- ಅತಿವೃಷ್ಟಿ- ಅನಾವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆ ಸಂಪೂರ್ಣ ಹಾನಿಯಾಗಿದೆ.
- ತೆಲಂಗಾಣ ಮಾದರಿಯಲ್ಲಿ ಪ್ರತಿ ಎಕರೆಗೆ ರೂ.10 ಸಾವಿರ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು.
ಮುಂಗಾರು ಹಂಗಾಮಿನ ಬೆಳೆ ಅತಿವೃಷ್ಟಿ- ಅನಾವೃಷ್ಟಿಯಿಂದ ಸಂಪೂರ್ಣ ಹಾನಿಯಾಗಿದೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಕಮಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಿ, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕಮಲನಗರ ಪಟ್ಟಣದ ಡಾ. ಚನ್ನಬಸವ ಪಟ್ಟದ್ದೇವರು ಗ್ರಂಥಾಲಯದಿಂದ ಮುಖ್ಯರಸ್ತೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಿನಿ ಬಸ್ ನಿಲ್ದಾಣ ಎದುರುಗಡೆ ಕೆಲಕಾಲ ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
“ಮುಂಗಾರು ಬೆಳೆಗಳಾದ ಹೆಸರು , ಉದ್ದು, ಸೊಯಾಬಿನ್ ಸೇರಿದಂತೆ ಇತರೆ ಬೆಳೆಗಳು ಅನಾವೃಷ್ಠಿಯಿಂದ ಬಹುತೇಕ ಹಾನಿಯಾಗಿವೆ. ಮೊದಲೇ ರೈತರ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಸರ್ಕಾರ ರೈತ ಸಮ್ಮಾನ ಯೋಜನೆಯ ಮೂಲಕ ನೀಡಬೇಕಾದ 4 ಸಾವಿರ ರೂ. ಸಹಾಯಧನ ಕೂಡ ನೀಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದರ, ಔರಾದ ತಾಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ, ಔರಾದ ತಾಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಭಾಲ್ಕಿ ತಾಲೂಕು ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದರ, ವಿಶ್ವನಾಥ ಧರಣೆ, ಹಿರಿಯ ಹೋರಾಟಗಾರ ವೈಜಿನಾಥ ವಡ್ಡೆ, ಮಹೋಹರರಾವ ಹೊರಂಡಿ ಹಾಗೂ ಪ್ರಮುಖರಾದ ಬಸವರಾಜ ಬಿರಾದರ. ರಮೇಶ ಪಾಟೀಲ್, ಸಿದ್ರಾಮಪ್ಪ ಡಿಗ್ಗಿ, ರಾಜಕುಮಾರ ಬಿರಾದರ ಸೇರಿದಂತೆ ಇತರರಿದ್ದರು.
ಬೇಡಿಕೆಗಳು:
- ಬೆಳೆ ವಿಮೆ ಕಟ್ಟಿದ ರೈತರಿಗೆ ತಕ್ಷಣ ಬೆಳೆ ವಿಮೆ ಕಂಪನಿಯಿಂದ ಹಣ ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಿಸಬೇಕು.
- ಕೇಂದ್ರ ಸರಕಾರ ಕಬ್ಬಿಗೆ ಎಫ್.ಆರ್.ಪಿ. ದರ ನಿಗದಿಪಡಿಸಿದಂತೆ ರಾಜ್ಯ ಸರಕಾರವೂ ಎಸ್.ಎ.ಪಿ. ದರ ನಿಗದಿಪಡಿಸಿ ಪ್ರತಿ ಟನ್‌ಗೆ ರೂಪಾಯಿ 500 ರೂ. ರಂತೆ ಕೊಡಬೇಕು.
- ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿಬೇಕು.
- 2020 ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳು ಕೇಂದ್ರ ಸರಕಾರ ರದ್ದುಪಡಿಸಿದಂತೆ ರಾಜ್ಯ ಸರಕಾರವೂ ರದ್ದುಪಡಿಸಬೇಕು.
- ರಾತ್ರಿ ಸಮಯದಲ್ಲಿ ರೈತರ ತೋಟದ ಮನೆಗಳಿಗೆ ವಿದ್ಯುತ್ ಒದಗಿಸಬೇಕು.
- ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ರೈತರ ಹೊಲಗಳಿಗೆ ದಾರಿ ನಿರ್ಮಿಸಬೇಕು.
- ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ಪರ್ಯಾಯ ವ್ಯವಸ್ಥೆ ರೂಪಿಸಿ ರೈತರ ಹಿತ ಕಾಪಾಡಬೇಕು.
- ತೆಲಂಗಾಣ ಮಾದರಿಯಲ್ಲಿ ಪ್ರತಿ ಎಕರೆಗೆ ರೂ.10 ಸಾವಿರ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೋರುತ್ತಿದೆ ಸರ್ಕಾರಿ ಶಾಲಾ ಮಾಳಿಗೆ; ಆತಂಕದಲ್ಲಿ ಮಕ್ಕಳು
- ಹಿಂದಿನ ಬಿಜೆಪಿ ನೇತ್ರತ್ವದ ರಾಜ್ಯ ಸರ್ಕಾರ ರೈತ ಸಮ್ಮಾನ ಯೋಜನೆಯಡಿ ನೀಡುತ್ತಿದ್ದ 4ಸಾವಿರ ರೂ. ಕಾಂಗ್ರೇಸ್ ಸರ್ಕಾರವೂ ನೀಡಬೇಕು.
- ಸಹಕಾರ ಬ್ಯಾಂಕ್ ನಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ನೀಡಬೇಕು.