ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ನಷ್ಟವುಂಟಾಗಿದೆ ಎಂಬುದನ್ನು ಸಮರ್ಥನೀಯವಲ್ಲ. ಖಾಸಗಿ ಸಾರಿಗೆಯವರ ನಷ್ಟ ತುಂಬಿಕೊಡಲು ಸರ್ಕಾರಕ್ಕೆ ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟದವರು ಕರೆ ನೀಡಿರುವ ‘ಬೆಂಗಳೂರು ಬಂದ್’ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾತನಾಡಿದ ಅವರು, “ಶಕ್ತಿ ಯೋಜನೆಯು ಮಹಿಳೆಯರಿಗೆಂದು ಮಾಡಿದ ಸರ್ಕಾರದ ಯೋಜನೆ. ಅದರಿಂದ ಖಾಸಗಿ ಸಾರಿಗೆಯವರಿಗೆ ನಷ್ಟ ಉಂಟಾಗಿದೆ ಎಂಬುದನ್ನು ನಾವು ಒಪ್ಪಲ್ಲ. ಹಾಗಾಗಿ, ನಷ್ಟ ತುಂಬಿಕೊಡಲು ಸರ್ಕಾರಕ್ಕೆ ಆಗಲ್ಲ” ಎಂದು ತಿಳಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಬಂದ್, ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಅದು ಶಾಂತಿಯುತವಾಗಿರಬೇಕು. ನಾವು ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ತಂದಿದ್ದೇವೆ. ಅದರಿಂದ ಖಾಸಗಿ ಬಸ್ನವರು ನಷ್ಟ ಆಗಿದೆ ಎನ್ನುತ್ತಿದ್ದಾರೆ. ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇದೆ. ಸಾರಿಗೆಯವರ ಈ ಬೇಡಿಕೆ ಈಡೇರಿಸಲು ಆಗುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
“ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರಿಗೂ ಹಾಗೂ ನನಗೂ ಖಾಸಗಿ ಸಾರಿಗೆ ಒಕ್ಕೂಟದವರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅಸಾಧ್ಯವಾದ ಬೇಡಿಕೆಗಳನ್ನು ಇಟ್ಟರೆ ಈಡೇರಿಸಲು ಆಗುವುದಿಲ್ಲ. ಶಕ್ತಿ ಯೋಜನೆ ಬಂದ ಬಳಿಕ ಹೆಣ್ಣು ಮಕ್ಕಳು ನಮ್ಮ ಬಸ್ಗಳಿಗೆ ಹತ್ತುತ್ತಿಲ್ಲ. ಅದರಿಂದ ನಮಗೆ ನಷ್ಟವಾಗುತ್ತಿದೆ. ಅದಕ್ಕೆ ಆರ್ಥಿಕ ನೆರವು ಕೊಡಿ ಎಂದರೆ ಅದು ಪ್ರಾಯೋಗಿಕವಾಗಿ ಅಸಾಧ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.