ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಮನಗರದ ಎಪಿಎಂಸಿ ಸಭಾಂಗಣದಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವತಿಯಿಂದ ನಡೆದ ಎರಡನೇ ಸಭೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಹಾಗೂ ಮೇಕೆದಾಟು ನಿರ್ಮಾಣ ಯೋಜನೆ ಬಗ್ಗೆ ‘ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಡಿಸಿಎಂ ಡಿಕೆ ಶಿವಕುಮಾರ್ ಅವರು ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಅದನ್ನು ನಿಜವಾಗಿಯೂ ಹೇಳಿದ್ದಾರೋ ಅಥವಾ ನಮ್ಮ ಹೋರಾಟ ನಿಲ್ಲಿಸಲು ಹೇಳಿದ್ದಾರೋ ಗೊತ್ತಿಲ್ಲ” ಎಂದು ಹೇಳಿದರು.
“ರಾಜ್ಯ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹಾಕಬೇಕು, ಮುಂದಿನ ಹೋರಾಟ ಹೇಗಿರಬೇಕು. ಬರಿ ಹೋರಾಟದಿಂದ ಮಾತ್ರ ಕೆಲಸ ಆಗುತ್ತದೆಯಾ ಅಥವಾ ನಾವೂ ಕೂಡ ಅರ್ಜಿ ಸಲ್ಲಿಸಲು ಸಾಧ್ಯವಿದೆಯಾ ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು” ಎಂದರು.
ಬೆಂಗಳೂರಿಗರು ಹಾಗೂ ಕಲಾವಿದರು ಕಾವೇರಿ ಹೋರಾಟಕ್ಕೆ ಇಳಿಯಲೇ ಬೇಕು: ಮುಖ್ಯಮಂತ್ರಿ ಚಂದ್ರು ಕರೆ
ಕಾಂಗ್ರೆಸ್ಸಿಗರು ಕೇವಲ ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮೇಕೆದಾಟು ಯೋಜನೆಯನ್ನು ಬಳಸಿಕೊಂಡರೆ ಹೊರತು ಸರ್ಕಾರ ಬಂದ ಬಳಿಕ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ಬಳಿ ರಚನಾತ್ಮಕವಾದಂತ ಹೋರಾಟವನ್ನು ನಡೆಸುತ್ತಿಲ್ಲ.
“ಈಗಿನ ಸಂದರ್ಭದಲ್ಲಿ ತಮಿಳುನಾಡಿಗೆ ನೀರನ್ನು ಬಿಟ್ಟರೆ ಬೆಂಗಳೂರಿನ ಒಂದು ಕೋಟಿ 35 ಲಕ್ಷ ನಾಗರಿಕರಿಗೆ ಕುಡಿಯುವ ನೀರಿನ ಬವಣೆ ಖಂಡಿತ ತಪ್ಪಿದ್ದಲ್ಲ. ಸರ್ಕಾರಗಳು ಯಾವ್ಯಾವ ಕಾರಣಕ್ಕೂ ಸುಗ್ರೀವಾಜ್ಞೆಯನ್ನು ಹೊರಡಿಸುತ್ತಾರೆ. ಆದರೆ, ಕನ್ನಡಿಗರ ಜ್ವಲಂತ ಕುಡಿಯುವ ನೀರಿನ ಸಮಸ್ಯೆ ಇರುವ ಈ ಸಂದರ್ಭದಲ್ಲಿ ಧೈರ್ಯವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಬೇಕು” ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
“ಈ ಹೋರಾಟ ಕೇವಲ ಮಂಡ್ಯ ಭಾಗದ ರೈತರ ಹೋರಾಟ ಎಂಬುದನ್ನು ಮರೆತು ಇದು ಸಮಸ್ತ ಕನ್ನಡಿಗರ ಅದರಲ್ಲೂ ಬೆಂಗಳೂರಿಗರ ಹೋರಾಟ ಎಂದು ಮನ ಗಂಡು ಬೆಂಗಳೂರಿಗರೆಲ್ಲರೂ ಹಾಗೂ ಎಲ್ಲ ಕಲಾವಿದರು ಒಂದಾಗಿ ಈ ಹೋರಾಟದಲ್ಲಿ ಭಾಗಿಯಾಗಬೇಕು” ಎಂದು ಕರೆ ನೀಡಿದರು.
ರಾಜಕಾರಣಿಗಳು ಹೇಳುವುದೊಂದು, ಮಾಡುವುದೊಂದು
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, “ಎಲ್ಲ ರಾಜಕೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಆದ್ದರಿಂದ ನಾವು ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ದೂರ ಇಟ್ಟಿದ್ದೇವೆ. ನಾನು ದೇವೇಗೌಡರ ಜೊತೆ ಕೂಡ ಹೋರಾಟ ಮಾಡಿದ್ದೇನೆ. ರಾಜಕಾರಣಿಗಳು ಹೇಳುವುದು ಒಂದು, ಮಾಡುವುದು ಇನ್ನೊಂದು. ಅದಕ್ಕಾಗಿ ಅವರನ್ನು ದೂರ ಇಟ್ಟಿದ್ದೇವೆ” ಎಂದರು.
“ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡುವಾಗ ನನ್ನನ್ನು ಕರೆದಿದ್ದರು. ಆದರೆ, ನಾನು ಹೋಗಲಿಲ್ಲ. ಆದರೆ, ಅವರೀಗ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಮೇಕೆದಾಟು ಹೋರಾಟ ಅವರದ್ದಲ್ಲ, ಈ ಭಾಗದ ಜನರು ಮೊದಲಿನಿಂದಲೂ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡುತ್ತಿದ್ದಾರೆ” ಎಂದು ಹೇಳಿದರು.
“ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನಿಯಂತ್ರಣ ಪ್ರಾಧಿಕಾರ ನೀಡಿರುವ ಆದೇಶವನ್ನು ಸರ್ಕಾರ ಧಿಕ್ಕರಿಸಬೇಕು. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಆದೇಶ ರದ್ದು ಪಡಿಸುವಂತೆ ಮಾಡಬಹುದಾ ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು” ಎಂದು ಒತ್ತಾಯಿಸಿದರು.
“1.20 ಕೋಟಿ ಜನ ಬೆಂಗಳೂರಿನಲ್ಲಿ ಇದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಬೇರೆ ರಾಜ್ಯದಿಂದ ಬಂದವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗುವ ಆತಂಕ ಇದ್ದು, ಬೆಂಗಳೂರಿನ ಸಂಘ ಸಂಸ್ಥೆಗಳು ಕೂಡ ಈ ಹೋರಾಟಕ್ಕೆ ಕೈಜೋಡಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಜ್ಞಾನಿಯ ಕಾರಿಗೆ ಕಲ್ಲೆಸೆತ; ಮೂವರ ಬಂಧನ
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯದ ರೈತರ ಸಂಕಷ್ಟ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುವ ಬಗ್ಗೆ ಸಮಿತಿ ಚಿಂತಿಸುತ್ತಿದೆ” ಎಂದು ಹೇಳಿದರು.
‘ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ರಂಗಕರ್ಮಿ ಕಪ್ಪಣ್ಣ, ಜಲ ತಜ್ಞ ರಾಜಾರಾಂ, ಆಮ್ ಆದ್ಮಿ ಪಕ್ಷದ ಸಂಚಿತ್ ಸೇವಾನಿ, ಸುಷ್ಮಾ ವೀರ್, ಬೈರೇಗೌಡ, ಸೋಸಲೇ ಸಿದ್ದರಾಜು, ಮಾಳವಿಕ ಸೇರಿದಂತೆ ಇನ್ನಿತರ ಕನ್ನಡಪರ ಸಂಘಟನೆಗಳ ಪ್ರಮುಖ ನಾಯಕರುಗಳು ಪಾಲ್ಗೊಂಡಿದ್ದರು.