ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ನೀಡುವ 2023ನೇ ಸಾಲಿನ ಪ್ರತಿಷ್ಠಿತ ವಿ ಕೃ ಗೋಕಾಕ್ ಪ್ರಶಸ್ತಿಗೆ ಸಾಂಸ್ಕ್ರತಿಕ ರಾಯಭಾರಿಯೆಂದೇ ಹೆಸರಾದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು ಆಯ್ಕೆಯಾಗಿದ್ದಾರೆ.
ಈ ವಿ ಕೃ ಗೋಕಾಕ್ ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಸೆ. 24ರಂದು (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆಆರ್ಜಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಭಾರತ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ” ಎಂದು ಟ್ರಸ್ಟ್ ಪ್ರಕಟಣೆ ಮೂಲಕ ತಿಳಿಸಿದೆ.
“ಟ್ರಸ್ಟ್ ಅಧ್ಯಕ್ಷ ಬಿ ಎಸ್ ವಿಶ್ವನಾಥ್, ಕಾರ್ಯದರ್ಶಿಗಳಾದ ಅನಿಲ್ ಗೋಕಾಕ್, ಬಹುಮುಖಿ ಚಿಂತಕ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ, ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಎಚ್ ಎನ್ ಸುರೇಶ್, ಅಭಿನವ ರವಿಕುಮಾರ್ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ” ಎಂದು ಹೇಳಿದೆ.
ಚಿರಂಜೀವಿ ಸಿಂಗ್ ಅವರು 1945ರ ಮಾರ್ಚ್ 5ರಂದು ಪಂಜಾಬಿನ ರಹೋನ್ದಲ್ಲಿ ಜನಿಸಿದರು. 1971ರಲ್ಲಿ ಐಎಎಸ್ ಅಧಿಕಾರಿಯಾಗಿ ಕರ್ನಾಟಕದ ತರೀಕೆರೆಗೆ ಬಂದರು. ಇಲ್ಲಿ ಬಂದು ನೆಲೆಸಿದಾಗಿನಿಂದಲೂ ಕನ್ನಡ ಮಾತಾಡಲು ಪ್ರಾರಂಭಿಸಿದರು. ಬಳಿಕ, ಮಂಡ್ಯ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬ್ರ್ಯಾಂಡ್ ಬೆಂಗಳೂರು | ಸಲಹೆಗಳ ವರದಿ ಸಲ್ಲಿಸಲು ನೋಡಲ್ ಅಧಿಕಾರಿಗಳಿಗೆ ಸೂಚನೆ
ಸಿನಿಮಾ, ಪತ್ರಿಕೆಗಳ ಮೂಲಕ ಸ್ಪಷ್ಟವಾಗಿ ಕನ್ನಡವನ್ನು ಕಲಿತ ಚಿರಂಜೀವಿ ಸಿಂಗ್ ಅವರು ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆಗಳಾದ ಲಂಕೇಶ್, ರಾಜೀವ್ ತಾರನಾಥ್, ಎಸ್ ಜಿ ವಾಸುದೇವ್, ಗಿರೀಶ್ ಕಾರ್ನಾಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
`ಯಾವ ಜನ್ಮದ ಮೈತ್ರಿ’ ಪ್ರಕಟಿತ ಪುಸ್ತಕ. 2005ರಲ್ಲಿ ಕರ್ನಾಟಕ ಸರ್ಕಾರ ಇವರ ಕನ್ನಡ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪಶಸ್ತಿಯನ್ನು ನೀಡಿ ಗೌರವಿಸಿದೆ. ಕ್ಷೇತ್ರದ ಸಮುದಾಯ ಶಿಕ್ಷಣ ಸೇವೆಯನ್ನು ಪರಿಗಣಿಸಿ 2023ನೇ ಸಾಲಿನ ವಿ ಕೃ ಗೋಕಾಕ್ ಹೆಸರಿನ ಪ್ರಶಸ್ತಿ ನೀಡಲಾಗುತ್ತಿದೆ” ಎಂದು ಹೇಳಿದೆ.