ಚಪ್ಪಲಿ ಗೋದಾಮಿಗೆ ಬೆಂಕಿ ತಗುಲಿ, ₹5 ಕೋಟಿಗೂ ಹೆಚ್ಚಿನ ಮೌಲ್ಯದ ಚಪ್ಪಲಿ, ಶೂ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗೋದಾಮಿನ ಬಳಿಯ ವಿದ್ಯುತ್ ಕಂಬಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ, ಉತ್ತರಹಳ್ಳಿ ನಿವಾಸಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ಎಎಸ್‌ಆರ್ ಮಾರ್ಕೆಟಿಂಗ್ ಮತ್ತು ಯುನಿಕಾರ್ನ್ ಮಾರ್ಕೆಟಿಂಗ್ ಎಂಬ ಹೆಸರಿನ ಗೋದಾಮಿಗೆ ಸಂಪರ್ಕಿಸಿದ್ದ ವಿದ್ಯುತ್ ತಂತಿಯಿಂದ ಶಾರ್ಟ್ಸರ್ಕ್ಯೂಟ್ ಉಂಟಾಗಿ ಗುರುವಾರ ತಡರಾತ್ರಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗೋದಾಮಿನಲ್ಲಿ 100ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಆದರೆ, ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ವಾಹನಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ, 20 ನಿಮಿಷಗಳಲ್ಲಿ ದಾಖಲೆಗಳನ್ನು ಒಳಗೊಂಡಿರುವ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹೊರತುಪಡಿಸಿ, ₹5 ಕೋಟಿಗೂ ಹೆಚ್ಚು ಮೌಲ್ಯದ ಪಾದರಕ್ಷೆಗಳು ಸುಟ್ಟುಹೋದವು ಎಂದು ತಿಳಿದುಬಂದಿದೆ.
“₹20 ಲಕ್ಷ ಮೌಲ್ಯದ ಪಾದರಕ್ಷೆಗಳನ್ನು ಗೋದಾಮಿಗೆ ವ್ಯವಸ್ಥಾಪಕ ಶ್ರೀನಿವಾಸ್ ಅವರು ಮುಂದೆ ನಿಂತು ಇಳಿಸಿದ್ದಾರೆ. ಅವರು ಹೋದ ಸ್ವಲ್ಪ ಸಮಯದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನ ಗೇಟ್ ಬಳಿ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಟ್ರಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ, ಕಳಪೆ ಗುಣಮಟ್ಟದ ವಿದ್ಯುತ್ ಕಂಬ ಮುರಿದು ಬಿದ್ದಿದೆ” ಎಂದು ಯೂನಿಕಾರ್ನ್ ಮಾರ್ಕೆಟಿಂಗ್‌ನ ವ್ಯವಸ್ಥಾಪಕರ ಪತ್ನಿ ಮತ್ತು ಉದ್ಯೋಗಿಯೂ ಆಗಿರುವ ಅಂಬಿಕಾ ಶ್ರೀನಿವಾಸ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೆ.16 ರಂದು ‘ಜಿ. ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023’ ಪ್ರಾರಂಭ
ವಿದ್ಯುತ್ ಕಂಬವು ರಸ್ತೆಯ ಮೇಲೆ ಕುಸಿದು ಬಿದ್ದಿದ್ದು, ವೈರಿಂಗ್ ಸಡಿಲಗೊಂಡಿದ್ದರಿಂದ ಗೋದಾಮಿನೊಳಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳು ಮತ್ತು ಬಹುತೇಕ ಅಂಗಡಿಗಳಿಗೆ ಶೂ, ಚಪ್ಪಲಿಗಳು ಈ ಗೋದಾಮಿನಿಂದಲೇ ಪೂರೈಕೆ ಆಗುತ್ತಿದ್ದವು. ಹೀಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಪ್ಪಲಿ ಶೂಗಳನ್ನು ಇಲ್ಲಿ ಶೇಖರಿಸಿ ಇಡಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಕೆಂಗೇರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.