ರೂಪ ಹಾಸನ ಅವರು ಬರೆದಿರುವ ’ಮಹಾಸಂಗ್ರಾಮಿ- ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ’ ಕೃತಿ ಬಿಡುಗಡೆ ಮಾಡಲಾಯಿತು
“ಸಾಹಿತ್ಯಮಯವಾಗಿದ್ದ ಪ್ರತಿಭಟನೆಯ ಸ್ವರೂಪಕ್ಕೆ ಹೊಸ ದಿಕ್ಕು ದಿಸೆಯನ್ನು ಕೊಟ್ಟಿದ್ದು ಎಸ್.ಆರ್.ಹಿರೇಮಠರು” ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅಭಿಪ್ರಾಯಪಟ್ಟರು.
ಸಮಾಜ ಪರಿವರ್ತನಾ ಸಮುದಾಯ (ಧಾರವಾಡ), ಜನಾಂದೋಲಗಳ ಮಹಾಮೈತ್ರಿ, ಜನಸಂಗ್ರಾಮ ಪರಿಷತ್, ಅಭಿರುಚಿ ಪ್ರಕಾಶನ (ಮೈಸೂರು) ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ರೂಪ ಹಾಸನ ಅವರು ಬರೆದಿರುವ ’ಮಹಾಸಂಗ್ರಾಮಿ- ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ’ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕಳೆದ ಐವತ್ತು- ಅರವತ್ತು ವರ್ಷಗಳಿಂದ ಪ್ರತಿಭಟನಾ ಪರಂಪರೆಯನ್ನು ನಿರ್ವಹಿಸುತ್ತಾ ಬಂದಿರುವ ಭಾಷೆಯು ಸಾಹಿತ್ಯದ ಭಾಷೆಯಾಗಿದೆ. ಉಪರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳುವಾಗಲೂ ಸಾಹಿತ್ಯದ ಭಾಷೆ ಬಳಸಿದ್ದೇವೆ. ಎಲ್ಲ ಪ್ರತಿಭಟನೆಗಳ ಊರುಗೋಲು ಸಾಹಿತಿಗಳು ಮತ್ತು ಸಾಹಿತ್ಯ ಆಗಿಬಿಟ್ಟಿದೆ. ದಲಿತ ಚಳವಳಿ ಎಂದ ತಕ್ಷಣ ದೇವನೂರರು ಬರುತ್ತಾರೆ. ಇನ್ಯಾವುದೋ ವಿಚಾರ ಎಂದಾಗ ಕಾರಂತರು ಕಾಣಿಸಿಕೊಳ್ಳುತ್ತಾರೆ. ಭಾಷೆಯ ಅಸ್ಮಿತೆಯ ವಿಚಾರ ಎಂದಾಗ ಕುವೆಂಪು ಬರುತ್ತಾರೆ. ಪರಿಸರದ ವಿಚಾರ ಬಂದಾಗ ತೇಜಸ್ವಿಯವರು ರೂಪಕ, ಉಪಮೆ, ಕಲ್ಪನೆಗಳಲ್ಲಿ ಮಾತನಾಡುತ್ತಾರೆ. ಕನ್ನಡದ ಪ್ರತಿಭಟನಾ ಮಾದರಿ ಸಾಹಿತ್ಯಿಕವಾಗಿದೆ. ಇದನ್ನು ಸಂಪೂರ್ಣವಾಗಿ ಒಡೆದು ಪ್ರತಿಭಟನೆಗೆ ಹೊಸ ಆಯಾಮವನ್ನು ಕೊಟ್ಟಿದ್ದು ಹಿರೇಮಠರು” ಎಂದು ತಿಳಿಸಿದರು.
ಹಿರೇಮಠರು ಸಾಹಿತ್ಯದ ಭಾಷೆಯಲ್ಲಿ ಮಾತನಾಡಿಲ್ಲ. ಸಂವಿಧಾನದ ಭಾಷೆಯಲ್ಲಿ, ಪಿಐಎಲ್, ಆರ್ಟಿಐ, ಶಾಸನ ಸಭೆಯ ಭಾಷೆಯಲ್ಲಿ ಮಾತನಾಡಿದ್ದಾರೆ. ಬೇಡವಾದ ಕಡೆಯಲ್ಲೆಲ್ಲ ನಾವು ಸಾಹಿತಿಗಳಿಗೆ ಜಾಗ ಮಾಡಿಕೊಟ್ಟಿದ್ದರಿಂದ ಕನ್ನಡದ ಹೋರಾಟದ ಸ್ವರೂಪ ಕುಂಠಿತವಾಯಿತು ಎಂದು ಟೀಕಿಸಿದರು.
ರೈತ ಚಳಿವಳಿಯಲ್ಲಿ ನಂಜುಂಡಸ್ವಾಮಿಯವರು ಸ್ವತಂತ್ರವಾಗಿ ಕಂಡರೂ ಅಲ್ಲಿ ತೇಜಸ್ವಿ ಕಾಣಿಸಿಕೊಳ್ಳುತ್ತಾರೆ. ಲಂಕೇಶದ ಪ್ರತಿಭಟನೆಯೂ ಇದಕ್ಕೆ ಹೊರತಲ್ಲ. ಅವರ ಟೀಕೆಟಿಪ್ಪಣಿಯಲ್ಲಿ ಬೇಡವಾದ ಕಡೆಯಲೆಲ್ಲ ಹೆಮ್ಮಿಂಗ್ವೆ, ಏಟ್ಸ್ ನುಸುಳಿಬಿಡುತ್ತಾರೆ. ಅವರ ಪ್ರವೇಶ ಬಿಂದು ಸಾಹಿತ್ಯವೇ ಆಗಿರುತ್ತಿತ್ತು. ಅದನ್ನು ಸಂಪೂರ್ಣವಾಗಿ ಒಡೆದು ಹಾಕಿದ್ದು ಹಿರೇಮಠದ ಹೋರಾಟದ ಮಾದರಿ ಎಂದು ವಿಶ್ಲೇಷಿಸಿದರು.
ನಮ್ಮ ಪ್ರತಿಭಟನಾ ಭಾಷೆಗೂ ಹಿರೇಮಠರ ಪ್ರತಿಭಟನಾ ಭಾಷೆಗೂ ವ್ಯತ್ಯಾಸವಿದೆ. ಕೆಲವು ಕಡೆ ಹಿರೇಮಠರು ಕಾರಂತರ ಹಾಗೆ, ಲಂಕೇಶರ ಹಾಗೆ ಕಾಣುತ್ತಾರೆ. ಆದರೆ ಹಿರೇಮಠರು ಬೇರೆಡೆಗೆ ಜಂಪ್ ಆಗುತ್ತಾರೆ. ಹಿರೇಮಠರು ಕೈಗೊಂಡ ಎಲ್ಲ ಹೋರಾಟಗಳು ಯಶಸ್ವಿಯಾಗಿವೆ. ಅವರಿಗೆ ಯಾವುದೇ ಇಸಂನ ಹಂಗಿಲ್ಲ. ವಿಶಾಲವಾದ ಮಾನವೀಯ ದೃಷ್ಟಿಯ ನೆಲೆಯಲ್ಲಿ ನಿಂತು ಮಾತನಾಡುತ್ತಾರೆ. ಗಾಂಧಿ, ಜೆಪಿ ಅವರೊಳಗೆ ಕಾಣುತ್ತಾರೆ. ಹೀಗಾಗಿ ಇವತ್ತಿನ ಸಂದರ್ಭದಲ್ಲಿ ಅವರು ನಿಜವಾದ ಪಬ್ಲಿಕ್ ಇಂಟೆಲೆಕ್ಚುಯಲ್ ಎಂದು ಬಣ್ಣಿಸಿದರು.

ಕರ್ನಾಟಕದಲ್ಲಿ ಎರಡು ರೀತಿಯ ಇಂಟಲೆಕ್ಚುಯಲ್ ಇದ್ದಾರೆ. ಒಂದು ಕಾಂಗ್ರೆಸ್ ಬುದ್ಧಿಜೀವಿಗಳು, ಮತ್ತೊಂದು ಬಿಜೆಪಿ ಬುದ್ಧಿಜೀವಿಗಳು. ಸರ್ಕಾರ ಬದಲಾದಾಗ ಕಚೇರಿಯ ಮುಂದೆ ನಿಲ್ಲುವ ಮುಖಗಳು ಬೇರೆ ಇರುತ್ತವೆಯಷ್ಟೇ. ಆದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಶ್ನೆ ಮಾಡುವವರು ಹಿರೇಮಠರು. ಇದು ಅವರ ಮಾರ್ಗ. ಇದು ಕಷ್ಟದ ಮಾರ್ಗವೂ ಹೌದು, ಹಠದ ಮಾರ್ಗವೂ ಹೌದು. ಹೀಗಾಗಿ ಅವರು ಕ್ರೇಜಿಸ್ಟಾರ್, ಸಾಹಸಸಿಂಹ ಎಂದು ಹೊಗಳಿದರು.
ಚಿಂತಕರಾದ ಡಾ.ನಟರಾಜ್ ಹುಳಿಯಾರ್ ಅವರು ಬಳಿಕ ಮಾತನಾಡಿ, ಸುಗತ ಅವರ ನಿಲುವಿನ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. “ಅನೇಕ ಸಂಗ್ರಾಮಗಳನ್ನು ಕಟ್ಟಿದವರು ಈ ಕಾರ್ಯಕ್ರಮದಲ್ಲಿದ್ದಾರೆ. ಇವರೆಲ್ಲರೂ ಸೇರಿ ಹಿರೇಮಠರು ರೂಪುಗೊಂಡಿದ್ದಾರೆ. ರೂಪ ಹಾಸನ ಅವರ ಪ್ರತಿಭೆ ಮತ್ತು ಹೋರಾಟಗಾರ ಹಿರೇಮಠರು ಸೇರಿ ಸೃಷ್ಟಿಯಾಗಿರುವ ಪುಸ್ತಕವಿದು. ಇದು ಕರ್ನಾಟಕದ ವಿಶಿಷ್ಟ್ಯ. ಸಾಹಿತಿಗಳು ಮತ್ತು ಹೋರಾಟಗಾರರು ಎಂದು ವಿಭಾಗಿಸಿ ವಾದಗಳನ್ನು ಅನಗತ್ಯವಾಗಿ ಚೆಲ್ಲಬೇಡಿ” ಎಂದು ಮನವಿ ಮಾಡಿದರು.

“ಶಿವರಾಮ ಕಾರಂತರ ಒಂದು ಸಾಲಿನಿಂದ ಹಿರೇಮಠರ ಜೀವನ ಬದಲಾಯಿತು. ಬಸವಣ್ಣನವರ ಕುರಿತ ಒಂದು ಪ್ರವಚನದಿಂದ ಅವರ ಬದುಕು ಹೊಸ ತಿರುವು ಕಂಡಿದೆ. ಅವರು ಬಳಸುವ ಭಾಷೆ- ಸಂವಿಧಾನಾತ್ಮಕವಾಗಿದೆ. ಲಂಕೇಶರು ನಮ್ಮನ್ನೆಲ್ಲ ಪ್ರೇರೇಪಿಸಿದ್ದಾರೆ. ಸಾಹಿತ್ಯ ಮತ್ತು ಹೋರಾಟದ ಅಪೂರ್ವ ಸಂಗಮ ಕರ್ನಾಟಕದಲ್ಲಿದೆ. ಹಿರೇಮಠರು ಕೈಗೊಂಡ ನಿರ್ಭೀತ ಕಾನೂನು ಹೋರಾಟಗಳಿಂದಾಗಿ ರಾಜಕೀಯ ತಿರುವುಗಳಾಗಿವೆ” ಎಂದು ಪ್ರತಿಕ್ರಿಯಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, “1982ರಲ್ಲಿ ಹಿರೇಮಠರು ವೈಯಕ್ತಿಕವಾಗಿ ನನಗೆ ಪರಿಚಯವಾದರು. ಎಲ್ಲರ ಹಾಗೆ ಇಲ್ಲಿ ನಾನು ಕೂಡ ಅವರ ಅಭಿಮಾನಿ. ನಮ್ಮ ದೇಹದಲ್ಲಿ ರಸಗ್ರಂಥಿಗಳ ಚಿಕ್ಕದಾಗಿ ಇರುತ್ತವೆ. ಆದರೆ ಇಡೀ ಅಂಗಾಂಗಗಳ ಮೇಲೆ ಪ್ರಭಾವ ಬೀರುತ್ತವೆ. ಹಿರೇಮಠರ ಕೆಲಸ ರಸಗ್ರಂಥಿಯ ರೀತಿ. ಕರ್ನಾಟದಿಂದ ಶುರುವಾಗಿ, ಇಡೀ ದೇಶದ ಮೇಲೆ ಅವರ ಕೆಲಸಗಳು ಪ್ರಭಾವ ಬೀರಿವೆ” ಎಂದು ಹೇಳಿದರು.
“ಈ ಕೃತಿಗಾಗಿ ಸುಮಾರು 120 ತಾಸುಗಳ ಧ್ವನಿ ಮುದ್ರಣವನ್ನು ರೂಪ ಹಾಸನ ಅವರು ಮಾಡಿಕೊಂಡಿದ್ದಾರೆ. ಅದನ್ನೆಲ್ಲ ಸಂಗ್ರಹಿಸಿಡುವ ವ್ಯವಸ್ಥೆ ಆಗಬೇಕು. ಹಿರೇಮಠದ ಅವರ ಮಾತುಗಳಲ್ಲಿ ಹಾಸ್ಯಪ್ರಜ್ಞೆ ಇದೆ. ನಮ್ಮ ಜನರಲ್ಲಿ ಹಾಸ್ಯಪ್ರಜ್ಞೆಯ ಕೊರತೆ ಇದೆ. ಉದಯನಿಧಿ ಏನೋ ಹೇಳಿದರೆ- ತಲೆ ಕಡಿಯಿರಿ ಎನ್ನುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಲೇಖಕಿ ಡಾ.ಪಿ.ಭಾರತೀದೇವಿ ಮಾತನಾಡಿ, “ನಮ್ಮ ತಲೆಮಾರು ಬಾಬ್ರಿ ಮಸೀದಿ ದ್ವಂಸ, ಜಾಗತೀಕರಣದ ಕಪಿಮುಷ್ಠಿಯನ್ನು ನೋಡುತ್ತಾ ಬೆಳೆದಿದೆ. 70ರ ದಶಕದಲ್ಲಿ ನಡೆದಿರುವ ಹೋರಾಟಗಳ ದಾಖಲೆಯಾಗಿ ಈ ಕೃತಿ ನಮ್ಮ ಮುಂದಿದೆ” ಎಂದು ತಿಳಿಸಿದರು.
ಬಸವಣ್ಣ, ಗಾಂಧಿ, ಅಂಬೇಡ್ಕರ್ ವಿಚಾರಗಳು ವಿಶೇಷವಾಗಿ ಬೆರೆತು ಹಿರೇಮಠರ ವ್ಯಕ್ತಿತ್ವ ರೂಪುಗೊಂಡಿದೆ ಎಂದರು.
ಕೃತಿಯ ಲೇಖಕಿ ರೂಪ ಹಾಸನ ಮಾತನಾಡಿ, “ಯುವಜನರು ಚದುರಿ ಹೋಗಿದ್ದಾರೆ. ರಚನಾತ್ಮಕವಾಗಿ ನಮ್ಮ ಹಿರಿಯರು ಮಾಡಿರುವ ಕೆಲಸಗಳನ್ನು ಅವರಿಗೆ ಹೇಳಬೇಕು. ಈ ಕೃತಿಗಾಗಿ ಸಂಗ್ರಹಿಸಿರುವ ವಿಚಾರಗಳನ್ನು ವೆಬ್ಸೈಟ್ ಮೂಲಕ ದಾಖಲಿಸಿಡಬೇಕು” ಎಂದು ಆಶಿಸಿದರು.
ಹೋರಾಟಕ್ಕೆ ಪ್ರೇರಣೆಯಾಗಿದ್ದು ನನ್ನ ತಾಯಿ: ಎಸ್.ಆರ್.ಹಿರೇಮಠ
ಕೃತಿ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ ಅವರು, “ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರೇಪಣೆ ಪಡೆದವರು ನಮ್ಮ ತಾಯಿ. ನಾನು ಅಮೆರಿಕಕ್ಕೆ ಹೋಗುವಾಗ, ಭಿನ್ನ ಸಂಸ್ಕೃತಿಯನ್ನು ಅರಿತುಕೊಳ್ಳಲು ತಿಳಿಸಿದ್ದರು. ಜೊತೆಗೆ ಗಾಂಧಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್ ಅವರಂತೆ ದೇಶಕ್ಕೆ ಮರಳಿ ದೇಶಕ್ಕಾಗಿ ಏನಾದರೂ ಕೆಲಸ ಮಾಡಲು ಹೇಳಿದ್ದರು” ಎಂದು ಮೆಲುಕು ಹಾಕಿದರು.
ಕಾಯಕವೇ ಕೈಲಾಸ, ದಾಸೋಹ, ನಾವೆಲ್ಲ ಸಮಾನರು, ಜಾತಿ ವ್ಯವಸ್ಥೆ ತಪ್ಪು, ಲಿಂಗ ಅಸಮಾನತೆ ತಪ್ಪು ಮೊದಲಾದ ವಿಚಾರಗಳು ನನಗೆ ಪ್ರೇರಣೆಯಾಗಿವೆ. ಉತ್ಸಾಹದ ಚಿಲುಮೆಯಾಗಿದೆ ಎಂದು ತಿಳಿಸಿದರು.
ಬೇರೆ ಬೇರೆ ಹೋರಾಟಗಳಲ್ಲಿ ಜನರು ಸಾಕಷ್ಟು ಪ್ರೀತಿಯನ್ನು ಕೊಟ್ಟಿದ್ದಾರೆ. ಅದು ನನಗೆ ಪ್ರೇರಣೆಯಾಗಿದೆ. ಜನರು ತಮ್ಮ ಜೀವವನ್ನೇ ಮುಡಿಪಾಡಿಟ್ಟು ಮುಂದೆ ಬಂದಿದ್ದಾರೆ. ಅವರೇ ನನ್ನ ಶಕ್ತಿ ಎಂದರು ಕೃತಜ್ಞತೆ ಸಲ್ಲಿಸಿದರು.
ಜನಸಂಗ್ರಾಮ ಪರಿಷತ್ನ ರಾಘವೇಂದ್ರ ಕುಷ್ಟಗಿ ಸ್ವಾಗತ ಕೋರಿದರು. ಕೃತಿಯ ಪ್ರಕಾಶಕರಾದ ಅಭಿರುಚಿ ಗಣೇಶ್ ವಂದನಾರ್ಪಣೆ ಸಲ್ಲಿಸಿದರು. ಪತ್ರಕರ್ತ ಅರಕಲಗೂಡು ಜಯಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ರೂಪ ಹಾಸನ ಅವರ ಪೋಷಕರಾದ ಡಾ.ಎಸ್.ಪ್ರಸನ್ನಕುಮಾರ್, ಪಿ.ಹೇಮಾಲತಾ, ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಚಿಂತಕರಾದ ವಿ.ಬಾಲಸುಬ್ರಮಣ್ಯಂ, ಪ್ರೊ.ಸ.ಉಷಾ, ಪ್ರೊ.ಮಂಜಪ್ಪ, ಡಿ.ಆರ್.ಪಾಟೀಲ್ ಮೊದಲಾದವರು ಹಾಜರಿದ್ದರು.