- ಯಾರೇ ಮೋಸ ಮಾಡಿದರೂ ಅಂಥವರಿಗೆ ಶಿಕ್ಷೆ ಆಗಲೇಬೇಕು
- ಚೈತ್ರಾ ಕುಂದಾಪುರ ಜತೆ ವೈಯಕ್ತಿಕವಾಗಿ ಸಂಪರ್ಕ ಇರಲಿಲ್ಲ
ಉಪ್ಪು ತಿಂದವರು ನೀರು ಕುಡಿಯಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ನಾವು ಯಾರೂ ಕೂಡ ಚೈತ್ರಾ ಕುಂದಾಪುರ ಬೆಂಬಲಕ್ಕೆ ನಿಂತಿಲ್ಲ, ಆಕೆಯನ್ನು ರಕ್ಷಣೆ ಮಾಡಿಲ್ಲ ಹಾಗೂ ಈ ಪ್ರಕರಣದಲ್ಲಿ ಯಾವುದೇ ಪ್ರಭಾವ ಬೀರಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈ ರೀತಿ ಯಾರೇ ಮೋಸ ಮಾಡಿದರೂ ಅಂಥವರಿಗೆ ಶಿಕ್ಷೆ ಆಗಲೇಬೇಕು. ಚೈತ್ರಾ ಕುಂದಾಪುರ ಜೊತೆಗೆ ನನಗೆ ಯಾವುದೇ ರೀತಿಯ ನೇರ ಆಗಲಿ, ವೈಯಕ್ತಿಕ ಸಂಪರ್ಕವಾಗಲಿ ಇರಲಿಲ್ಲ. ನನ್ನ ಜೊತೆ ನೂರಾರು ಮಂದಿ ಫೋಟೋ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಚೈತ್ರಾ ಕೂಡ ಫೋಟೋ ತೆಗೆದುಕೊಂಡಿರಬಹುದು” ಎಂದರು.
“ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜಕೀಯ, ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು ಮಾಡಿದರು ಶಿಕ್ಷೆ ಆಗಬೇಕು. ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ ಈದ್ಗಾ ಮೈದಾನ | ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ ಅಸ್ತು; ಬಿಜೆಪಿಗರಿಂದ ಸಂಭ್ರಮ
“ತಪ್ಪು ಮಾಡದೆ ಇದ್ದರೆ ಅನವಶ್ಯಕವಾಗಿ ತೊಂದರೆ ಕೊಡಬಾರದು. ನನ್ನ ಹೆಸರನ್ನು ಚೈತ್ರಾ ದುರುಪಯೋಗ ಮಾಡಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರು ದಿಲ್ಲಿ, ರಾಜ್ಯ ನಾಯಕರ ಹೆಸರು ಹಾಗೂ ಪಕ್ಷವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು ಆ ಲಿಂಕ್ ಬಗ್ಗೆ ತನಿಖೆ ಆಗಲಿ. ಅದೇ ರೀತಿ ಅದಕ್ಕೆ ಕುಮ್ಮಕ್ಕು ನೀಡಿದವರ ಬಗ್ಗೆಯೂ ಕ್ರಮಕೈಗೊಳ್ಳಬೇಕು” ಎಂದರು.
“ಬಿಜೆಪಿಯಲ್ಲಿ ಹಣ ತೆಗೆದುಕೊಂಡು ಟಿಕೆಟ್ ನೀಡುವ ಸ್ಥಿತಿ ಇಲ್ಲ. ಮುಂದೆ ಕೂಡ ಅಂತ ಸ್ಥಿತಿ ಬರುವುದೂ ಇಲ್ಲ. ಅಂತಹ ಪಕ್ಷ ಕೂಡ ಬಿಜೆಪಿ ಅಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಹಾಗೂ ಎಲ್ಲಿ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ” ಎಂದು ಹೇಳಿದರು.