ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡುರು, ಕೊಳ್ಳುರು ಹಾಗೂ ತಡಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಒಟ್ಟು 50 ಗ್ರಾಮಗಳಿವೆ. ಈ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಒದಗಿಸಲು ‘108 ಆ್ಯಂಬುಲೆನ್ಸ್’ ಒದಗಿಸಬೇಕು ಎಂದು ಹಲವು ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹತ್ತಿಗೂಡುರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ನೀಡುವುದರಿಂದ ಗುಡೂರು, ಕೊಂಗಂಡಿ, ಮಂಡಗಳ್ಳಿ, ಸಾವೂರು, ಕಾಟಮನಹಳ್ಳಿ, ಬೀರನೂರು, ಪರಸಾಪುರು, ಮರಕಲ್, ಕೊಳೂರು, ಟಣ್ಣೂರು, ಗೌಡೂರು, ಯಕ್ಷಂತಿ, ಮದರ ಕಲ್, ನಂದಿಹಳ್ಳಿ, ಹಯ್ಯಳ ಬಿ. ಬಸವಂತಪುರ, ಮುನಮುಟ್ಟಿಗಿ, ಬೊಮ್ಮನಹಳ್ಳಿ, ಅನವಾರ್, ಹಯ್ಯಳ (ಕೆ) ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದುಭೀಮ ಆರ್ಮಿ ಜಿಲ್ಲಾ ಉಸ್ತುವಾರಿ ಶರಣರೆಡ್ಡಿ ಹತ್ತಿಗೂಡುರ್ ತಿಳಿಸಿದ್ದಾರೆ.
ಈ ಗ್ರಾಮಗಳ ಸುತ್ತು-ಮುತ್ತ ಎಲ್ಲಿಯಾದರೂ ಅಪಘಾತ ಸಂಭವಿಸದರೆ ಅಥವಾ ತುರ್ತು ಆರೋಗ್ಯ ಸಮಸ್ಯೆಯಾದರೆ, ಆ್ಯಂಬುಲೆನ್ಸ್ ಸಿಗದೆ ಪರದಾಡುವ ಪರಿಸ್ತಿತಿ ಇದೆ. ಹೀಗಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆ್ಯಂಬುಲೆನ್ಸ್ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಗ್ರಾಮದ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಿಂದ ಆರೋಗ್ಯ ವ್ಯವಸ್ಥೆ ಕಲ್ಪಿಸಲು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಈ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ನೀಡಬೇಕು” ಎಂದು ಶರಣರೆಡ್ಡಿ ಆಗ್ರಹಿಸಿದ್ದಾರೆ.