- ‘ಮೃತ್ಯುಂಜಯ ಸ್ವಾಮೀಜಿಗಳ ಶಿಷ್ಯರು ಮೀಸಲಾತಿ ಕೊಡಿಸಲಿ’
- ‘ರಾಜ್ಯ ಸರ್ಕಾರ ಜಾರಿಗೆ ತರಬೇಕು, ಇದು ನಮ್ಮ ಕೈಯಲ್ಲಿಲ್ಲ’
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೋರಿ ಮತ್ತೆ ಪ್ರತಿಭಟನೆಗೆ ಮುಂದಾಗಿರುವ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದ ಹೋರಾಟಕ್ಕೆ ಇನ್ಮುಂದೆ ಭಾಗಿಯಾಗಲ್ಲ ಎಂದು ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪದೇ ಪದೆ ಪಾಲ್ಗೊಳ್ಳಲು ಆಗುವುದಿಲ್ಲ” ನೇರವಾಗಿಯೇ ತಿಳಿಸಿದ್ದಾರೆ.
“ಮೀಸಲಾತಿ ವಿಷಯದಲ್ಲಿ ಮುಂದೇನಾದರೂ ಆಗಬೇಕಾಗಿರುವುದು ಇದ್ದರೆ ಗುರುಗಳ ಶಿಷ್ಯರಾದ ಲಕ್ಷ್ಮಿ ಹೆಬ್ಬಾಳಕರ, ವಿನಯ ಕುಲಕರ್ಣಿ ಹಾಗೂ ವಿಜಯಾನಂದ ಕಾಶಪ್ಪನವರ ಇದ್ದಾರೆ. ಅವರ ಮೂಲಕ ಜಾರಿ ಮಾಡಿಸಲಿ. ಸದಾ ಕಾಲ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ” ಎಂದರು.
“ಬಿಜೆಪಿ ಸರ್ಕಾರದ ಅವಧಿಯಲ್ಲೇ ಲಿಂಗಾಯತ ಪಂಚಮಸಾಲಿಗಳಿಗೆ ಮೀಸಲಾತಿ ನೀಡಿ, ನೋಟಿಫಿಕೇಶನ್ ಹೊರಡಿಸಲಾಗಿದೆ. ಅಲ್ಲದೇ, ರಾಜ್ಯಪಾಲರಿಂದ ಸುಗ್ರೀವಾಜ್ಞೆಯೂ ಆಗಿದೆ. ಈಗೇನಿದ್ದರೂ ರಾಜ್ಯ ಸರ್ಕಾರ ಜಾರಿಗೆ ತರುವುದಷ್ಟೇ ಬಾಕಿ ಇದ್ದು, ಇದು ನಮ್ಮ ಕೈಯಲ್ಲಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯೋಧ ರಾಯಭಾರಿ; ಹಲವು ಕೋನಗಳಿಂದ ಅಪಾಯಕಾರಿ ಈ ಹುಲಿಸವಾರಿ
“ಹಿಂದುಳಿದ ವರ್ಗಗಳ 2 ‘ಎ’ಗೆ ಇರುವ ಶೇ 15ರಷ್ಟು ಮೀಸಲಾತಿಯನ್ನು ಪಂಚಮಸಾಲಿಗಳಿಗೇ ಕೊಡಬೇಕು ಎಂದು ಈ ಹಿಂದೆ ಶಾಸಕ ವಿಜಯಾನಂದ ಕಾಶಪ್ಪನವರ ಬೇಡಿಕೆ ಇಟ್ಟಿದ್ದರು. ಈಗ ಅವರದೇ ಸರ್ಕಾರ ಇದೆ ಅಲ್ವಾ. ಮುಂದೆ ಹೋಗಿ ಕೊಡಿಸಲಿ” ಎಂದು ಆಗ್ರಹಿಸಿದರು.
ಸಚಿವ ಡಿ.ಸುಧಾಕರ ಜಾತಿ ನಿಂದನೆ ವಿಚಾರವಾಗಿ ಪ್ರತಿಕ್ರಿಯಿಸಿ, “ಸಂವಿಧಾನ ವಿರೋಧಿ ನಡವಳಿಕೆ ತೋರಿರುವ ಅವರು ತಕ್ಷಣ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿ ಅವರಿಗೆ ದಲಿತರ ಬಗ್ಗೆ ಗೌರವ ಇದ್ದರೆ ಸುಧಾಕರ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು” ಎಂದು ಯತ್ನಾಳ ಒತ್ತಾಯಿಸಿದರು.
“ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ಸಿದ್ದರಾಮಯ್ಯನವರು ಸಜೀವವಾಗಿ ಬಂದರೂ ಬಿಜೆಪಿಗೆ ತೆಗೆದುಕೊಳ್ಳುವುದಿಲ್ಲ. ಇನ್ನು ಹೆಣವಾಗಿ ಬಂದರೆ ತೆಗೆದುಕೊಳ್ಳುತ್ತೇವಾ’ ಎಂದು ಲೇವಡಿ ಮಾಡಿದರು.