ಈ ದಿನ ಸಂಪಾದಕೀಯ | ಯೋಧ ರಾಯಭಾರಿ; ಹಲವು ಕೋನಗಳಿಂದ ಅಪಾಯಕಾರಿ ಈ ಹುಲಿಸವಾರಿ

Date:

ಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸೈನಿಕರನ್ನು ಬಳಸಿಕೊಳ್ಳುವ ಸೇನೆಯ ಆದೇಶ ಕಳೆದ ಮೇ ತಿಂಗಳಲ್ಲೇ ಹೊರಟಿದೆ. ರಜೆಯಲ್ಲಿರುವ ಯೋಧರಿಗೆ ಮೋದಿ ಸರ್ಕಾರದ ಕಾರ್ಯಕ್ರಮಗಳ ಪ್ರಚಾರದ ಕೆಲಸ ನೀಡಿರುವ ಸೇನೆಯು ತಾನು ರೂಪಿಸಿರುವ ರಜೆನೀತಿಯನ್ನು ತಾನೇ ಮುರಿಯತೊಡಗಿದೆ

ರಜೆಯ ಮೇಲೆ ತೆರಳುವ ಭಾರತೀಯ ಸೇನೆಯ ಎಲ್ಲ ಯೋಧರೂ ಆ ಅವಧಿಯಲ್ಲಿ ನಾಗರಿಕರನ್ನು ಜೊತೆಯಲ್ಲಿ ತೊಡಗಿಸಿಕೊಂಡು ನರೇಂದ್ರ ಮೋದಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಡಂಗೂರ ಹೊಡೆಯುವಂತೆ ವಿಧಿಸಲಾಗಿದೆ. ಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸೈನಿಕರನ್ನು ಬಳಸಿಕೊಳ್ಳುವ ಈ ಕೃತ್ಯಕ್ಕೆ ‘ದೇಶಭಕ್ತಿ ಮತ್ತು ರಾಷ್ಟ್ರನಿರ್ಮಾಣ ಕಾರ್ಯ’ದ ಮುಸುಕು ಹೊದಿಸಲಾಗಿದೆ. ಪ್ರತಿಭಟನೆಗಳು, ಟೀಕೆಗಳು, ಕೋರ್ಟು ಕೇಸುಗಳನ್ನು ದೂರವಿಡಲು ಈ ತಂತ್ರವನ್ನು ಹೂಡಲಾಗಿದೆ. ತಕ್ಷಣದಿಂದ ಜಾರಿಗೆ ತರುವಂತೆ ಕಳೆದ ಮೇ ತಿಂಗಳಲ್ಲೇ ಸೇನೆಯ ಆದೇಶ ಹೊರಟಿದೆ.

ವಿಶೇಷವಾಗಿ ಯುವಕರನ್ನು ಯೋಧರು ಒಗ್ಗೂಡಿಸಿ ಕ್ರೀಡಾ ಸ್ಪರ್ಧೆಗಳು, ಮಾದಕದ್ರವ್ಯ ಸೇವನೆ ವ್ಯಸನಮುಕ್ತಿ ಶಿಬಿರಗಳು, ದೇಶಭಕ್ತಿಯ ಕಾರ್ಯಕ್ರಮಗಳು, ಸ್ವಚ್ಛ ಭಾರತ ಆಂದೋಲನ, ಹಿರಿಯರ ಸೇವೆಯಂತಹ ಕಾರ್ಯಕ್ರಮಗಳಲ್ಲೂ ತೊಡಗುವಂತೆ ತಾಕೀತು ಮಾಡಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಜಾನುವಾರು ವಿಮೆ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ, ದೀನದಯಾಳ ಗ್ರಾಮೀಣ ಕೌಶಲ್ಯ ಯೋಜನೆ, ಗ್ರಾಮಜ್ಯೋತಿ ಯೋಜನೆ, ಸ್ವಚ್ಛಭಾರತ ಅಭಿಯಾನ, ಸರ್ವಶಿಕ್ಷಾ ಅಭಿಯಾನ, ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ, ಸಕ್ಷಮ್ ಯುವ ಯೋಜನೆ, ಸಮಗ್ರ ಶಿಕ್ಷಾ, ಗರೀಬ ಕಲ್ಯಾಣ್ ರೋಜ್ಗಾರ್ ಅಭಿಯಾನ, ಆಯುಷ್ಮಾನ್ ಭಾರತ ಯೋಜನೆ ಹಾಗೂ ಜನ ಔಷಧಿ ಕೇಂದ್ರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಲಾಗಿದೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್ ಅವರ ಪ್ರಕಾರ ಭಾರತೀಯ ವಾಯುಸೇನೆ ಮತ್ತು ನೌಕಾಸೇನೆಯಲ್ಲಿಯೂ ಇಂತಹುದೇ ನಿರ್ದೇಶನಗಳನ್ನು ನೀಡಿರುವ ಸಾಧ್ಯತೆಯಿದೆ, 10.45 ಲಕ್ಷ ಸಂಖ್ಯೆಯ ಭಾರತೀಯ ಮಿಲಿಟರಿಯ ಶೇ.25ರಷ್ಟು ಸಿಬ್ಬಂದಿ ಸದಾ ರಜೆಯ ಮೇಲಿರುತ್ತದೆ. ಅರ್ಥಾತ್ ಮೂರೂವರೆ ಲಕ್ಷ ಯೋಧರನ್ನು ಕೇಂದ್ರ ಸರ್ಕಾರ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ‘ಯೋಧನು ಸದಾ ಕರ್ತವ್ಯ ಸನ್ನದ್ಧನು’ ಎಂಬ ನಾಣ್ನುಡಿಯನ್ನು ಮೋದಿ ಸರ್ಕಾರ ಅಕ್ಷರಶಃ ಬಳಸಿಕೊಳ್ಳಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಠಿಣ ಸೇವಾ ಸ್ಥಿತಿಗತಿಗಳು ಮತ್ತು ಕುಟುಂಬದಿಂದ ದೀರ್ಘಕಾಲ ದೂರವಿರಬೇಕಾದ ಕಾರಣಗಳಿಂದಾಗಿ ಯೋಧರಿಗೆ ಎರಡು ತಿಂಗಳ ವಾರ್ಷಿಕ ರಜೆ ಮತ್ತು 30 ದಿನಗಳ ಕ್ಯಾಶುವಲ್ ರಜೆ ನೀಡಲಾಗುತ್ತದೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಕಾಲ ಕಳೆಯಲು ಮತ್ತು ಕೌಟುಂಬಿಕ ಕೆಲಸ ಕಾರ್ಯಗಳನ್ನು ನೆರವೇರಿಸಿಕೊಳ್ಳಲೆಂದು ಯೋಧರಿಗೆ ಈ ರಜೆಯನ್ನು ನೀಡಲಾಗುತ್ತದೆ. ಈ ಉದ್ದೇಶವನ್ನು ಸೇನೆಯ ರಜೆ ನೀತಿಯಲ್ಲಿ ನಿಚ್ಚಳವಾಗಿ ನಮೂದಿಸಲಾಗಿದೆ. ಇದೀಗ ಅವರಿಗೆ ಮೋದಿ ಸರ್ಕಾರದ ಕಾರ್ಯಕ್ರಮಗಳ ಪ್ರಚಾರದ ಕೆಲಸ ನೀಡಿರುವ ಸೇನೆಯು ತಾನು ರೂಪಿಸಿರುವ ರಜೆನೀತಿಯನ್ನು ತಾನೇ ಮುರಿಯತೊಡಗಿದೆ. ನಾಮಮಾತ್ರಕ್ಕೆ ಇದು ಸ್ವಯಂಸೇವೆ. ಆದರೆ ಆದೇಶದ ಧ್ವನಿಯಲ್ಲಿ ಕಡ್ಡಾಯದ ಗುಣಲಕ್ಷಣಗಳಿವೆ ಎಂಬುದು ನಿವೃತ್ತ ಸೇನಾಧಿಕಾರಿಗಳ ಸ್ಪಷ್ಟ ಅನಿಸಿಕೆ.

ನಾನಾ ಬಗೆಯ ಸಾಮಾಜಿಕ ಚಟುವಟಿಕೆಗಳು ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪ್ರಚಾರದ ಮಾರ್ಗಸೂಚಿಗಳು ಮತ್ತು ಚಿತ್ರನಾಟಕವನ್ನು (ಸ್ಕ್ರಿಪ್ಟ್) ಸೇನಾ ತರಬೇತಿ ಕಮಾಂಡ್ ಸಿದ್ಧಪಡಿಸಿದೆ. ಸಾರ್ವಜನಿಕರೊಂದಿಗೆ ಬೆರೆತು ಪ್ರಚಾರದಲ್ಲಿ ತೊಡಗುವ ಯೋಧ ರಾಯಭಾರಿಗಳನ್ನು ಸಜ್ಜುಗೊಳಿಸಲು ಜವಾಬ್ದಾರಿಯನ್ನು ಶಿಮ್ಲಾದಲ್ಲಿನ ಸೇನಾ ತರಬೇತಿ ಕಮಾಂಡ್‌ಗೆ ವಹಿಸಲಾಗಿದೆ. ಭವಿಷ್ಯದಲ್ಲಿ ನಡೆಯಬಹುದಾದ ಘರ್ಷಣೆಗಳು ಸಮರಗಳಿಗೆ ಯೋಧರನ್ನು ಸಜ್ಜಾಗಿ ಇರಿಸುವ ತರಬೇತಿ ನೀಡುವುದು ಈ ಕಮಾಂಡ್ ನ ಕೆಲಸ. ಈಗ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಸ್ಕ್ರಿಪ್ಟ್ ತಯಾರಿಕೆಯ ಹೆಚ್ಚುವರಿ ಕೆಲಸದಲ್ಲಿ ತೊಡಗಿರುವುದು ವಿಪರೀತ ವಿಪರ್ಯಾಸ. ತ್ರೈಮಾಸಿಕ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತರಿಸಿಕೊಂಡು ಈ ಯೋಧ ರಾಯಭಾರಿ ಯೋಜನೆ ಜಾರಿಯ ಮೇಲೆ ನಿಗಾ ಇಡಲಾಗುವುದಂತೆ. ಆದರೆ ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರ್ಕಾರಗಳು ಈ ಯೋಜನೆಯನ್ನು ವಿರೋಧಿಸುವುದು, ಆಯಾ ರಾಜ್ಯಗಳ ಪೊಲೀಸರು ಮತ್ತು ‘ಮೋದಿ ಯೋಧ ರಾಯಭಾರಿ’ಗಳ ನಡುವೆ ಘರ್ಷಣೆಗಳು ಏರ್ಪಟ್ಟರೆ ಆಶ್ಚರ್ಯವಿಲ್ಲ.

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮಾಡಲಾಗುವ ಅನಪೇಕ್ಷಿತ ಹಸ್ತಕ್ಷೇಪವಿದು ಎಂಬುದನ್ನು ಆಳುವವರು ಅರಿಯಬೇಕು. ಭಾರತದಲ್ಲಿ ಸೇನೆಯನ್ನು ಆರಂಭದಿಂದಲೂ ರಾಜಕಾರಣದಿಂದ ದೂರವಿಡಲಾಗಿದೆ. ಮತ್ತು ದೂರವಿಟ್ಟಿರುವ ಈ ನೀತಿ ಅದೆಷ್ಟು ವಿವೇಕದಿಂದ ಕೂಡಿದ್ದು ಎಂಬುದಕ್ಕೆ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಾಲಕಾಲಕ್ಕೆ ಮಿಲಿಟರಿ ಸರ್ವಾಧಿಕಾರಿಗಳು ತಲೆಯೆತ್ತಿ ಅಂಧಾದುಂಧಿ ನಡೆಸಿ ಜನತಂತ್ರವನ್ನು ಹೊಸಕಿ ಹಾಕಿರುವ ಬೆಳವಣಿಗೆಗಳೇ ಸಾಕ್ಷಿ.

ದುರ್ಗಮ ಪ್ರದೇಶಗಳಲ್ಲಿ, ಕಡುಕಠಿಣ ಪ್ರತಿಕೂಲ ಪರಿಸ್ಥಿತಿಗಳಲ್ಲಿ ದೇಶದ ಗಡಿಗಳನ್ನು ಕಾಯುವ, ಜೀವದ ಹಂಗು ತೊರೆದು ಹೋರಾಡುವ ಸೇನೆಯ ಕುರಿತು ನಾಗರಿಕರು ಒಂದು ಬಗೆಯ ಭಾವನಾತ್ಮಕ ಗೌರವವನ್ನು ಹೊಂದಿರುವುದು ಉಂಟು. ಈ ಆದರ ಭಾವವನ್ನು ಬಿಜೆಪಿಯ ಪರವಾಗಿ ಬಳಸಿಕೊಳ್ಳುವ ಪ್ರಜ್ಞಾಪೂರ್ವಕ ಉದ್ದೇಶ ಇಲ್ಲಿ ಒಡೆದು ಕಂಡಿದೆ.
ಯೋಧರನ್ನು ಸ್ಥಳೀಯ ರಾಜಕಾರಣದಲ್ಲಿ ತೊಡಗಿಸುವುದು, ಆಳುವ ಪಕ್ಷದ ನೀತಿ ನಿರ್ಧಾರಗಳು ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಆರೋಗ್ಯಕರ ಅಲ್ಲ. ಹಲವಾರು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಇಷ್ಟಾನಿಷ್ಟಗಳಿಗೆ ತಕ್ಕಂತೆ ಬಗ್ಗಿಸಿಕೊಂಡಿದೆ. ಇದೀಗ ಸೇನೆಯ ಸರದಿ. ಈ ಹುಲಿಸವಾರಿ ಹಲವು ಕೋನಗಳಿಂದ ಅಪಾಯಕಾರಿ!  

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?

ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು...

ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ

ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು...

ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ...