- ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ ಆರೋಪ
- ಪ್ರಕರಣದ 3ನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಸ್ವಾಮೀಜಿ
ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾಡಿರುವ ವಂಚನೆ ಆರೋಪ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ತಲೆಮರೆಸಿಕೊಂಡಿರುವ ಹೊಸಪೇಟೆ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿರುವ ಪ್ರಕರಣದ 3ನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ಅಭಿನವ ಹಾಲಶ್ರೀ ಸಿಸಿಎಚ್-57ನೇ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ನಿನ್ನೆ ಸಂಜೆಯೇ ಅರ್ಜಿ ಸಲ್ಲಿಕೆ ಮಾಡಿದ್ದು, ಸೆ.16ರಂದು ವಿಚಾರಣೆ ನಡೆಸಲಿದೆ.

ಹಾಲಶ್ರೀ ಸ್ವಾಮೀಜಿ ಜೊತೆಗೆ ಉದ್ಯಮಿ ಗೋವಿಂದ ಬಾಬು ಪೂಜಾರಿ, ಚೈತ್ರಾ ಕುಂದಾಪುರ
ಸದ್ಯ ಪ್ರಕರಣದ ಎ1 ಆರೋಪಿ ಚೈತ್ರಾ ಕುಂದಾಪುರ, ಗುರುವಾರ ಸಿಸಿಬಿ ಪೊಲೀಸರು ವಿಚಾರಣೆಗಾಗಿ ಕಚೇರಿಗೆ ಕರೆ ತಂದಿದ್ದ ವೇಳೆ, “ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಗಡೆ ಬರುತ್ತದೆ. ಆಗ ದೊಡ್ಡ ದೊಡ್ಡವರ ಹೆಸರು ಆಚೆ ಬರುತ್ತೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇರುವುದರಿಂದ ಈ ಷಡ್ಯಂತ್ರ ನಡೆದಿದೆ” ಎಂದು ಹೇಳುತ್ತಾ ಸಿಸಿಬಿ ಕಚೇರಿಯ ಒಳಗಡೆ ಹೋಗಿದ್ದರು.
ಎ1 ಆರೋಪಿ ನೀವೆ ಅಲ್ವಾ ಎಂದು ಪ್ರಶ್ನಿಸಿದ್ದಕ್ಕೆ, “ಆಗಿರಲಿ, ಸತ್ಯ ಹೊರಗಡೆ ಬರುತ್ತೆ” ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ನಾಪತ್ತೆ ಆಗಿರುವ ಸ್ವಾಮೀಜಿ ಬಂಧನಕ್ಕೆ ಮತ್ತಷ್ಟು ಆಗ್ರಹಗಳು ಕೇಳಿಬಂದಿದ್ದವು.

ಈ ನಡುವೆ ಹಾಲಶ್ರೀ ಸ್ವಾಮೀಜಿ ಜೊತೆಗಿದ್ದ ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.
ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ₹5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು, ಮಂಗಳವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿ ಶ್ರೀ ಕೃಷ್ಣ ಮಠದ ಬಳಿ ಬಂಧಿಸಿದ್ದರು. ಈವರೆಗೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.