ಮಧ್ಯಪ್ರದೇಶ ಶಿಯೋಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.
ತನ್ನ ಬೆಂಬಲಿಗರು ನೀಡುವ ಸಾಂಪ್ರದಾಯಿಕ ಹೂಮಾಲೆಗಳನ್ನು ಸ್ವೀಕರಿಸಲು ನಿರಾಕರಿಸಿದ ಬಾಬು ಜೀವಂತ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಲ್ಲಿ ಕುತ್ತಿಗೆಗೆ ಹಾವು ಸುತ್ತಿಕೊಂಡಿರುವ ಬಾಬು ಜಂಡೆಲ್ ತನ್ನ ಬೆಂಬಲಿಗರನ್ನು ಯಾವುದೇ ಭಯವಿಲ್ಲದೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು.
ಮಾಧ್ಯಮದವರೊಂದಿಗೆ ಮಾತನಾಡಿದ ಬಾಬು ಜಂಡೇಲ್, “ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದೇನೆ. ಪ್ರಾಣಿಗಳು ನನ್ನ ಸ್ನೇಹಿತರಂತೆ, ನನ್ನ ಹಿತ್ತಲಿನಲ್ಲಿ ಮಲ್ಲಿಗೆ ಗಿಡವಿದೆ. ರಾತ್ರಿ ವೇಳೆ ಹಾವುಗಳು ಆಗಾಗ ಬರುತ್ತವೆ. ಹಾವು ಶಿವನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನನ್ನ ಜನ್ಮದಿನದ ಸಂದರ್ಭದಲ್ಲಿ ನಾನು ದೇವರ ಮೇಲಿನ ಭಕ್ತಿಯ ರೂಪವಾಗಿ ಅದನ್ನು ನನ್ನ ಕುತ್ತಿಗೆಗೆ ಸುತ್ತಿಕೊಂಡೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವ ಇಲ್ಲದ ರಾಷ್ಟ್ರಗಳಲ್ಲಿ ಇವೆಲ್ಲ ನಡೆಯಲು ಸಾಧ್ಯ: ಖರ್ಗೆ ಆಹ್ವಾನಿಸದ್ದಕ್ಕೆ ಕಾಂಗ್ರೆಸ್ ವಾಗ್ದಾಳಿ
ಶಾಸಕರ ಜನ್ಮದಿನದಂದು ಅವರ ಮನೆಯಲ್ಲಿ ನೆರೆದಿದ್ದ ಬೆಂಬಲಿಗರ ಗುಂಪಿನಲ್ಲಿ, ಹಾವಾಡಿಗ ಕೂಡ ಇದ್ದನು. ಜಂಡೆಲ್ ಹಾವನ್ಮು ಹಾವನ್ನು ಪೆಟ್ಟಿಗೆಯಿಂದ ಹೊರತೆಗೆದು ನಂತರ ಅವರ ಕುತ್ತಿಗೆಗೆ ಹಾಕಿಕೊಂಡರು.
ಶಾಸಕ ಬಾಬು ಜಂಡೆಲ್ ಈ ಹಿಂದೆ ಕೂಡ ಇಂತಹ ವಿಚಿತ್ರ ವರ್ತನೆಯಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರವಾಹ ವಿಚಾರವಾಗಿ ಕುರ್ತಾ ಹರಿದು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ವಿದ್ಯುತ್ ಸರಬರಾಜು ಮಾಡಲು ವಿದ್ಯುತ್ ಕಂಬ ಏರಿದ್ದರು. ಅವರು ಗಾಯಕರಾಗಿ ಮತ್ತು ಕೆಲವೊಮ್ಮೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯಗಾರರಾಗಿಯೂ ಕಾಣಿಸಿಕೊಂಡಿದ್ದಾರೆ.