ತೊಗರಿಯ ನಾಡು ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಭೂಮಿಯಲ್ಲಿ ಹಸಿ ತೆಂವಾಂಶ ಹೆಚ್ಚಾಗಿ ಬೇರು ಕೊಳೆತು ತೊಗರಿ ಒಣಗುತ್ತಿದೆ ಎಂದು ತೊಗರಿ ಬೆಳೆಗಾರರು ಹಾಗೂ ಕೆಪಿಆರ್‌ಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
“ಮುಂಗಾರು ಕೈಕೊಟ್ಟಿದ್ದರೂ ಅಲ್ಪ ಸ್ವಲ್ಪ ಮಳೆಗೆ ಬಂದಿದ್ದ ತೊಗರಿ ಬೆಳೆಯನ್ನು ಉಳಿಸಿಕೊಳ್ಳಲಾಗಿತ್ತು. ಇದೀಗ ಸುರಿದ ಧಾರಾಕಾರ ಮಳೆಯಿಂದ ತೇವಾಂಶ ಹಾಚ್ಚಾಗಿ ಬೇರು ಕೊಳೆಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಬಿಜ, ರಸಗೊಬ್ಬರ, ಕಳೆ ತೆಗೆಯುವುದು, ಔಷಧಿ ಸಿಂಪಡಣೆ ಸೇರಿದಂತೆ ಹಲವು ಕೆಲಸಗಳಿಗೆ ಹಣ ಖರ್ಚು ಮಾಡಿದ್ದು, ರೈತರು ಸಾಲದ ಮಡುವಿನಲ್ಲಿ ಒದ್ದಾಡುವಂತಾಗಿದೆ” ಎಂದು ಹೇಳಿದರು.
“ಹೊಲಕ್ಕೆ ಹೋಗಿ ತೊಗರಿ ಬೆಳೆ ನೋಡಿದ ಕೂಡಲೇ ತೊಗರಿ ಬಿತ್ತಿದ ರೈತರು ಜಿಗುಪ್ಸೆಗೊಂಡು ನೆಲಕ್ಕೆ ಉರುಳಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವೀರಭದ್ರಪ್ಪ ಇಂದ್ರಪಾಡ ಹೊಸಳ್ಳಿ ಗ್ರಾಮದ ರೈತ ತೊಗರಿ ಬೆಳೆಯ ಅವಸ್ಥೆ ಕಂಡು ಗಾಬರಿಗೊಂಡಿದ್ದಾರೆ. ತೊಗರಿ ಬೆಳೆಗಾರರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ತೊಗರಿ ಬೆಳೆಗಾರರ ನೆರವಿಗೆ ಬರಬೇಕು. ಆಣೆವಾರು ಪರಿಹಾರ ಘೋಷಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತೊಗರಿ ಬೆಳೆಗೆ ಗೊಣ್ಣೆಹುಳು ಬಾಧೆ; ಅಗತ್ಯ ಕ್ರಮಕ್ಕೆ ಕೃಷಿ ಅಧಿಕಾರಿಗಳ ಸಲಹೆ
“ಕಲಬುರಗಿ ಜಿಲ್ಲೆ ತೊಗರಿ ಕಣಜ ಎಂದೇ ಖ್ಯಾತಿ ಪಡೆದಿದೆ. ತೊಗರಿ ಕಣಜದಲ್ಲಿ ರೈತರ ಗತಿ ಅಧೋಗತಿಯಾಗಿದೆ. ಈಗಾಗಲೇ ಸಾಲದ ಮಡುವಿನಲ್ಲಿ ಒದ್ದಾಡುತ್ತಿರುವ ರೈತರು ತಮ್ಮ ಭೂಮಿ ಹದಾ ಮಾಡಿ ಏನು ಬೆಳೆ ಬಿತ್ತನೆ ಮಾಡಬೇಕೆಂದು ಯೋಚಿಸುತ್ತಿದ್ದು, ಕಡಲೆ, ಜೋಳ, ಕುಸುಬೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಹಣವಿಲ್ಲದೆ ಪರಿತಪಿಸುವಂತಾಗಿದೆ. ಹಾಗಾಗಿ ಕೂಡಲೇ ಜಂಟಿ ಸರ್ವೆ ಬೆಳೆನಷ್ಟ ಸಮೀಕ್ಷೆ ಮಾಡಿ ಶೀಘ್ರದಲ್ಲೇ ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು. ಜತೆಗೆ ಆಣೆವಾರು ಪರಿಹಾರ ಘೋಷಿಸಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು” ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದರು.
ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಸಾಯಿಬಣ್ಣ ಗುಡುಬಾ, ಸುಭಾಷ್ ಹೊಸಮನಿ, ದಿಲೀಪ್ ಕುಮಾರ್, ರಾಯಪ್ಪ ಹುರಮುಂಜಿ ಇದ್ದರು.