ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಲುವಾಗಿ ಪೂರಕ ಪೌಷ್ಟಿಕ ಯೋಜನೆಯ ಅಡಿಯಲ್ಲಿ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಲಾಗುತ್ತಿತ್ತು. ಈಗ ಅಧಿಕಾರದಲ್ಲಿರುವ ಹೊಸ ಸರ್ಕಾರ, ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು 10ನೇ ತರಗತಿಯವರೆಗೆ ವಿಸ್ತರಿಸಿದೆ. ಸರ್ಕಾರದ ನಡೆಯನ್ನು ಮೆಚ್ಚಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಆಶಾ ನೆಹರು ಪಾಟೀಲ್ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದರು.
ಆ ಪತ್ರದಲ್ಲಿ; ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ತಮಗೆ ಅಭಿನಂದನೆಗಳು. ತಾವು ಮುಖ್ಯಮಂತ್ರಿಗಳಾಗಿ ಜಾರಿಗೆ ತಂದ ಯೋಜನೆಗಳು ರಾಜ್ಯದ ಅನೇಕ ಕುಟುಂಬಗಳಿಗೆ ವರದಾನವಾಗಿವೆ. ವಿಶೇಷವಾಗಿ ಕ್ಷೀರಭಾಗ್ಯ, ಶೂ ಭಾಗ್ಯದಂತ ಯೋಜನೆಗಳು ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಮತ್ತು ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಇತ್ತೀಚಿಗೆ ಜಾರಿಗೆ ತಂದ ಬಾಳೆಹಣ್ಣು, ಶೆಂಗಾಚಿಕ್ಕಿ, ಮೊಟ್ಟೆ ನೀಡುತ್ತಿರುವುದು ಬಹಳ ಸಂತೋಷದ ವಿಚಾರ. ಈ ಹಿಂದಿನ ಸರಕಾರ 1-8 ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ವಿತರಣೆ ಮಾಡುತ್ತಿತ್ತು. ಅದರಿಂದ 9 ಮತ್ತು 10 ನೆ ಇಯತ್ತೆಯವರು ಈ ಯೋಜನೆಯಿಂದ ವಂಚಿತರಾಗಿದ್ದರು. ಒಂದೇ ಶಾಲೆಯ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡಿದಂತೆ ಆಗುತ್ತಿತ್ತು. ಇಂತಹ ಭೇದವನ್ನು ಹೋಗಲಾಡಿಸಿದ ತಮಗೆ ಧನ್ಯವಾದಗಳು. ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ತಾಚು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವಿನಂತಿಸಿದ್ದಳು ಆ ವಿದ್ಯಾರ್ಥಿನಿ.
ಬಾಲಕಿ ಬರೆದ ಪತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ”ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ. ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ. ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ” ಎಂದಿದ್ದರು.

ಪತ್ರ ಮತ್ತು ಸಿದ್ದರಾಮಯ್ಯ ಪ್ರತಿಕ್ರಿಯೆ ಬಗ್ಗೆ ಈದಿನ.ಕಾಮ್ ಜೊತೆಗೆ ವಿದ್ಯಾರ್ಥಿನಿ ಆಶಾ ನೆಹರು ಪಾಟೀಲ್ ಮಾತನಾಡಿ, “ಸರ್ಕಾರದ ಯೋಜನೆಗಳು ಎಲ್ಲರಿಗೂ ಸಮಾನವಾಗಿ ದೊರಕುವಂತಾಗಲೆಂದು ಈ ಪತ್ರವನ್ನು ಬರೆಯಲು ಕಾರಣವಾಯಿತು. ಎಂಟನೆ ತರಗತಿಯವರೆಗೆ ಮಾತ್ರ ಪೌಷ್ಠಿಕ ಆಹಾರ ನೀಡಿ ಒಂಭತ್ತು ಮತ್ತು ಹತ್ತನೆ ತರಗತಿಯವರಿಗೆ ನೀಡದಿರುವುದಕ್ಕೆ ವಿದ್ಯಾರ್ಥಿಗಳಲ್ಲಿ ಪರಸ್ಪರ ತಾರತಮ್ಯ ಉಂಟಾಗುತ್ತಿತ್ತು. ಅದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೋಗಲಾಡಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ನಾನು ಮುಖ್ಯಮಂತ್ರಿಗಳನ್ನು ಭೆಟಿ ಮಾಡಬೇಕೆಂದು ಆಸೆಪಟ್ಟಿರುವೆ. ಭೇಟಿಯಾದರೆ ಅವರಿಗೆ ರಾಜ್ಯದ ಜನತೆಯ ಪರವಾಗಿ, ವಿದ್ಯಾರ್ಥಿ/ವಿದ್ಯಾರ್ಥಿನೀಯರ ಪರವಾಗಿ ಅನಂತ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ” ಎಂದು ಹೇಳಿದಳು.
ಈ ಕುರಿತು ಈದಿನ.ಕಾಮ್ ಜೊತೆಗೆ ಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಬೆಳವಟಿಗಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಇಷ್ಟವಾಗುವ ಪೌಷ್ಠಿಕ ಆಹಾರವನ್ನು ನೀಡುತ್ತಿರುವ ಸರ್ಕಾರದ ಈ ಪೂರಕ ಪೌಷ್ಠಿಕ ಆಹಾರ ಯೋಜನೆ ಉತ್ತಮವಾಗಿದೆ. ಈ ಬಗ್ಗೆ ನಮ್ಮ ಶಾಲೆಯ ವಿದ್ಯಾರ್ಥಿನಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸಂತಸದ ವಿಚಾರ ಎಂದು ಹರ್ಷ” ವ್ಯಕ್ತಪಡಿಸಿದರು.
ಈ ಬಗ್ಗೆ ಈದಿನ.ಕಾಮ್ ಜೊತೆಗೆ ವಿದ್ಯಾರ್ಥಿನಿಯ ತಂದೆ ನೆಹರು ಪಾಟೀಲ್ ಮಾತನಾಡಿ ಪುಟ್ಟ ಬಾಲಕಿ ಬರೆದಿರುವ ಪತ್ರಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸ್ಪಂದನೆ ನೀಡುತ್ತಾರೆ ಎಂದು ಅನಿಸಿದ್ದಲ್ಲ. ಅದರ ಬೆನ್ನಲ್ಲೆ ಸಿಎಂ ಕೂಡಾ ನನ್ನ ಮಗಳು ಬರೆದ ಪತ್ರಕ್ಕೆ ಸ್ಪಂದನೆ ನೀಡಿದ್ದಾರೆ. ಮತ್ತು ಪತ್ರ ಬರೆದ ನನ್ನ ಮಗಳಿಗೆ ಸರ್ಕಾರಿ ಶಾಲೆಗಳು ಬಲವರ್ಧನೆ ಆಗಬೇಕು, ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳು ದೊರಕಬೇಕು ಅನ್ನುವುದು ಬಿಟ್ಟರೆ; ಇನ್ನಾವುದೆ ವ್ಯಯಕ್ತಿಕ ಅಭಿಲಾಷೆ ಹೊಂದಿರಲಿಲ್ಲ. ಪತ್ರ ಬರೆದಿದ್ದಕ್ಕೆ ನನ್ನ ಮನಸ್ಸಿಗೆ ಸಾರ್ಥಕವೆನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.