ರಾಯಚೂರು ನಗರದ ಗದ್ವಾಲ್ ರಸ್ತೆ ಹದಗೆಟ್ಟಿದ್ದು, ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳಿಂದ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದ್ದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ಕೂಡ ಉಂಟಾಯಿತು. ಕಳೆದ ವರ್ಷದಿಂದ ಗದ್ವಾಲ್ ರಸ್ತೆ ಕಾಮಗಾರಿ ಪ್ರಾರಂಭವಾಗದೇ ಇರುವುದರಿಂದ ನಿವಾಸಿಗಳು ನಿತ್ಯವೂ ನರಕಯಾತೆನೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
“ರಸ್ತೆಯು ತಗ್ಗು, ಗುಂಡಿಗಳಿಂದ ಕೂಡಿದ್ದು, ಅತಿಹೆಚ್ಚು ವಾಹನಗಳು ಸಂಚರಿಸುವುದರಿಂದ ರಸ್ತೆ ಇಕ್ಕೆಲಗಳ ಮನೆಗಳಿಗೆ ಧೂಳು ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ” ಎಂದು ಪ್ರತಿಭಟನಾಕಾರರು ದೂರಿದರು.
“ವಾರ್ಡ್ ಸಂಖ್ಯೆ 22 ಮತ್ತು 23ರ ನಿವಾಸಿಗಳು, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ನಿವಾಸಿಗಳು ನಿತ್ಯವೂ ತೊಂದರೆ ಅನುಭವಿಸುತ್ತಿದ್ದೇವೆ. ಆದರೆ, ಪೊಲೀಸರಿಗೆ ಮಾಹಿತಿ ನೀಡದೆ ರಸ್ತೆತಡೆ ಮಾಡುತ್ತಿರುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಮರಳು ಹೊತ್ತೊಯ್ಯುತ್ತಿದ್ದ ಟಿಪ್ಪರ್ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದನು. ಇದಕ್ಕೆ ಸಂಬಂಧಿಸಿದಂತೆ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು. ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕ.ಕ. ವಿಮೋಚನೆಗೆ ಹೋರಾಡಿದ ಸೇನಾನಿಗಳ ಸ್ಮಾರಕ ನಿರ್ಮಿಸಿ: ಗುರುನಾಥ ವಡ್ಡೆ
ಬಡಾವಣೆ ನಿವಾಸಿಗಳಾದ ಯು. ಲಿಂಗಾರೆಡ್ಡಿ, ಯು. ನರಸರೆಡ್ಡಿ, ಕೆ ಜಿ ವೀರೇಶ, ಶಂಕರನಾಯಕ, ಕೆ ನರಸಿಂಹಲು, ವಿರೇಶ ಲ್ಯಾಬ್, ಗೋವಿಂದ ನಾಯಕ, ರಮೇಶ, ವೇಲೂರು ವೆಂಕಟೇಶ ಸೇರಿದಂತೆ ಬಡಾವಣೆ ಮಹಿಳೆಯರು, ಯುವಕರು ಪ್ರತಿಭಟನೆಯಲ್ಲಿದ್ದರು.
ಸಿಟಿಜನ್ ಜರ್ನಲಿಸ್ಟ್ ಹಫಿಜುಲ್ಲ ಮಾಹಿತಿ ಆಧರಿಸಿದ ವರದಿ