ನಮ್ಮದು ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ಇದರಲ್ಲಿ ಮತದಾನದ ಹಕ್ಕು ಪ್ರಮುಖವಾಗಿದ್ದು, ಜನರ ಬದುಕಿನ ಹಕ್ಕನ್ನು ಜನರಿಗೆ ನೀಡುವದರ ಮೂಲಕ ಸಂವಿಧಾನದ ಆಶಯ ಈಡೇರಿದಂತಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ನೀಡಲು ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ತಿಳಿಸಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತವಾಗಿ ಜಿಲ್ಲಾಡಳಿತ ಭವನದ ಭವ್ಯ ಮೆಟ್ಟಿಲುಗಳ ಮೇಲೆ ಸಂವಿಧಾನದ ಆತ್ಮವೇಂದೇ ಪರಿಗಣಿಸಲಾಗಿರುವ ಸಂವಿಧಾನ ಪೀಠಿಕೆಯನ್ನು ಜಾಗತಿಕ ಮಟ್ಟದಲ್ಲಿ ಏಕಕಾಲಕ್ಕೆ ಓದಿದ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈ ಸಂತಸದ ಸಂದರ್ಭವು ಅಭಿಮಾನದ ಜವಾಬ್ದಾರಿ ಜಾಗೃತಿ ಮೂಡುವಂತಹದ್ದಾಗಿದೆ. ದೇಶದ ಸಂವಿಧಾನದ ಪೀಠಿಕೆಯಲ್ಲಿಯೇ ನಮ್ಮ ದೇಶದ ಪ್ರಜಾಪ್ರಭುತ್ವವು ಹಿರಿಮೆ, ಶಕ್ತಿ ಹಾಗೂ ಅದರ ಶ್ರೇಷ್ಠ ಗುಣಗಳು ಅಡಗಿವೆ. ಈ ಪೀಠಿಕೆಯಿಂದ ಕಾನೂನು ಜಾರಿ ಹಾಗೂ ಅನುಷ್ಠಾನಗೊಳಿಸುವುದಕ್ಕೆ ಹಾಗೂ ನಮ್ಮ ಪ್ರಜೆಗಳು ಸಂತುಷ್ಟರಾಗಿ ಭಾರತ ರಾಷ್ಟ್ರವನ್ಬು ಕಟಿಬದ್ಧರಾಗುವದಕ್ಕೆ ಸಾಧ್ಯವಾಗಿದೆ. ಜಾಗತಿಕ ಪ್ರಜಾಪ್ರಭುತ್ವದ ಈ ಶುಭ ಸಮಾರಂಭದಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕ ಪಠಣದ ಮೂಲಕ ಪ್ರಜಾಪ್ರಭುತ್ವದ ಈ ವಿಶ್ವಾಸ, ಬದ್ಧತೆಯನ್ನು ಅರ್ಪಿಸಿಕೊಂಡಿರುವ ಅಧಿನಿಯಮಗಳ ಪ್ರಕರಣವಾಗಿ ಸ್ಪಷ್ಟಗೊಳಿಸಿದೆ” ಎಂದರು.
“ನಮ್ಮ ಸರ್ಕಾರ ಬಂದ ನಂತರ ಪೀಠಿಕೆಯ ಮಹತ್ವ ಎಲ್ಲರಿಗೂ ತಿಳಿಯಪಡಿಸುವುದೇ ಒಂದು ಮಹತ್ವವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೇ ನಮ್ಮದು ಶ್ರೇಷ್ಠ ಪ್ರಜಾಪ್ರಭುತ್ವವಾಗಿದೆ. ಸಂವಿಧಾನವನ್ನು ಬಳಸಿ ಪ್ರಮುಖ ಅವಕಾಶದಲ್ಲಿರುವವರಿಗೆ ಎಚ್ಚರಿಕೆ ನೀಡುವುದು ಸಂವಿಧಾನದ ಪೀಠಿಕೆಯ ಧ್ಯೇಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸಂವಿಧಾನಕ್ಕೆ ಧಕ್ಕೆ ತರುವಂತಹ ಯಾವುದೇ ಕ್ರಮಗಳನ್ನು ದೇಶದ ಕಟ್ಟಕಡೆಯ ವ್ಯಕ್ತಿಯೂ ಒಪ್ಪುವುದಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸಬೇಕು. ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ರಾಷ್ಟ್ರದ ಆಸ್ತಿ, ಸಂಪತ್ತು ಕೇಂದ್ರಿಕೃತವಾಗಿ ಹಂಚಿಕೆಯಾಗದೇ ಎಲ್ಲರಿಗೂ ಸಮನಾಗಿ ಹಂಚಬೇಕು. ಈ ಉದ್ದೇಶದೊಂದಿಗೆ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೊಳಿಸಲಾಯಿತು. ಸರ್ವಧರ್ಮಗಳಿಗೂ ಸಮಭಾವ ಎಂಬ ಸದಾಶಯ ಈ ಸಂವಿಧಾನದ ಮುಖ್ಯ ಧ್ಯೇಯವಾಗಿದೆ” ಎಂದು .
“ಗದಗ ಜಿಲ್ಲೆಯನ್ನು ವ್ಯಾಜ್ಯಮುಕ್ತ ಜಿಲ್ಲೆಯಾಗಿಸಬೇಕು. ಈ ಹಿನ್ನಲೆಯಲ್ಲಿ ಗ್ರಾಮ, ಹೊಬಳಿ, ತಾಲೂಕು ಮಟ್ಟದಲ್ಲಿನ ಪ್ರಕರಣಗಳ ಕುರಿತು ಶೀಘ್ರ ಪರಿಹಾರಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ವ್ಯಾಜ್ಯಮುಕ್ತ ಗ್ರಾಮಗಳಾದಲ್ಲಿ ಜನಸಾಮಾನ್ಯರಲ್ಲಿ ಉತ್ತಮ ಬಾಂಧವ್ಯ ವೃದ್ಧಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣವಾಗಲಿದೆ. ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಎಲ್ಲರೂ ಕೈಜೋಡಿಸಬೇಕು” ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾತನಾಡಿ, “ನಾವೆಲ್ಲರೂ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ದೇಶದಲ್ಲಿ ಅನೇಕ ಜಾತಿ ಧರ್ಮಗಳಿದ್ದು, ಅವರುಗಳು ಅಲ್ಲದೇ ಇಡೀ ಜಗತ್ತೇ ನಮ್ಮ ಸಂವಿಧಾನವನ್ನು ಒಪ್ಪಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಸಂವಿಧಾನದ ರೀತಿ ನಾವೆಲ್ಲ ನಡೆದುಕೊಳ್ಳುತ್ತಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 149 ಕೋಟಿ ಜನರಿಗೆ ನಾವು ಸಾಮಾಜಿಕ ನ್ಯಾಯ ನೀಡಬೇಕಾಗಿದೆ. ದೇಶವನ್ನು ಆಳುವ ಸರ್ಕಾರ ಪ್ರತಿಯೊಬ್ಬ ನಾಗರಿಕನಿಗೂ ಸಮನಾದ ಹಕ್ಕನ್ನು ನೀಡುವ ಕೆಲಸ ಮಾಡಬೇಕು. ಈ ಕುರಿತು ಸಾರ್ವಜನಿಕರೂ ಜಾಗೃತರಾಗಬೇಕು. ಸಂವಿಧಾನದಲ್ಲಿ ಹೇಳಿದಂತೆ ಜಾತ್ಯತೀತ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ದಿನ ನಾವು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುತ್ತಿದ್ದೇವೆ. 2008ರಿಂದ ಎಲ್ಲ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿಯೂ ಸೆಪ್ಟೆಂಬರ್ 15ರಂದು ಆಚರಿಸಲಾಗುತ್ತಿದೆ. ಈ ದಿನ ನಾವು ಸಂವಿಧಾನ ಪಿಠೀಕೆ ಓದುತ್ತಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ನಾವು ಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತೇವೆ. ಈ ಜನಪ್ರತಿನಿಧಿಗಳು ಕಾನೂನುಗಳನ್ನು ಪಾಸ್ ಮಾಡುತ್ತಾರೆ. ಈ ಪ್ರಜಾಪ್ರಭುತ್ವದಲ್ಲಿ ಅನುಭವಿಸುವ ಸ್ವಾತಂತ್ರ್ಯ, ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ. ಈ ಪ್ರಜಾಪ್ರಭುತ್ವ ಆಡಳಿತವನ್ನು ಯಾರಿಂದಲೂ ಕಿತ್ತೊಗೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೂಲವನ್ನು ಕಡಿಮೆ ಮಾಡುವ ಅಪಾಯವಿದ್ದು ಈ ಕುರಿತು ಎಲ್ಲರೂ ಜಾಗೃತರಾಗಿರಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಸೆ.16 ರಂದು ‘ಜಿ. ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023’ ಪ್ರಾರಂಭ
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜಿಕರ ಸೇರಿದಂತೆ ಗಣ್ಯರು, ಹಲವು ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಲವು ಶಾಲಾ ವಿಧ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ನೆರೆದ ಗಣ್ಯರು ಹಾಗೂ ಶಾಲಾ ಮಕ್ಕಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ವಂದಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.