ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ

Date:

Advertisements
ಬಿಜೆಪಿ ತನ್ನ ಕೇಸರಿ ಪ್ರಯೋಗಶಾಲೆಯಲ್ಲಿ ಹಲವು ಉಗ್ರವಾದಿ ಭಾಷಣಕಾರರನ್ನು ತಯಾರಿಸಿ ಸಮಾಜಕ್ಕೆ ಕೋಮುವಾದಿ ವಿಷ ಹರಿಸಿದೆ. ತೆರೆಮರೆಯಲ್ಲಿ ಅದರ ಲಾಭ ಉಣ್ಣುತ್ತಿರುವ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಅವರ ಮಕ್ಕಳೂ ಮಜವಾಗಿದ್ದಾರೆ. ಜೈಲುಪಾಲಾಗುತ್ತಿರುವುದು ಬಡವರ ಮಕ್ಕಳು

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ- ಉಡುಪಿಯನ್ನು ದಕ್ಷಿಣ ಭಾರತದ ಹಿಂದುತ್ವದ ಪ್ರಯೋಗ ಶಾಲೆ ಎಂದು ಕರೆಯಲಾಗುತ್ತಿದೆ. ಬುದ್ದಿವಂತರ ಜಿಲ್ಲೆ ಎಂದು ಕರೆಯಲಾಗುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಕೋಮು ಧ್ರುವೀಕರಣ, ಹಿಂದುತ್ವವಾದಿಗಳ ಮೇಲಾಟ, ಬಿಜೆಪಿ ಪ್ರೇರಿತ ಕೋಮುಗಲಭೆ ಇದಕ್ಕೆ ಸಾಕ್ಷಿ.

ಉಗ್ರ ಹಿಂದುತ್ವವಾದಿ ಸಂಘಟನೆಗಳು ಕರಾವಳಿಯ ಕೋಮು ಸಾಮರಸ್ಯವನ್ನು ಕದಡಿವೆ. ಹಿಂದು ಮುಸ್ಲಿಮರ ಸೌಹಾರ್ದ ಬದುಕಿಗೆ ಕೊಳ್ಳಿ ಇಟ್ಟಿವೆ. ಅದರ ಲಾಭ ಪಡೆದ ಬಿಜೆಪಿ ತನ್ನ ಕೇಸರಿ ಪ್ರಯೋಗಶಾಲೆಯಲ್ಲಿ ಹಲವು ಉಗ್ರವಾದಿ ಭಾಷಣಕಾರರನ್ನು ತಯಾರಿಸಿ ಸಮಾಜಕ್ಕೆ ಕೋಮುವಾದಿ ವಿಷ ಹರಿಸಿದೆ. ತೆರೆಮರೆಯಲ್ಲಿ ಅದರ ಲಾಭ ಉಣ್ಣುತ್ತಿರುವ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಅವರ ಮಕ್ಕಳೂ  ಮಜವಾಗಿದ್ದಾರೆ.

ಸದ್ಯ ಬಹಳ ಸುದ್ದಿಯಲ್ಲಿರುವ ಕೇಸರಿ ಸಂಘಟನೆಗಳ ಫಯರ್‌ ಬ್ರಾಂಡ್‌ ಭಾಷಣಕಾರ್ತಿ ಎಂದು ಖ್ಯಾತಿ ಗಳಿಸಿದ್ದ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಹಲವು ವೇದಿಕೆಗಳಲ್ಲಿ ಹಿಂದುತ್ವದ ಕುರಿತ ಪ್ರಚೋದನಕಾರಿ ಭಾಷಣ ಮಾಡುತ್ತಾ ರಾಜಕೀಯ ನಾಯಕರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರಳನ್ನು ಸಿಸಿಬಿ ಬಂಧಿಸಿದೆ. ಕೇವಲ ಕೇಸರಿ ಶಾಲು ಹಾಕೊಂಡು ಭಾಷಣ ಮಾಡುತ್ತಾ ಊರೂರು ಸುತ್ತುತ್ತ ಇದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ, ಆಕೆಯ ಮೇಲೆ ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಗೆ ಬೈಂದೂರಿನಿಂದ ಸ್ಪರ್ಧಿಸಲು ಟಿಕೆಟ್‌ ಕೊಡಿಸುವ ಆಮಿಷವೊಡ್ಡಿ ಸುಮಾರು ಏಳು ಕೋಟಿ ಹಣ ಲೂಟಿ ಮಾಡಿರುವ ಆರೋಪ ಇದೆ. ಅದಕ್ಕಾಗಿ ಆಕೆಯ ತಂಡ ಹೆಣೆದ ನಾಟಕ ಅಂತಿಂಥದ್ದಲ್ಲ. ಬಿಜೆಪಿಯ ಕೇಂದ್ರ ಟಿಕೆಟ್‌ ಆಯ್ಕೆ ಸಮಿತಿಯ ಸದಸ್ಯ ಎಂದು ನಕಲಿ ಪಾತ್ರ ಸೃಷ್ಟಿಸಿ ನಂಬಿಸಲಾಗಿದೆ.

Advertisements

ಕುಂದಾಪುರದ ಬಡ ಕಟುಂಬದಿಂದ ಬಂದು, ಬಾಲ್ಯದಲ್ಲಿಯೇ ಮುಂಬೈಗೆ ಹೋಗಿ ಹೊಟೇಲಿನಲ್ಲಿ ಕಾರ್ಮಿಕನಾಗಿ ದುಡಿದು ಈಗ ಹಲವು ಹೊಟೇಲುಗಳ ಮಾಲೀಕನಾಗಿರುವ ಗೋವಿಂದ ಬಾಬು ಪೂಜಾರಿ ವಂಚನೆಗೆ ಒಳಗಾದ ವ್ಯಕ್ತಿ.  ಉದ್ಯಮ ಮತ್ತು ಚಾರಿಟಬಲ್‌ ಟ್ರಸ್ಟ್‌ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯನ್ನು ಹಲವು ಸಭೆ ಸಮಾರಂಭಗಳಲ್ಲಿ ಹೊಗಳಿ ಅಟ್ಟಕ್ಕೇರಿಸಿ ನಂತರ ಪ್ರಪಾತಕ್ಕೆ ತಳ್ಳಲಾಗಿದೆ. ಅವರ ಟ್ರಸ್ಟ್‌ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಹೋಗಿ ಸ್ನೇಹ ಗಳಿಸಿದ್ದ ಚೈತ್ರಳನ್ನು ಆಕೆಯ ಚಾಲಾಕಿತನದ ಮಾತಿನಿಂದಲೇ ನಂಬಿ ಮೋಸ ಹೋಗಿದ್ದಾರೆ.

ಪದೇ ಪದೇ ಹಿಂದುತ್ವದ ಸಂಘಟನೆಗಳ ಮುಖಂಡರು, ಉಗ್ರ ಭಾಷಣಕಾರರು, ಜೊತೆಗೆ ಕಾವಿಧಾರಿಗಳು ಅಕ್ರಮ ವ್ಯವಹಾರ, ಅನೈತಿಕ  ಚಟುವಟಿಕೆ, ಲೈಂಗಿಕ ಹಗರಣ, ವಂಚನೆಯ ಪ್ರಕರಣಗಳಲ್ಲಿ ಸಿಲುಕಿ ಅವರ ನಿಜ ಬಣ್ಣ ಬಯಲಾಗುತ್ತಿದೆ. ಆದರೂ ಜನ ಇಂತಹ ಸಂಘಟನೆ, ಮುಖಂಡರಿಂದ ದೂರ ಸರಿಯುತ್ತಿಲ್ಲ ಎಂಬುದು ಆತಂಕಕಾರಿ. ಕಾಳಿಮಠದ ಋಷಿಕುಮಾರ ಸ್ವಾಮಿ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆಹಳ್ಳಿ, ದುರ್ಗಾವಾಹಿನಿಯ ಚೈತ್ರಾ ಕುಂದಾಪುರ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಮುಂತಾದವರ ಹಿನ್ನೆಲೆ, ಅವರ ಜೀವನ ಶೈಲಿ ಗಮನಿಸಿದರೆ ಇವರಿಗೆಲ್ಲ ʼಹಿಂದುತ್ವʼ ಎಂಬುದು ದುಡಿಯದೇ ಬದುಕುವ ದಾರಿ ಎಂಬುದು ತಿಳಿಯುತ್ತದೆ. ಹಿಂದುತ್ವದ  ಹೆಸರಿನಲ್ಲಿ ಬೀದಿ ಹೆಣವಾಗುವವರು ಪ್ರವೀಣ್‌ ನೆಟ್ಟಾರು, ಪ್ರಶಾಂತ್‌ ಪೂಜಾರಿ, ಹರ್ಷ ತರಹದ ಬಡ ಕುಟುಂಬದ ಯುವಕರು.

ಈ ಚೈತ್ರಾ ಕುಂದಾಪುರ ಹಿಂದುತ್ವದ ಫೈಯರ್‌ ಬ್ರಾಂಡ್‌ ಆಗುವುದಕ್ಕೂ ಮುನ್ನ ಪತ್ರಕರ್ತೆಯಾಗಿ ಕೆಲಸ ಮಾಡಿದಾಕೆ.  ಕುಂದಾಪುರದ ಬಡ ರಾಮಕ್ಷತ್ರಿಯ ಕುಟುಂಬದ ಯುವತಿ. ಮಂಗಳೂರು ಯುನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಮಾಡಿ ನಂತರ ʼಸಮಯ ಟಿವಿʼಯಲ್ಲಿ ಕೆಲಸ ಮಾಡಿದ್ದಾಳೆ. ಮಣಿಪಾಲದ ಪತ್ರಿಕೆಯೊಂದರಲ್ಲೂ ದುಡಿದಾಕೆ.  ಆಕರ್ಷಕ ಮಾತುಗಾರ್ತಿಯಾಗಿದ್ದ ಈಕೆಯನ್ನು ಹಿಂದುತ್ವ ಸಂಘಟನೆಗಳು ಬಳಸಿಕೊಂಡವು. 2018ರಲ್ಲಿ ಉಡುಪಿಯಲ್ಲಿ ರಮೇಶ್ ಕಾಂಚನ್ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸಿದ ಪ್ರತಿಭಟನಾ ಮೆರವಣಿಗೆಯ ನಡುವೆ ಹೋಗಿ ʼಮೋದಿ ಮೋದಿ..ʼ ಎಂದು ಕಿರುಚಾಡಿ ಸುದ್ದಿಯಾಗಿದ್ದಳು. ಚೈತ್ರಾಳ ಧೈರ್ಯದ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಾದ ನಂತರ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುತ್ತಾ ಖ್ಯಾತಿ ಗಳಿಸಿದ ಈಕೆಯನ್ನು ಉತ್ತರ ಕರ್ನಾಟಕದ ಹಿಂದುತ್ವವಾದಿ ಸಂಘಟನೆಗಳೂ ಕರೆಯಲಾರಂಭಿಸಿದವು. ಈಕೆಯ ಮೇಲೆ ಹತ್ತಾರು ಪ್ರಕರಣಗಳು ದಾಖಲಾಗಿವೆ. ಎರಡು ವರ್ಷಗಳ ಹಿಂದೆ ಕುಕ್ಕೆಸುಬ್ರಹ್ಮಣ್ಯ ಮಠ ಮತ್ತು ದೇವಸ್ಥಾನದ ನಡುವಿನ ವಿವಾದದಲ್ಲಿ ಈಕೆ ಯುವಕರೊಂದಿಗೆ ಹೋಗಿ ಗಲಾಟೆ ಮಾಡಿರುವುದು ಸುದ್ದಿಯಾಗಿತ್ತು. ಹಿಂದುತ್ವ, ಪ್ರಚೋದನಕಾರಿ ಭಾಷಣದಾಚೆಗೂ ಈಕೆಯ ವ್ಯಕ್ತಿತ್ವ ಹತ್ತು ಹಲವು ವಿವಾದಗಳಿಗೆ ಕಾರಣವಾಗಿತ್ತು. ಪ್ರಸಿದ್ಧಿ, ನಾಯಕರ ಸಂಪರ್ಕ, ಜನ ಬೆಂಬಲ ಏನೇ ಮಾಡಿದರೂ ದಕ್ಕಬಹುದು ಎಂಬ ಹುಚ್ಚು ಧೈರ್ಯ ಈ ತರಹದ ಅವಾಂತರಕ್ಕೆ ದೂಡಿದೆ. ಇನ್ನು ಹಿಂದುತ್ವ, ಸಂಸ್ಕೃತಿ ರಕ್ಷಣೆ, ರಾಷ್ಟ್ರೀಯತೆ, ದೇಶಪ್ರೇಮ ಇವೆಲ್ಲ ಜನರನ್ನು ಮರಳು ಮಾಡುವ ಪದಗಳು ಅಷ್ಟೇ ಎಂಬುದನ್ನು ಜನ ಅರಿಯಬೇಕಿದೆ.

ಮೋದಿ ಬೆಂಬಲಿಗರ ಪಾಲಿಗೆ ಅದ್ಭುತ ವಾಗ್ಮಿ ಎನಿಸಿಕೊಂಡಿರುವ ತನ್ನ ಆಕರ್ಷಕ ಶೈಲಿಯ ಸುಳ್ಳು ಭಾಷಣಗಳಿಂದಲೇ ಆಗಾಗ ಸುದ್ದಿಯಾಗುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಂತವರಿಂದ ಪ್ರೇರಣೆ ಪಡೆದು ಅದೆಷ್ಟೋ ಯುವಕ/ ಯುವತಿಯರು ಹಿಂದುತ್ವದ ಕೊಚ್ಚೆಗೆ ಬೀಳುತ್ತಿದ್ದಾರೆ. ಇನ್ನೂ ಹೈಸ್ಕೂಲು ಓದುತ್ತಿರುವ ಹಾರಿಕಾ ಮಂಜುನಾಥ್‌ ಎಂಬ ಬಾಲಕಿ ಚೈತ್ರಾಳ ಮುಂದುವರಿದ ರೂಪಾಂತರಿ. ಈ ಬಾಲಕಿ ನಿರರ್ಗಳವಾಗಿ ಭಾಷಣ ಮಾಡುವ ಶೈಲಿ ಎಂತವರನ್ನೂ ಮೋಡಿ ಮಾಡುವಂತಿದೆ. ಕಳೆದ ಎರಡು ವರ್ಷಗಳಲ್ಲಿ ಈಕೆ ಹಲವು ಹಿಂದುತ್ವ ಸಂಘಟನೆಗಳ ಸಮಾರಂಭಗಳಲ್ಲಿ ʼದಿಕ್ಸೂಚಿ ಭಾಷಣʼ ಮಾಡುವಷ್ಟು ಬೆಳೆದಿದ್ದಾಳೆ. ಮಸೀದಿಯ ಆಜಾನ್‌ನಲ್ಲಿ “ಕಾಫೀರರನ್ನು, ಅಂದ್ರೆ ಹಿಂದೂಗಳನ್ನು ಕೊಲ್ಲಿ” ಎಂದು ಕೂಗಿ ಹೇಳಲಾಗುತ್ತಿದೆ ಎಂದು ಭಾಷಣ ಮಾಡಿದ ಕಾರಣಕ್ಕೆ ಪ್ರಕರಣವೊಂದು ದಾಖಲಾಗಿದೆ. ಚೈತ್ರಾ ಕುಂದಾಪುರಳಂತೆ ಈಕೆಯೂ ಕೇಸರಿ ಶಾಲು ಹಾಕಿಕೊಂಡು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕೋಮು ಪ್ರಚೋದನೆಯ ಭಾಷಣ ಮಾಡುತ್ತಾ ‌ʼಯುವವಾಗ್ಮಿʼ ಎಂಬ ಬಿರುದು ಪಡೆದಿದ್ದಾಳೆ.

ನಾಲ್ಕು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ಅಪಾಯಕಾರಿ ಪ್ರತಿಭೆಗಳು ಪ್ರಜ್ವಲಿಸಿವೆ. ವಯಸ್ಸು, ಅನುಭವಗಳಿಗೆ ಮೀರಿದ ವಿಚಾರಗಳನ್ನು ಯಾವುದೇ ಅಂಜಿಕೆಯಿಲ್ಲದೇ ನಿರರ್ಗಳವಾಗಿ ಮಾತನಾಡುವುದೇ ಇವರ ಬಂಡವಾಳ. ಇಂತಹ ಯುವಜನರ ಪ್ರತಿಭೆಯ ಲಾಭವನ್ನು ಸಮಾಜಘಾತಕ ಶಕ್ತಿಗಳು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಸಮಾಜಘಾತಕ ಸಂಘಟನೆಗಳ ಜಾಲಗಳಿಗೆ ಯುವ ಸಮೂಹ ಬೀಳದಂತೆ ತಡೆಯುವುದು ಕುಟುಂಬ ಮತ್ತು ಸಮಾಜದ ಕರ್ತವ್ಯ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Generally, people are impressed by the leaders who can wield rhetorical flourish. But those leaders tend to be demagogues in their political and religious fervor. Remember Mark Antony’s famous “Friends, Roman, Countrymen” speech in Shakespeare’s ‘Julius Caesar’? In the course of that speech, Mark Antony manages to turn the minds of his audience 180 degrees!

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X