ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದ ಡಿಎಂಕೆ ಸಚಿವ ಮತ್ತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಹಿಂದಿ ದಿವಸ್ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ಅವರು, ‘ಹಿಂದಿ ಕುರಿತ ಸಚಿವರ ಹೇಳಿಕೆ ಅಸಂಬದ್ಧ’ ಎಂದಿದ್ದಾರೆ. ಜೊತೆಗೆ ‘ಅದು ಹಿಂದಿಯೇತರರ ಮೇಲೆ ದಬ್ಬಾಳಿಕೆ ನಡೆಸುವ ಪ್ರಯತ್ನ’ ಎಂದಿದ್ದಾರೆ.
ಹಿಂದಿ ದಿವಸ್ ಪ್ರಯುಕ್ತ ಮಾತನಾಡಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು, ‘ಹಿಂದಿ ಒಂದು ಒಗ್ಗೂಡಿಸುವ ಶಕ್ತಿಯಾಗಿದೆ’ ಎಂದಿದ್ದರು.
ಅದಕ್ಕೆ ತಿರುಗೇಟು ನೀಡಿರುವ ಉದಯನಿಧಿ ಸ್ಟಾಲಿನ್, ‘ದೇಶದ ಕೇವಲ ನಾಲ್ಕೈದು ರಾಜ್ಯಗಳಲ್ಲಿ ಮಾತ್ರ ಹಿಂದಿಯನ್ನು ಮಾತನಾಡಲಾಗುತ್ತಿದೆ’ ಎಂದಿದ್ದಾರೆ.
‘ನಾವು ಇಲ್ಲಿ ತಮಿಳು ಮಾತನಾಡುತ್ತಿರುವಾಗ ಕೇರಳ ಮಲೆಯಾಳಂ ಮಾತನಾಡುತ್ತದೆ. ಹಿಂದಿ ಎಲ್ಲಿ ವಿಲೀನ ಮಾಡುತ್ತದೆ ಮತ್ತು ನಮ್ಮನ್ನು ಸಬಲೀಕರಣಗೊಳಿಸುತ್ತದೆ? ಅಮಿತ್ ಶಾ ಹಿಂದಿಯೇತರ ಭಾಷೆಗಳನ್ನು ಪ್ರಾದೇಶಿಕ ಭಾಷೆಗಳೆಂದು ಕರೆದು ಅವುಗಳ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ಉದಯನಿಧಿ ಸ್ಟಾಲಿನ್ ಕೇಂದ್ರ ಗೃಹ ಸಚಿವರಿಗೆ ತಾಕೀತು ಮಾಡಿದರು.