ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಕೂಟ ಆಯೋಜಿಸಲಾಗಿತ್ತು. ಜತೆಗೆ ಶಿವಗಂಗೋತ್ರಿ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಉಪಕುಲಪತಿ ಡಾ. ಬಿ.ಡಿ.ಕುಂಬಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ತಪ್ಪು ಕಲ್ಪನೆ. ಅದರ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೃದ್ರೋಗ, ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡದಂತಹ ಕಾಯಿಲೆಗಳು ಚಿಕ್ಕವಯಸ್ಸಿಗೆ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ, ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೈಹಿಕವಾಗಿ ಸದೃಢರಾಗಿ ಇರಬೇಕು ಎಂದರು.
ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯದ ಇತರೆ ವಿಶ್ವವಿದ್ಯಾಲಯದ ಕಾಲೇಜು ವಿದ್ಯಾರ್ಥಿಗಳಿಗೆ ಸ್ಫೂರ್ತಿ, ಪ್ರೋತ್ಸಾಹ ಹಾಗೂ ಪ್ರೇರಣೆ ನೀಡುವಷ್ಟು ಬೆಳೆದಿದ್ದಾರೆ. ಇದೇ ರೀತಿ ನಮ್ಮ ಕಾಲೇಜು ನಮ್ಮ ವಿಶ್ವವಿದ್ಯಾನಿಲಯ ಉತ್ತಮ ಹೆಸರು ಪಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಮೇನಹಳ್ಳಿ ಜಗನ್ನಾಥ್, ಪ್ರೇಮ್ ಚಂದ್ ಚಿರವೂಲು, ಡಾ.ಶಾರದಾ ದೇವಿ ಕಳ್ಳಿಮನಿ, ಡಾ.ಅಶೋಕ ಕುಮಾರ್ ಪಾಳೇದ, ಪ್ರೊ. ಕೆ.ಶಿವಶಂಕರ್, ಪ್ರೊ. ಆರ್.ಶಶಿಧರ್ ಸೇರಿದಂತೆ ವಿದ್ಯಾರ್ಥಿಗಳು ಎನ್.ಎಸ್.ಎಸ್. ಅಧಿಕಾರಿಗಳು, ಬೋಧಕ ಮತ್ತು ಬೋಧಕೇತರ ವರ್ಗ, ಕಾಲೇಜು ಸಿಬ್ಬಂದಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.