ಮೈಕ್ರೋಸ್ಕೋಪು | ಹೆಸರು ಬದಲಿಸುವ ಬಿಸಿ-ಬಿಸಿ ಚರ್ಚೆ; ಇಲ್ಲೊಂದು ಇಂಡಿಯಾ, ಅಲ್ಲೆರಡು ದುಂಬಿ

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಪರಿಸರದಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಅವಶ್ಯಕ್ಕಿಂತ ಅನವಶ್ಯ ವಿಷಯಗಳಿಗೇ ಹೆಚ್ಚು ಒತ್ತು ಕೊಡುತ್ತಿರುವ ಮನುಷ್ಯನ ಹೆಸರನ್ನು 'ಹೋಮೋ ಸೇಪಿಯನ್ಸ್‌'ನಿಂದ 'ಹೋಮೋ ಸ್ಟಲ್ಟಸ್‌' ಎಂದು ಬದಲಿಸೋಣವಾ? ಏಕೆಂದರೆ, ಸೇಪಿಯೆನ್ಸ್‌ ಎಂದರೆ 'ವಿವೇಕಿ.' 'ಸ್ಟಲ್ಟಸ್‌' ಎಂದರೆ ಅವಿವೇಕಿ ಎಂದರ್ಥ

ನಮ್ಮ ನಾಡಿಗೆ ಭಾರತ ಎನ್ನುವ ಹೆಸರು ಚಂದವೋ, ಇಂಡಿಯಾ ಒಪ್ಪುವುದೋ ಎನ್ನುವ ಚರ್ಚೆ ಬಿಸಿಯಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ನಮ್ಮ ದೇಶದ ‘ಇಂಡಿಯಾ’ ಎನ್ನುವ ಹೆಸರನ್ನು ತೆಗೆದು, ಕೇವಲ ‘ಭಾರತ’ ಎನ್ನುವ ಹೆಸರಿಗೆ ಬದಲಿಸಲಿದೆ ಎನ್ನುವ ಗುಮಾನಿ. ಹೆಸರು ಬದಲಿಸುವುದು ಏಕೆ ಎಂಬ ಪ್ರಶ್ನೆ ಒಂದು ಕಡೆಯಾದರೆ, ಇನ್ನೊಂದು ಕಡೆ ಇಟ್ಟ ಹೆಸರೇ ತಪ್ಪು ಎನ್ನುವ ವಾದವೂ ಇದೆ. ಒಟ್ಟಾರೆ ಹೆಸರಿನಲ್ಲೇನಿದೆ ಎಂದು ಕೇಳಿದ ಶೇಕ್ಸ್‌ಪಿಯರನ ಪ್ರಶ್ನೆ ಯಾರ ಕಿವಿಗೂ ಬಿದ್ದಂತಿಲ್ಲ. ಬಿದ್ದರೂ, ಅದು ತನ್ನದೇ ವಾದಕ್ಕೆ ಪುರಾವೆ ಅಂತ ಎರಡೂ ತಂಡದವರೂ ಹೇಳಬಹುದು.

ಇರಲಿ. ಹೆಸರು ಬದಲಿಸುವುದು ಅಷ್ಟು ಸುಲಭ ಅಲ್ಲ. ನಿತ್ಯಜೀವನದಲ್ಲಿ ನಮಗೆ ಅಮ್ಮ-ಅಪ್ಪ ಕೊಟ್ಟ ಹೆಸರನ್ನು ಬದಲಿಸುವುದೂ ಕಷ್ಟವೇ. ನನ್ನ ಉದ್ದನೆಯ ಹೆಸರನ್ನು ಚುಟುಕು ಮಾಡೋಣ ಅಂತ ಒಮ್ಮೆ ಪ್ರಯತ್ನಿಸಿದ್ದೆ. ಕಾರಣ ಇಷ್ಟೆ; ಎಸ್‌ಎಸ್‌ಎಲ್‌ಸಿಯಿಂದ ಆರಂಭಿಸಿ, ಸ್ನಾತಕೋತ್ತರ ಪದವಿಯವರೆಗೂ ನನ್ನ ಎಲ್ಲ ಅಂಕಪಟ್ಟಿ, ಪದವಿಪತ್ರಗಳಲ್ಲಿ ಹೆಸರು ತಪ್ಪಾಗಿ ನಮೂದಾಗಿರುತ್ತಿತ್ತು. ಒಂದೋ ಕೆಲವು ಅಕ್ಷರಗಳು ಕಳೆದುಹೋಗುತ್ತಿದ್ದುವು ಅಥವಾ ಸೇರಿಕೊಳ್ಳುತ್ತಿದ್ದುವು. ಹೀಗಾಗಿ, ಪ್ರತೀ ಬಾರಿಯೂ ವಿಶ್ವವಿದ್ಯಾನಿಲಯದ ಕಚೇರಿಗೋ, ಮಂಡಳಿಯ ಕಚೇರಿಗೋ ಅಲೆದಾಡಿ, ಅದರಲ್ಲಿ ತಿದ್ದುಪಡಿ ಮಾಡಿಸಿಕೊಂಡು ಬರಬೇಕಿತ್ತು. ಇದು ಸಾಕಾಗಿ, ಹೆಸರನ್ನು ಚುಟುಕಾಗಿಸೋಣ ಅಂತ ಹೊರಟಿದ್ದೆ. ಆದರೆ, ಅದಕ್ಕೆ ಪತ್ರಿಕೆಯಲ್ಲಿ ಪ್ರಕಟಣೆ ಕೊಡುವುದಲ್ಲದೆ, ಪ್ರತೀ ಅಂಕಪಟ್ಟಿಯನ್ನೂ ಮತ್ತೆ ಬದಲಿಸಬೇಕು ಎಂದಾಗ, ಕೊಟ್ಟ ಹೆಸರು ಕೊನೆಯವರೆಗೂ ಇರಲಿ ಅಂತ ಸುಮ್ಮನಾಗಬೇಕಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗಲೂ ಈ ಹೆಸರಿನ ತೊಂದರೆ ತಪ್ಪಿಲ್ಲ. ಪ್ಯಾನ್‌ ಕಾರ್ಡಿನಲ್ಲಿ ಇರುವಂತೆ ಆಧಾರ್‌ ಕಾರ್ಡಿನಲ್ಲಿ ಇಲ್ಲ. ಡಿಜಿಟಲೀಕರಣದ ಫಲವಾಗಿ, ಮೊದಲ ಹೆಸರು, ನಡುವಿನ ನಾಮ, ಸರ್‌ನೇಮ್‌ ಮೊದಲಾಗಿ ವಿಂಗಡಿಸಿದಾಗ, ಯಾವುದು ಮೊದಲು – ಯಾವುದು ನಂತರ ಎನ್ನುವ ಗೊಂದಲದಲ್ಲಿ ಬೀಳಬೇಕಾಗಿದೆ. ಇವು ಒಂದಕ್ಕೊಂದು ಹೊಂದಾಣಿಕೆ ಆಗದೆ ಆನ್‌ಲೈನ್‌ ಪಾವತಿ ಕಷ್ಟವಾಗಿದ್ದೂ ಇದೆ. ಕೆಲವು ಚೆಕ್ಕುಗಳನ್ನು ಮರಳಿಸಿ, ಹೆಸರು ತಿದ್ದಿಸಿ ತರಿಸಿಕೊಂಡಿದ್ದೂ ಉಂಟು. ಇಂತಹ ಸಮಸ್ಯೆಗಳು ನಮಗಷ್ಟೇ ಅಲ್ಲ, ವಿಜ್ಞಾನಿಗಳಿಗೂ ಇದೆಯಂತೆ. ಇತ್ತೀಚೆಗೆ ಎರಡು ದುಂಬಿಗಳ ಹೆಸರನ್ನು ಬದಲಿಸಬೇಕೆನ್ನುವ ಸುದ್ದಿ ಸದ್ದು ಮಾಡುತ್ತಿದೆ. ನೂರು ವರ್ಷಗಳ ಹಿಂದೆ ಈ ದುಂಬಿಗಳನ್ನು ಗುರುತಿಸಿದಾಗ, ಅದನ್ನು ಗುರುತಿಸಿದ ವಿಜ್ಞಾನಿಗಳು ತಾವು ಗೌರವ, ಹೆಮ್ಮೆಯಿಂದ ಕಾಣುತ್ತಿದ್ದ ವ್ಯಕ್ತಿಯ ನೆನಪಿನಲ್ಲಿ ಹೆಸರು ಕೊಟ್ಟಿದ್ದರು. ಈಗ ಈ ಹೆಸರು ಬೇಡ, ಹೊಸ ಹೆಸರು ಇಡಬೇಕು ಎಂಬ ವಾದ ಆರಂಭವಾಗಿದೆ.

ಇದು ಜರ್ಮನಿಯ ಕತೆ. 1934ನೇ ಇಸವಿಯಲ್ಲಿ ಅಲ್ಲಿನ ಒಬ್ಬ ಪಳೆಯುಳಿಕೆ ತಜ್ಞ ಹೊಸದೊಂದು ಕೀಟದ ಪಳೆಯುಳಿಕೆಯನ್ನು ಪತ್ತೆ ಮಾಡಿದ. ಸುಮಾರು 29ರಿಂದ 35 ಕೋಟಿ ವರ್ಷಗಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಅದು, ಅರಗಿನಲ್ಲಿ ಸೆರೆಯಾಗಿ ಉಳಿದಿದ್ದ ಒಂದು ದುಂಬಿ. ಅದನ್ನು ಆತ ಆಗ ಜರ್ಮನಿಯಲ್ಲಿ ಸುಪ್ರಸಿದ್ಧ ಉದ್ಯಮಿಯಾಗಿದ್ದ ರಾಶ್‌ಲಿಂಗ್‌ ಮತ್ತು ಅಂದು ಜರ್ಮನಿಯಲ್ಲಿ ಸರ್ವಾಧಿಕಾರಿಯಾಗಿದ್ದ ಹಿಟ್ಲರನ ಹೆಸರುಗಳನ್ನು ಸೇರಿಸಿ, ‘ರಾಶ್ಲಿಂಗಾ ಹಿಟ್ಲೇರಿ’ ಎಂದು ಹೆಸರಿಸಿದ್ದ. ಅನಂತರ ಕೆಲವು ವರ್ಷಗಳ ನಂತರ, ಆಗ ಹಿಟ್ಲರನ ಹಿಡಿತದಲ್ಲಿದ್ದ ಆಸ್ಟ್ರಿಯಾದ ಇನ್ನೊಬ್ಬ ಕೀಟತಜ್ಞ, ಸ್ಲೊವೇನಿಯಾದ ಕಗ್ಗತ್ತಲ ಗವಿಗಳಲ್ಲಿ ವಾಸವಿದ್ದ ಕುರುಡು ದುಂಬಿಯೊಂದನ್ನು ಪತ್ತೆ ಮಾಡಿದ. ಅದಕ್ಕೆ ‘ಅನಾಪ್ತಾಲ್ಮಸ್‌ ಹಿಟ್ಲೇರಿ’ ಎಂದು ಹೆಸರಿಸಿದ್ದ. ಇದು ಹೀಗೆಯೇ ಇರುತ್ತಿತ್ತೇನೋ… ಆದರೆ, ಅನಂತರ ಎರಡನೆಯ ಮಹಾಯುದ್ಧ ನಡೆಯಿತು. ಹಿಟ್ಲರನ ಕ್ರೌರ್ಯ ಮನೆಮಾತಾಯಿತು. ಇಂತಹ ಸರ್ವಾಧಿಕಾರಿಯ ಹೆಸರನ್ನು ಗೌರವಿಸಬೇಕೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನು ಬದಲಿಸಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ.

ಹೆಸರಿಟ್ಟವರು ರಾಷ್ಟ್ರಪ್ರೇಮದಿಂದ ಇಟ್ಟಿರಬಹುದು. ಆದರೆ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹೀಗೆ ವರ್ಣಭೇದ ನೀತಿಯನ್ನು ಬೆಂಬಲಿಸಿದ ಸರ್ವಾಧಿಕಾರಿಯೊಬ್ಬನ ಹೆಸರನ್ನು ಗೌರವಿಸುವುದು ಸರಿಯಲ್ಲ ಎನ್ನುವ ವಾದ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಕೆಲವು ಸಮಾಜವಿಜ್ಞಾನಿಗಳ ಪ್ರಕಾರ, ಎಲ್ಲ ದೇಶಗಳಲ್ಲಿಯೂ ಸಾಂಪ್ರದಾಯಿಕತೆ ಅಥವಾ ಬಲಪಂಥೀಯ ವಾದಗಳು ಬಲವಾಗುತ್ತಿವೆಯಂತೆ. ನಾಟ್ಜೀ ಚರಿತ್ರೆ ಇರುವ ಜರ್ಮನಿಯಲ್ಲಿ ಇದು ಚರಿತ್ರೆಯ ಮರುಕಳಿಕೆಯಷ್ಟೆ. ಆರ್ಯನ್ನರೇ ಶ್ರೇಷ್ಠ, ಉಳಿದವರೆಲ್ಲ ಕನಿಷ್ಠ ಎಂದು ಆಗ ಹಿಟ್ಲರ್‌ ಹೇಳಿದ ಸಿದ್ಧಾಂತವೇ ಈಗ ಮತ್ತೆ ಪ್ರಸಿದ್ಧಿ ಪಡೆಯುತ್ತಿದ್ದು, ಹಿಟ್ಲರನ ಹೆಸರು ಇದೆ ಎಂಬ ಮಾತ್ರಕ್ಕೇ ‘ಅನಾಪ್ತಾಲ್ಮಸ್‌ ಹಿಟ್ಲರಿ’ಯ ಲಕ್ಷಾಂತರ ದುಂಬಿಗಳನ್ನು ಜನ ಕೊಂಡು ಸಂಗ್ರಹಿಸುತ್ತಿದ್ದಾರೆ. ಇದೊಂದು ಕಾಳದಂಧೆಯೂ ಆಗಿಬಿಟ್ಟಿದೆ ಎನ್ನುತ್ತದೆ ‘ಸೈನ್ಸ್‌’ ನಿಯತಕಾಲಿಕೆ.

ಹಿಟ್ಲರನ ಅನುಯಾಯಿಗಳು ಹೀಗೆ ದುಂಬಿಯನ್ನು ಕೊಳ್ಳುವುದರಿಂದ ನಷ್ಟವೇನು ಎನ್ನಬೇಡಿ. ಈ ದುಂಬಿ ಬಹಳ ವಿಶೇಷ. ಇದೊಂದು ಕುರುಡು ದುಂಬಿ. ಕತ್ತಲ ಗುಹೆಯೊಳಗೆ ವಾಸವಾಗಿರುವುದರಿಂದ ದೃಷ್ಟಿ ಕಳೆದುಕೊಂಡಿರುವ ದುಂಬಿ. ಎಲ್ಲ ಕಡೆಯೂ ಸಿಗುವುದಿಲ್ಲ. ಇಷ್ಟು ವಿಶೇಷವಾದ ಇದು, ಹಿಟ್ಲರನ ಹೆಸರು ಇರುವುದರಿಂದಲೇ ಬೇಟೆಗೆ ಬಲಿಯಾಗಿ ನಾಶವಾಗುತ್ತಿದೆ. ಹೀಗಾಗಿ, ಜೀವಿವಿಜ್ಞಾನಿಗಳಿಗೆ ಆತಂಕ. ಹಿಟ್ಲರನ ಹೆಸರು ಇರುವ ಇನ್ನೊಂದು ದುಂಬಿ ಈಗ ಪಳೆಯುಳಿಕೆಯಷ್ಟೆ. ನೋಡಲು ಅಂತಹ ಪಳೆಯುಳಿಕೆಯೂ ಸಿಗದಂತೆ ಅನಾಪ್ತಾಲ್ಮಸ್‌ ಕಣ್ಮರೆಯಾಗಿಬಿಡಬಹುದು ಎನ್ನುವ ಆತಂಕ. ಹೀಗಾಗಿ, ಇದರ ಹೆಸರನ್ನು ಬದಲಿಸಬೇಕು. ನಾಟ್ಜೀ ಅಂಧಭಕ್ತಿಯಿಂದ ಈ ದುಂಬಿ ನಾಶವಾಗದಂತೆ ತಡೆಯಬಹುದು ಎನ್ನುವ ಆಸೆ.

ಜೀವಿಗಳ ಹೆಸರುಗಳ ಬಗ್ಗೆ ವಿವಾದ ಹೊಸದೇನಲ್ಲ. ಈ ಹಿಂದೆಯೂ ಹಲವು ಹೆಸರುಗಳನ್ನು ಬದಲಿಸಬೇಕೆಂಬ ಕೂಗು ಎದ್ದಿತ್ತು. ಸಾಂಸ್ಕೃತಿಕವಾಗಿ ಸಮಾಜ ನಾಗರಿಕವಾದಂತೆಲ್ಲ, ಕುಲ, ಜಾತಿ, ಲಿಂಗಗಳನ್ನು ನೀಚವಾಗಿ ಪ್ರತಿನಿಧಿಸುವ ಅಥವಾ ಅಂತಹ ಮನೋಭಾವದ ವ್ಯಕ್ತಿಗಳನ್ನು ನೆನಪಿಸುವ ಹೆಸರುಗಳನ್ನು ಇಡಬಾರದು ಎನ್ನುವವರಿದ್ದಾರೆ. ಈ ಕಾರಣಕ್ಕೆ ಹಲವು ಜೀವಿಗಳ ಹೆಸರುಗಳನ್ನು ಬದಲಿಸಬೇಕೆನ್ನುವ ಚರ್ಚೆಗಳು ನಡೆದಿದ್ದವು. ಹಿಟ್ಲರನ ಹೆಸರಷ್ಟೇ ಅಲ್ಲ. ಹಿಟ್ಲರನಂತೆಯೇ ಕುಖ್ಯಾತ ಚರಿತ್ರೆ ಇರುವ ಮುಸೊಲಿನಿಯ ಹೆಸರಿರುವ ಜೀವಿಗಳೂ ಇವೆ. ಇದೀಗ ಹಲವು ಕಾರಣಗಳಿಂದಾಗಿ ಅಪರಾಧಿ ಎನ್ನಿಸಿರುವ ಅಮೆರಿಕೆಯ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿನ ಚಿಟ್ಟೆಯೂ ಇದೆ. ಈ ಚಿಟ್ಟೆಯ ತಲೆಯಲ್ಲಿ ಟ್ರಂಪ್ ಕೂದಲಿನ ಬಣ್ಣದ ಹುರುಪೆಗಳು ಇದ್ದದ್ದಕ್ಕೆ ಆ ಹೆಸರು ನೀಡಲಾಗಿತ್ತು. ಈ ಇಬ್ಬರೂ ನಿರ್ದಿಷ್ಟ ಮಾನವ ಕುಲವೊಂದು ‍ಶ್ರೇಷ್ಠ ಎಂದು ಹೇಳುತ್ತಿದ್ದವರಾದ್ದರಿಂದ, ಈ ಜೀವಿಗಳ ಹೆಸರನ್ನೂ ಬದಲಿಸಬೇಕು ಎಂಬ ಒತ್ತಾಯವೂ ಬಂದಿದೆ.

ಆದರೆ, ಹಾಗೆಲ್ಲ ಸುಖಾಸುಮ್ಮನೆ ಹೆಸರುಗಳನ್ನು ಬದಲಿಸುವುದು ಬೇಡ ಎನ್ನುತ್ತದೆ ಪ್ರಾಣಿಗಳಿಗೆ ನೀಡುವ ವೈಜ್ಞಾನಿಕ ಹೆಸರುಗಳನ್ನು ದಾಖಲಿಸಿ, ವಿಧಿವತ್ತಾಗಿಸುವ ಅಂತಾರಾಷ್ಟ್ರೀಯ ಸಂಸ್ಥೆ ‘ಇಂಟರ್‌ನ್ಯಾಶನಲ್‌ ಕಮಿಷನ್‌ ಫಾರ್‌ ಜೂವಲಾಜಿಕಲ್‌ ನಾಮೆಂಕ್ಲೇಚರ್‌.’ ಪ್ರಪಂಚದ ಎಲ್ಲ ರಾಷ್ಟ್ರಗಳ ವಿಜ್ಞಾನಿಗಳೂ ಹೊಸದೊಂದು ಪ್ರಬೇಧ ಅಥವಾ ಜೀವಿಯನ್ನು ಪತ್ತೆ ಮಾಡಿದೆವೆಂದು ಖಾತ್ರಿ ಮಾಡಿಕೊಳ್ಳಲು ಈ ಕಮಿಷನ್ನಿನ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಜೊತೆಗೆ, ಅದು ಹೊಸ ಜೀವಿಯಾದರೆ, ಅದರ ನಾಮಕರಣಕ್ಕೆ ಕಾರಣಗಳನ್ನೂ ನೀಡಿ ಹೊಸ ಹೆಸರನ್ನು ನೀಡುತ್ತಾರೆ. ಇದು ವಿಶಿಷ್ಟ ಹೆಸರು, ಇಂಥದ್ದು ಇನ್ನೊಂದಿಲ್ಲ ಎಂದು ಖಾತ್ರಿಪಡಿಸಿಕೊಂಡ ಮೇಲೆ ಕಮಿಷನ್‌ ಆ ಹೆಸರನ್ನು ದಾಖಲಿಸುತ್ತದೆ. ಇಷ್ಟೆಲ್ಲ ಮಾಡುವುದಕ್ಕೆ ಕಾರಣ – ಪ್ರತಿಯೊಂದು ಜೀವಿ ಪ್ರಬೇಧವೂ ವಿಶಿಷ್ಟ, ಅದರಂಥದ್ದು ಇನ್ನೊಂದಿಲ್ಲ ಎನ್ನುವ ವಿಶ್ವಾಸ. ಈ ವೈಶಿಷ್ಟ್ಯ ಆ ಜೀವಿ ನೆಲೆಸಿರುವ ನೆಲೆ ಇರಬಹುದು, ಅದರ ದೇಹದ ಸ್ವರೂಪವಿರಬಹುದು ಅಥವಾ ಅದರ ತಳಿಗುಣಗಳಲ್ಲಿನ ಯಾವುದೋ ವೈಶಿಷ್ಟ್ಯವೂ ಇರಬಹುದು. ಸಾಮಾನ್ಯವಾಗಿ ದೊಡ್ಡ ಜೀವಿಗಳನ್ನು ಅವುಗಳ ನಡವಳಿಕೆ, ನೆಲೆ ಹಾಗೂ ದೇಹದ ಸ್ವರೂಪಗಳ ಆಧಾರದ ಮೇಲೆ ವಿಶಿಷ್ಟ ಎಂದು ಗುರುತಿಸುತ್ತಾರೆ. ಸೂಕ್ಷ್ಮ ಜೀವಿಗಳನ್ನು ಅವುಗಳ ತಳಿಗುಣ ಅರ್ಥಾತ್‌ ಡಿಎನ್‌ಎಯ ವ್ಯತ್ಯಾಸಗಳನ್ನು ಆಧರಿಸಿ ಪ್ರತ್ಯೇಕಿಸುತ್ತಾರೆ.

ಇಷ್ಟೆಲ್ಲ ವಿಧಿಗಳಿರುವಾಗ ತಟಕ್ಕನೆ ಹೆಸರು ಬದಲಿಸುವುದು ಸಾಧ್ಯವೇ? ಆದರೂ, ಹೆಸರನ್ನು ಬದಲಿಸಿದ ದಾಖಲೆಗಳಿವೆ. ಬಹುತೇಕ ಸಾಮಾನ್ಯ ನಾಮಗಳನ್ನು ಹೀಗೆ ಬದಲಿಸಿದ್ದಿದೆ. ಸಾಂಸ್ಕೃತಿಕವಾಗಿ ತಪ್ಪು ಮಾಹಿತಿಯನ್ನು ನೀಡುವ ಹೆಸರುಗಳನ್ನು ಬದಲಿಸಿದ್ದು ಉಂಟು. ಉದಾಹರಣೆಗೆ, ಅಮೆರಿಕದಲ್ಲಿ ‘ಲೈಮಾಂಟ್ರಿಯ ಡಿಸ್ಪಾರ್‌’ ಎನ್ನುವ ಪತಂಗಕ್ಕೆ ‘ಜಿಪ್ಸಿ ಪತಂಗ’ ಎನ್ನುವ ಹೆಸರಿತ್ತು. ‘ಜಿಪ್ಸಿ’ ಎನ್ನುವುದು ಅಲ್ಲಿನ ಅಲೆಮಾರಿ ಬುಡಕಟ್ಟು ಜನಾಂಗಗಳಿಗೆ ಯುರೋಪಿಯನ್ನರು ಇಟ್ಟ ಹೆಸರು. ಅದನ್ನು ಕೀಳಾಗಿ ಕಾಣುತ್ತಿದ್ದುದೂ ಉಂಟು. ಅಮೆರಿಕದ ಕೀಟತಜ್ಞರ ಸಂಘ ಎರಡು ವರ್ಷಗಳ ಹಿಂದೆ ಅದನ್ನು ಸ್ಪಾಂಜಿ ಪತಂಗ ಎಂದು ಮರುನಾಮಕರಣ ಮಾಡಿತು. ಜಿಪ್ಸಿ ಎನ್ನುವ ಜನಾಂಗದ ಭಾವನೆಗಳಿಗೆ ಧಕ್ಕೆ ಬಾರದಿರಲಿ ಎಂದು ಈ ಮರುನಾಮಕರಣ.

ನಮ್ಮಲ್ಲಿಯೂ ಹೀಗೆ ಕುಲ, ಜಾತಿ ಹಾಗೂ ಪಂಗಡಗಳ ಹೆಸರುಗಳನ್ನು ಬೈಗುಳದ ರೀತಿಯಲ್ಲಿ ಬಳಸುವುದು ಇದ್ದೇ ಇದೆ. ಮೊನ್ನೆ ಉಪೇಂದ್ರ ಅವರ ಮಾತಿನಿಂದ ಇಂತಹುದೊಂದು ವಿವಾದವೂ ಏರ್ಪಟ್ಟಿತ್ತು. ಆಫ್ರಿಕಾದಲ್ಲಿ ಕೆಲವು ಬೆಳೆಗಳಿಗೆ ಇರುವ ಇಂಗ್ಲೀಷು ಹೆಸರುಗಳು, ಹಿಂದೆ ಇಂಗ್ಲೀಷರು, ಫ್ರೆಂಚರು ಹಾಗೂ ಸ್ಪೇನೀಯರು ಅಲ್ಲಿ ಆಳುತ್ತಿದ್ದಾಗ ಇಟ್ಟಿದ್ದಂತವು. ಅವು ಅಲ್ಲಿನ ಮೂಲನಿವಾಸಿಗಳನ್ನು ಅವಗಣಿಸಿದಂಥವು. ಸುಪ್ರಸಿದ್ಧ ಪೋಷಣಾ ವಿಜ್ಞಾನಿ ಸಿ ಗೋಪಾಲನ್‌ ಈ ಬಗ್ಗೆ ಹೇಳುತ್ತಿದ್ದುದುಂಟು. ಉದಾಹರಣೆಗೆ, “ಹುರುಳಿಕಾಳನ್ನು ಇಂಗ್ಲೀಷಿನಲ್ಲಿ ‘ಹಾರ್ಸ್‌ ಗ್ರಾಂ’ ಎಂದು, ಅದು ಕುದುರೆಯ ಮೇವಿಗಷ್ಟೇ ಯೋಗ್ಯ ಎನ್ನುವಂತೆ ಬಿಂಬಿಸಲಾಗಿದೆ. ಹಾಗೆಯೇ, ಉದ್ದಿನಕಾಳನ್ನು ಕಪ್ಪು ಎಂದು ಹೀಗಳೆಯಲಾಗಿದೆ,” ಎನ್ನುತ್ತಿದ್ದರು.

ಆಫ್ರಿಕಾದಲ್ಲಿನ ಹಲವು ಬೆಳೆಗಳನ್ನು ‘ಮರೆತ ಧಾನ್ಯಗಳು’ ಎಂದು ಇಂಗ್ಲೀಷಿನಲ್ಲಿ ವರ್ಗೀಕರಿಸಿದ್ದಾರೆ. ನಮ್ಮಲ್ಲಿ ರಾಗಿ, ಜೋಳ, ಸಜ್ಜೆ, ನವಣೆಗಳನ್ನು ‘ಕಿರುಧಾನ್ಯಗಳು’ ಅಥವಾ ಮೈನರ್‌ ಮಿಲೆಟ್‌ ಎಂದು ಹೆಸರಿಸಿದ ಹಾಗೆ. ಇದು ತಪ್ಪು. ಇವು ಮರೆತ ಧಾನ್ಯಗಳಲ್ಲ, ಇಂದಿಗೂ ಆಫ್ರಿಕನ್ನರಲ್ಲಿ ಬಹಳಷ್ಟು ಜನರಿಗೆ ಹಸಿವು ನೀಗಿಸುವಂತಹವು. ಇವನ್ನು ಆಯಾ ಆಫ್ರಿಕನ್‌ ಹೆಸರುಗಳಿಂದಲೇ ಹೆಸರಿಸಬೇಕು ಎಂದು, ಆಫ್ರಿಕಾದ ಜೆ ಆರ್‌ ಬಯೋಟೆಕ್‌ ಫೌಂಡೇಶನ್ ಅಧ್ಯಕ್ಷರಾದ ಕೆರೋಲ್‌ ಇಬೆ ಇತ್ತೀಚೆಗೆ ‘ಸೆಲ್‌’ ಪತ್ರಿಕೆಯಲ್ಲಿ ವಾದಿಸಿದ್ದರು. ನಮ್ಮಲ್ಲಿ ನಾವು ಕಿರುಧಾನ್ಯಗಳನ್ನು ಸಿರಿಧಾನ್ಯ ಎಂದು ಕರೆದಾಗಿದೆ.

ವೈಜ್ಞಾನಿಕವಾಗಿ ಹೆಸರಿಡುವುದಕ್ಕೆ 250 ವರ್ಷಗಳ ಇತಿಹಾಸವಿದೆ. ಹಲವಾರು ಹಂತಗಳಲ್ಲಿ ಪ್ರತಿಯೊಂದು ಜೀವಿಯನ್ನು ಉಳಿದವುಗಳಿಂದ ಪ್ರತ್ಯೇಕವಾಗಿ ಗುರುತಿಸುವ ಗುಣಗಳನ್ನು ಪಟ್ಟಿ ಮಾಡಬೇಕು. ಅದರ ಜೀವನಚಕ್ರವನ್ನು ಅಧ್ಯಯನ ಮಾಡಬೇಕು. ತದನಂತರ ಅಂತಹುದೇ ಬೇರೊಂದು ಜೀವಿಯ ಪತ್ತೆ ಆಗಿದೆಯೇ ಇಲ್ಲವೇ ಗುರುತಿಸಬೇಕು. ಆಗಿಲ್ಲವಾದರೆ, ತಾವೊಂದು ಹೆಸರಿಟ್ಟು, ಅದನ್ನು ಒಪ್ಪಬೇಕೆಂದು ಪ್ರಾಣಿಗಳ ಅಥವಾ ಸಸ್ಯಗಳ ನಾಮಕರಣಕ್ಕೆ ಇರುವ ಅಂತಾರಾಷ್ಟ್ರೀಯ ಸಮಿತಿಯ ಸಮ್ಮತಿ ಪಡೆಯಬೇಕು. ಇವಿಷ್ಟೂ ಆದ ಮೇಲಷ್ಟೇ ಆ ಹೆಸರು ಚಾಲ್ತಿಗೆ ಬರುತ್ತದೆ. ಹೀಗಾಗಿ, ವೈಜ್ಞಾನಿಕ ನಾಮಗಳನ್ನು ಬದಲಿಸುವುದು ಸರಿಯಲ್ಲ. ಅದು ಮುಂದೆ ಬಹಳ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ ಎಂದು ಆಸ್ಟ್ರೇಲಿಯಾದ ಅಲೆನ್‌ ಹೀತ್‌ ಮತ್ತು ರಿಕಾರ್ಡೊ ಪಾಮ ‘ಬಯೋನಾಮಿನಾ’ ಪತ್ರಿಕೆಯಲ್ಲಿ ಪ್ರತಿವಾದಿಸಿದ್ದರು. ಮೂಲನಿವಾಸಿಗಳು ಕೊಟ್ಟಿರುವ ಹೆಸರುಗಳನ್ನೇ ಆಧರಿಸಿ ಹೊಸ ಹೆಸರುಗಳನ್ನಿಡಿ, ಇಂಗ್ಲೀಷು-ಲ್ಯಾಟಿನ್ನಿನವಲ್ಲ ಎನ್ನುವ ವಾದಕ್ಕೆ ಇದು ಉತ್ತರ.

ಹೀತ್‌ ಮತ್ತು ಪಾಮರ ಮಾತುಗಳು ನಿಜವೇ. ಉದಾಹರಣೆಗೆ, ಕೆಲವು ವರ್ಷಗಳ ಹಿಂದೆ ಪೆನಿಸಿಲಿನ್‌ ಔಷಧವನ್ನು ಕೊಡುವ ಬೂಸ್ಟಿನ ಹೊಸ ತಳಿಯೊಂದು ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಅದನ್ನು ‘ಪೆನಿಸಿಲಿಯಂ ರೂಬೆನ್ಸ್‌’ ಎಂದು ಹೆಸರಿಸಿದರು. ಆದರೆ, ತದನಂತರ ಅದು ಆ ಹಿಂದೆಯೇ ಗುರುತಿಸಿ, ಹೆಸರಿಸಲಾಗಿದ್ದ ‘ಪೆನಿಸಿಲಿಯಂ ಕ್ರೈಸೊಜೆನಮ್‌’ ಪ್ರಬೇಧಕ್ಕಿಂತ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂಬ ಚರ್ಚೆ ಸೂಕ್ಷ್ಮಜೀವಿ ವಿಜ್ಞಾನಿಗಳ ನಡುವೆ ನಡೆದಿತ್ತು. ಔಷಧವನ್ನು ಕೊಡುವ ಜೀವಿಗೆ ಎರಡು ಹೆಸರನ್ನು ಇಟ್ಟಾಗ, ಯಾವುದನ್ನು ಔಷಧ ತಯಾರಿಕೆಗೆ ಬಳಸುವುದೆನ್ನುವ ಗೊಂದಲ ಉಂಟಾಗಬಹುದು. ವೈರಸ್ಸು, ಬ್ಯಾಕ್ಟೀರಿಯಾ ಹಾಗೂ ಬೂಸ್ಟುಗಳಂತಹ ಸೂಕ್ಷ್ಮಜೀವಿಗಳಲ್ಲಿ ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳು ಕೂಡ ಅವುಗಳ ಬದುಕನ್ನು ಬೇರೆಯೇ ಮಾಡಿಬಿಡುತ್ತವಾದ್ದರಿಂದ, ಹೆಸರು ಇಡುವಾಗ ಎಚ್ಚರಿಕೆ ಬೇಕು. ಉದಾಹರಣೆಗೆ, ಎರಡು ವರ್ಷಗಳ ಹಿಂದೆ ನಮ್ಮನ್ನೆಲ್ಲ ಕಾಡಿದ ಕೊರೊನಾ ವೈರಸ್ಸಿಗೂ, ಅದರಂತೆಯೇ ಇರುವ ಇನ್ನೂ ಹಲವಾರು ವೈರಸ್ಸುಗಳಿಗೂ ಇರುವ ತಳಿ ವ್ಯತ್ಯಾಸ ಬಹಳ ಕಡಿಮೆ. ಆದರೆ, ಅವುಗಳ ನಡವಳಿಕೆಯಲ್ಲಿ ಅಗಾಧ ವ್ಯತ್ಯಾಸ ಇರಬಹುದು ಎನ್ನುವುದನ್ನು ಮನಗಂಡಿದ್ದೇವೆ.

ಅದೇನೇ ಇರಲಿ. ಈ ಹೆಸರಿನ ಗೊಂದಲ ಕೇವಲ ಮನುಷ್ಯ ಎನ್ನುವ ಪ್ರಾಣಿಗಷ್ಟೆ. ಬೇರೆ ಪ್ರಾಣಿಗಳು, ಗಿಡ-ಮರಗಳು ತಮ್ಮನ್ನು ಯಾವ ಹೆಸರಿಟ್ಟು ಕರೆದರೂ ಗೊಂದಲಿಸಿಕೊಳ್ಳುವುದಿಲ್ಲ. ತಮಗೆ ಇಂತಹುದೊಂದು ಹೆಸರಿದೆ ಎಂದೂ ಅವಕ್ಕೆ ಗೊತ್ತಾಗಲಿಕ್ಕಿಲ್ಲ. ನಮ್ಮ ನಾಯಿ ಮಿನ್ನಿಗೆ ತನ್ನ ಕುಲ ‘ಕ್ಯಾನಿಸ್‌ ಲೂಪಿಸ್‌’ ಎನ್ನುವುದು ಗೊತ್ತೇ ಇರಲಿಕ್ಕಿಲ್ಲ. ಏನಿದ್ದರೂ ‘ಮಿನ್ನಿ’ ಎನ್ನುವುದಷ್ಟೇ ಗೊತ್ತಿರುತ್ತದೆ. ಆದರೆ, ನಮ್ಮದು ಹಾಗಲ್ಲ. ನಮ್ಮ ಹೆಸರೂ ಅಲ್ಲದೆ ಕುಲವನ್ನೂ ಗುರುತಿಸಬೇಕೆಂದುಕೊಳ್ಳುತ್ತೇವೆ. ಇದೀಗ ರಾಷ್ಟ್ರೀಯತೆಯನ್ನೂ. ಬಹುಶಃ ಅದಕ್ಕೇ ಇರಬೇಕು. ಕೆನಡಾದ ಸಾಗರ ವಿಜ್ಞಾನಿ ಮೈಖೇಲ್‌ ಬೆಲಾಂಗೇರ್‌, ‘ಜರ್ನಲ್‌ ಆಫ್‌ ಮರೈನ್‌ ಬಯಾಲಜಿ ಅಂಡ್‌ ಇಕಾಲಜಿ’ಯಲ್ಲಿ ಒಂದು ಪ್ರಸ್ತಾಪ ಇಟ್ಟಿದ್ದರು – ಮನುಷ್ಯನ ಹೆಸರನ್ನೇ ಬದಲಿಸಿಬಿಡೋಣ ಅಂತ.

‘ಹೋಮೋ ಸೇಪಿಯನ್ಸ್‌’ ಎನ್ನುವ ಮನುಷ್ಯನ ಹೆಸರನ್ನು ‘ಹೋಮೋ ಸ್ಟಲ್ಟಸ್‌’ ಎಂದು ಬದಲಿಸೋಣ. ಏಕೆಂದರೆ, ಸೇಪಿಯೆನ್ಸ್‌ ಎಂದರೆ ‘ವಿವೇಕಿ’ ಎಂದಾಗುತ್ತದೆ. ಪರಿಸರ ಸಂರಕ್ಷಣೆಯಿಂದ ಹಿಡಿದು ಹೊಸ ಹೆಸರು ನೀಡುವವರೆಗೂ ನಮ್ಮ ನಡೆಗಳೆಲ್ಲವೂ ಅವಶ್ಯಕವಾದುದನ್ನು ಮರೆತು ಅನವಶ್ಯಕವಾದುದರ ಸುತ್ತಲೇ ಗಿರಕಿ ಹೊಡೆಯುವುದರಿಂದ ಅವರ ಪ್ರಸ್ತಾವವನ್ನು ಒಪ್ಪಬಹುದೇನೋ. ‘ಸ್ಟಲ್ಟಸ್‌’ ಎಂದರೆ ಅವಿವೇಕಿ ಎಂದರ್ಥ. ನಾವು ಹೋಮೋ ಸೇಪಿಯನ್ಸೋ, ಹೋಮೋ ಸ್ಟಲ್ಟಸೋ ಎಂಬುದೂ ಚರ್ಚೆ ಆಗಬೇಕೇನೋ…

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...