋನ್ ವಲಯದಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.