- ಕುಂದಾಪುರ ಮೂಲದ ಚೈತ್ರಾ ಸ್ನೇಹಿತೆ ಶ್ರುತಿ ತುಂಬ್ರಿ ಮಾತನಾಡಿರುವ ಆಡಿಯೋ
- ಗೋವಿಂದಬಾಬು ಪೂಜಾರಿ ಪರ ತಂಡವೊಂದರಿಂದ ಸರ್ವೇ ಬಗ್ಗೆ ‘ಡೀಲ್ ಮಾತುಕತೆ’
ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಉದ್ಯಮಿಯೋರ್ವರಿಗೆ 5 ಕೋಟಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಮತ್ತು ತಂಡದವರ ಪ್ರಕರಣವು ಈಗ ಬಗೆದಷ್ಟೂ ಬಿಚ್ಚಿಕೊಳ್ಳುತ್ತಿದೆ.
ಸದ್ಯ ಇದು ಬಿಜೆಪಿ ಕಚೇರಿಗೂ ತಲುಪಿದ್ದು, ಬಿಜೆಪಿ ಐಟಿ ಸೆಲ್ನಲ್ಲಿ ಕೆಲಸಕ್ಕಿದ್ದ ಚೈತ್ರಾ ಕುಂದಾಪುರ ಸ್ನೇಹಿತೆಯ ಆಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಚೈತ್ರಾ ಸ್ನೇಹಿತೆ ಕುಂದಾಪುರ ಮೂಲದ ಶ್ರುತಿ ತುಂಬ್ರಿ, ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯ ಸ್ನೇಹಿತರೋರ್ವರ ಜೊತೆಗೆ ಮಾತನಾಡಿರುವ ಆಡಿಯೋ ವೈರಲಾಗಿದ್ದು, ಗೋವಿಂದಬಾಬು ಪೂಜಾರಿ ಪರ ಸರ್ವೇ ನಡೆಸಿ, ‘ಪಾಸಿಟಿವ್ ರಿಪೋರ್ಟ್’ ನೀಡುವ ಬಗ್ಗೆ ‘ಡೀಲ್ ಮಾತುಕತೆ’ ಇದರಲ್ಲಿ ದಾಖಲಾಗಿದೆ.
‘ಒಂದು ತಂಡ ಸರ್ವೇಗಳನ್ನು ನಡೆಸುತ್ತದೆ. ಆ ತಂಡದ ಬಗ್ಗೆ ನಿಮಗೇನೂ ಹೇಳುವುದಿಲ್ಲ. ಆದರೆ ನೀವು ಈ ವಿಷಯದಲ್ಲಿ ನನ್ನನ್ನು ಕಣ್ಮುಚ್ಚಿಕೊಂಡು ನಂಬಬಹುದು’ ಎಂದು ಗೋವಿಂದ ಬಾಬು ಪೂಜಾರಿಯ ಸ್ನೇಹಿತರೋರ್ವರಿಗೆ ತಿಳಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಶ್ರುತಿ ತುಂಬ್ರಿ
‘ಈಗ ಸರ್ವೇ ಮಾಡುವ ಬಗ್ಗೆ ತಿಳಿಸಿದ ತಂಡವೇ ನಾಳೆಯ ದಿನ ಬಿಜೆಪಿಗೂ ಸರ್ವೇ ಮಾಡುತ್ತದೆ. ಆ ತಂಡದಲ್ಲಿ ಕೆಲವರನ್ನು ನಾನು ಹೈಜಾಕ್ ಮಾಡಿದ್ದೀನಿ. ಅಂದರೆ ಆ ತಂಡದಲ್ಲಿ ಕೆಲವು ಸ್ನೇಹಿತರಿದ್ದಾರೆ. ಅವರಿಗೋಸ್ಕರ(ಗೋವಿಂದಬಾಬು ಪೂಜಾರಿ) ನಾಲ್ಕೈದು ಜನರ ಜೊತೆಗೆ ಮಾತನಾಡುತ್ತೇನೆ. ಅವರ ವಿವರಗಳನ್ನು ಬಹಿರಂಗವಾಗಿ ಹೇಳುವುದಕ್ಕಾಗಲ್ಲ. ನಿಮ್ಮಂಥ ಸಾವಿರ ಜನ ಅಭ್ಯರ್ಥಿಗಳು ಇರ್ತಾರೆ. ಆದರೂ ಕೊನೆಗೆ ಬಿಜೆಪಿ ಜೊತೆಗೆ ಕೆಲಸ ಮಾಡುತ್ತಾರೆ” ಎಂದು ಕರೆ ಮಾಡಿ ಮಾತನಾಡಿದಾಗಿನ ವಿವರಗಳು ಆಡಿಯೋದಲ್ಲಿ ದಾಖಲಾಗಿದೆ.
ಅಲ್ಲದೇ, ಆಡಿಯೋದಲ್ಲಿ ಹಣ ನೀಡುವ ಬಗ್ಗೆ ಹಾಗೂ ತೆಗೆದುಕೊಳ್ಳುವ ಪ್ರದೇಶದ ಬಗ್ಗೆಯೂ ಮಾತುಕತೆ ನಡೆಸಿದ್ದ, ಅದರಲ್ಲಿ ಎಷ್ಟು ಕೊಡುವುದಕ್ಕೆ ಹೇಳಿದ್ದಾರೆ ಎಂದು ಕೇಳಿದ್ದಕ್ಕೆ ಗೋವಿಂದಬಾಬು ಪೂಜಾರಿ ಸ್ನೇಹಿತ 3 ಕೊಡಲು ತಿಳಿಸಿದ್ದಾರೆ ಎಂದು ಉತ್ತರಿಸಿದ್ದು, ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಕಾಫಿ ಡೇಗೆ ಬರುವಂತೆ ಬಿಜೆಪಿ ಐಟಿ ಸೆಲ್ನಲ್ಲಿ ಕೆಲಸಕ್ಕಿದ್ದ ಚೈತ್ರಾ ಕುಂದಾಪುರ ಸ್ನೇಹಿತೆ ಶ್ರುತಿ ತುಂಬ್ರಿ ತಿಳಿಸಿರುವುದು ದಾಖಲಾಗಿದೆ.
ಚೈತ್ರಾ ಕುಂದಾಪುರ ಪ್ರಕರಣಕ್ಕೂ ಈ ಡೀಲ್ ಮಾತುಕತೆಗೂ ಏನು ಸಂಬಂಧ ಎಂದು ಇನ್ನಷ್ಟೇ ಸಿಸಿಬಿ ಪೊಲೀಸರ ವಿಚಾರಣೆಯಿಂದ ತಿಳಿದುಬರಬೇಕಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸಹಿತ ಒಟ್ಟು ಏಳು ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.