‘ಘರ್ಷಣೆಯಾದರೂ ಸರಿ ಮಹಿಷ ದಸರಾ ಮಾಡಲು ಬಿಡುವುದಿಲ್ಲʼ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿರುವ ಬೆನ್ನಲ್ಲೇ, ಕರ್ನಾಟಕ ಭೀಮ್ ಆರ್ಮಿ ಹಾಸನ ಜಿಲ್ಲಾಧ್ಯಕ್ಷ ಪ್ರದೀಪ್ ಎಚ್ ಎಸ್ ಅವರು ಮಹಿಷಾಸುರನ ಸೌಮ್ಯ ಸ್ವಭಾವದ ಹೊಸ ಚಿತ್ರಪಟವನ್ನು ಉದ್ಘಾಟನೆ ಮಾಡಲು ಸಿದ್ದರಾಗುತ್ತಿದ್ದಾರೆ.
ಪ್ರದೀಪ್ ಎಚ್ ಎಸ್ ಅವರ ನೇತೃತ್ವದಲ್ಲಿ ಹಾಸನ ಭೀಮ್ ಆರ್ಮಿ ವತಿಯಿಂದ ಕಳೆದ ಮೂರು ವರ್ಷಗಳಿಂದ ಮಹಿಷಾ ದಸರಾವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಈ ಬಾರಿಯೂ ಮಹಿಷಾ ದಸರಾ ಆಚರಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದು, “ದಲಿತ ನಾಯಕರ ಬಗ್ಗೆ ನಿಮಗೆ ಯಾಕಿಷ್ಟು ತಾತ್ಸಾರ ಭಾವನೆ. ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧ ಮಾಡ್ತೀರ, ಮಹಿಷ ದಸರಾ ಮಾಡಿದರೂ ನಿಮಗೆ ಕೋಪ ಬರಲು ಕಾರಣವೇನು? ಮಹಿಷ ದಸರಾ ಎಂಬುದು ನಮ್ಮ ಹಕ್ಕು. ನೀವೇಳಿದ್ದನ್ನು ಕೇಳಲು ನಾವು ನಿಮ್ಮ ರಾಜಪ್ರಭುತ್ವದಲ್ಲಿ ಇಲ್ಲ. ನಾವು ಇರುವುದು ಸಂವಿಧಾನದ ಅಡಿಯಲ್ಲಿ” ಎಂದು ಕರ್ನಾಟಕ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರದೀಪ್ ಎಚ್ ಎಸ್ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿಜಗುಣಾನಂದರಿಗೆ ಜೀವ ಬೆದರಿಕೆ; ಸ್ವಾಮಿಗಳ ಜೊತೆ ನಾವಿದ್ದೇವೆ ಎಂದ ಕರ್ನಾಟಕ
ಮಹಿಷ ದಸರಾ ಆಚರಣೆ ಮಾಡಲು ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೇವೆ. ನಮ್ಮ ಪೂರ್ವಜರ ಇತಿಹಾಸವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿ ದಲಿತರು ಪ್ರತಿ ಮನೆಯಲ್ಲೂ ಮಹಿಷಾಸುರನ ಫೋಟೋ ಇಟ್ಟು ಮನೆ ಮನೆಯಲ್ಲಿ ಮಹಿಷ ದಸರಾ ಆಚರಣೆ ಮಾಡಬೇಕು” ಎಂದು ಕರೆ ನೀಡಿದ್ದಾರೆ.