ಹಚ್ಚ ಹಸಿರು ಮತ್ತು ಪಕೃತಿ ಸೌಂದರ್ಯದಿಂದ ಕಂಗೊಳಿಸುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಓರ್ಲೆ ಗ್ರಾಮಕ್ಕೆ ಯಾವ ಕಡೆಯಿಂದಲೂ ರಸ್ತಯಿಲ್ಲ, ಹಳ್ಳ ದಾಟಲು ಸೇತುವೆ ಇಲ್ಲ. ಜನರು ತಮ್ಮೂರಿನಿಂದ ಮತ್ತೊಂದು ಊರಿಗೆ ತೆರಳಲು ದಿನನಿತ್ಯ ಪರಿಪಾಟಲು ಪಡಬೇಕಾದ ಪರಿಸ್ಥಿತಿಯಿದೆ. ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನೂ ಹೇಳತೀರದು.
ಗ್ರಾಮವು ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ ಗ್ರಾಮದಲ್ಲಿ ಹೆಚ್ಚಾಗಿ ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಜನರು ವಾಸುತ್ತಿದ್ದಾರೆ. ಬೇಸಿಗೆಯಲ್ಲಿ ಹಳ್ಳದಲ್ಲಿ ನೀರು ಕಡಿಮೆ ಇರುತ್ತದಾದ್ದರಿಂದ ಜೀವನ ಹೇಗೂ ಸಾಗುತ್ತದೆ. ಆದರೆ, ಮಳೆಗಾಲದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಆಗ, ಪಕ್ಕದೂರಿಗೆ ಹೋಗಲೂ ಕಷ್ಟ ಪಡುವಂತಾಗುತ್ತದೆ. ಸೇತುವೆ ಇಲ್ಲದೆ ದಿನಸಿ ಹಾಗೂ ಹಲವು ಸಾಮಗ್ರಿಗಳನ್ನು, ಕೃಷಿ ಯಂತ್ರೋಪಕರಣಗಳನ್ನು ಸಹ ಹೊತ್ತೊಯ್ಯಲು ಹರಸಾಹಸ ಪುಡುವಂತಾಗಿದೆ. ಪುಟ್ಟ ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಪೋಷಕರು ಭಯ ಪಡುವಂತಾಗಿದೆ. ಗರ್ಭಿಣಿಯರು, ಬಾಣಂತಿಯರು ಹಳ್ಳ ದಾಟಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಗ್ರಾಮದ ಜನರು ಹಳ್ಳ ದಾಟುವಾಗ ಬಿದ್ದು, ಗಾಯಗಳಾಗಿವೆ. ಆದರೂ, ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ ಎಂದು ಗ್ರಾಮದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ವಾಸು ಅವರು ಈದಿನ.ಕಾಮ್ ಜೊತ ಮಾತನಾಡಿದ್ದು, “ಈ ವರ್ಷ ಅನುದಾನ ಬಿಡುಗಡೆ ಮಾಡುತ್ತೇವೆಂದು ಕ್ಷೇತ್ರದ ಶಾಸಕರು ತಿಳಿಸಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಕೆಲಸ ಆರಂಭಿಸುತ್ತೇವೆ” ಎಂದು ಹೇಳಿದ್ದಾರೆ.
ಮುಂದಿನ ಮಳೆಗಾಲ ಬರುವಷ್ಟರಲ್ಲಿ ಈ ಗ್ರಾಮಕ್ಕೆ ಅನುದಾನ ಬಿಡುಗಡೆ ಮಾಡಿ, ಇಲ್ಲಿನ ಜನರ ಸಮಸ್ಯೆ ಆದಷ್ಟು ಬೇಗ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.