ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೆ.11 ರಂದು ಖಾಸಗಿ ಸಾರಿಗೆ ಒಕ್ಕೂಟ ಮುಷ್ಕರ ನಡೆಸುತ್ತಿದ್ದು, ನಗರದೆಲ್ಲೆಡೆ ಕ್ಯಾಬ್ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ದಿನನಿತ್ಯ ರಸ್ತೆಗೆ ಇಳಿಯುತ್ತಿದ್ದಂತಹ ಆಟೋ ರಿಕ್ಷಾಗಳ ಸಂಖ್ಯೆ ಎರಡಂಕಿಯಷ್ಟಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವರು ಹೆಚ್ಚಿನ ದರದೊಂದಿಗೆ ಆಟೋ ಸಂಚಾರ ನಡೆಸುತ್ತಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟ ನಡೆಸುತ್ತಿರುವ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಹಲವು ಖಾಸಗಿ ಬಸ್, ಆಟೋ, ಓಲಾ, ಉಬರ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ಖಾಸಗಿ ವಾಹನಗಳ ಸಂಚಾರ ಬಂದ್ ಆದ ಕಾರಣ ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳಲು ಕಷ್ಟಪಡುವಂತಾಗಿದೆ.
ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಖಾಸಗಿ ಆಟೋ, ಟ್ಯಾಕ್ಸಿ ಮತ್ತು ವಾಹನಗಳ ಚಾಲಕರ ಒಕ್ಕೂಟವು ತಮ್ಮ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಬಂದ್‌ಗೆ ಕರೆ ಕೊಟ್ಟಿದೆ.
ಜನರು ಪರ್ಯಾಯ ಮಾರ್ಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ಸಂಚಾರ ನಡೆಸುತ್ತಿದ್ದಾರೆ. ಜನದಟ್ಟಣೆ ಅನುಸಾರ ಮೆಟ್ರೋ ಓಡಾಟ ಹೆಚ್ಚಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.
ಈ ಹಿಂದೆ ಹೆಚ್ಚುವರಿ ಜನಸಂದಣಿ ಇರುವ ಸಮಯದಲ್ಲಿ ಮಾತ್ರ ಐದು ನಿಮಿಷಕ್ಕೊಂದು ಮೆಟ್ರೋ ಸಂಚಾರ ನಡೆಸುತ್ತಿತ್ತು. ಸೆ. 11ರಂದು ಖಾಸಗಿ ವಾಹನಗಳ ಸಂಚಾರ ಬಂದ್ ಇರುವ ಕಾರಣ ಇವತ್ತು ಕೂಡ ಐದು ನಿಮಿಷಕ್ಕೊಂದು ಮೆಟ್ರೋ ಸಂಚಾರ ನಡೆಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಬಿಎಂಟಿಸಿ : 4000 ಹೆಚ್ಚುವರಿ ಟ್ರಿಪ್
ನಾನಾ ಖಾಸಗಿ ಸಾರಿಗೆಗಳ ಒಕ್ಕೂಟಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ಗಳು ಸೆ.11 ರಂದು ಕಾರ್ಯಾಚರಣೆ ನಡೆಸಲಿವೆ.
ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ 5601 ಅನುಸೂಚಿಗಳಿಂದ 57,450 ಟ್ರಿಪ್ ಕಾರ್ಯಾಚರಣೆಗೊಳಿಸುತ್ತಿದೆ.
ಬಂದ್ ಇರುವ ಹಿನ್ನೆಲೆ, ಬೆಂಗಳೂರಿನ ಶಾಲಾ/ಕಾಲೇಜು ಮಕ್ಕಳು ಹಾಗೂ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ, ನಗರದ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ/ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ/ಒಳ ವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ 500 ಅನುಸೂಚಿಗಳಿಂದ ಸುಮಾರು 4000 ಹೆಚ್ಚುವರಿ ಟ್ರಿಪ್ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದೆ.
ಕೆಲವೆಡೆ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬಂದಲ್ಲಿ ಅಂತಹ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 100 ಹೆಚ್ಚುವರಿ ಟ್ರಿಪ್ ಕಲ್ಪಿಸಲಾಗಿದ್ದು, ಬೇಡಿಕೆಗನುಗುಣವಾಗಿ ಇನ್ನು ಹೆಚ್ಚಿನ ಟ್ರಿಪ್ ವ್ಯವಸ್ಥೆ ಮಾಡಲಾಗುವುದು ಎಂದು ಈ ದಿನ.ಕಾಮ್‌ಗೆ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಹೇಳಿದರು.
ಸಂಚಾರ ಬದಲಾವಣೆ
ಖಾಸಗಿ ವಾಹನಗಳ ಬಂದ್ ಇರುವ ಹಿನ್ನೆಲೆ, ಕೇಂದ್ರ ರೈಲ್ವೆ ನಿಲ್ದಾಣದಿಂದ ಖಾಸಗಿ ವಾಹನಗಳ ರ‍್ಯಾಲಿ ಏರ್ಪಡಿಸಲಾಗಿದೆ. ಹಾಗಾಗಿ, ಖೋಡೆ ಸರ್ಕಲ್‍ಗೆ ಬರುವ ವಾಹನಗಳು, ಆರ್.ಆರ್.ಜಂಕ್ಷನ್ ಮೂಲಕ ಕೃಷ್ಣ ಫ್ಲೋರ್, ಮಲ್ಲೇಶ್ವರಂ ಕಡೆಗೆ ತೆರಳಬೇಕು. ಗೂಡ್‍ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು, ಜಿ.ಟಿ.ರಸ್ತೆ ಮುಖಾಂತರ ಸಂಗೊಳ್ಳಿರಾಯಣ್ಣ ಸರ್ಕಲ್, ಓಕಳಿಪುರಂ, ಸುಜಾತ ರಸ್ತೆಯಲ್ಲಿ ತೆರಳಬೇಕು.
ಆನಂದ್‍ರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು, ಹಳೇ ಜೆಡಿಎಸ್ ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು. ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು, ಪ್ಯಾಲೇಸ್ ರಸ್ತೆ, ಮಹಾರಾಣಿ ಅಂಡರ್‌ಪಾಸ್, ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.