- ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ?
- ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ?
ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ ‘ಕರ್ನಾಟಕ ಮಾದರಿ’? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಆರು ತಿಂಗಳಲ್ಲಿ 251 ರೈತರ ಆತ್ಮಹತ್ಯೆ ವಿಚಾರವಾಗಿ ಪ್ರಕಟವಾದ ಪತ್ರಿಕಾ ವರದಿ ಇಟ್ಟುಕೊಂಡು ಸರಣಿ ಟ್ವೀಟ್ ಮಾಡಿರುವ ಅವರು, “ರಾಜ್ಯದಲ್ಲಿರುವುದು ಕೃಷಿ ಇಲಾಖೆಯೋ ಅಥವಾ ಕಸಾಯಿಖಾನೆಯೋ? ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ! ಇದು ನೈಜಸ್ಥಿತಿ” ಎಂದು ಲೇವಡಿ ಮಾಡಿದ್ದಾರೆ.
“ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ?” ಎಂದು ಪಶ್ನಿಸಿದ್ದಾರೆ.
“ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವೆಡೆ ಮಳೆಯಾದರೂ ಪ್ರಯೋಜನವಾಗಿಲ್ಲ. ಈಗಾಗಲೇ ಬೆಳೆಗಳು ನಾಶವಾಗಿವೆ. ತುರ್ತಾಗಿ ಕೇಂದ್ರಕ್ಕೆ ಮನವಿ ಮಾಡಬೇಕಿದ್ದ ಸರ್ಕಾರ ಮಾರ್ಗಸೂಚಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಕಾಲಹರಣವೂ ಜೀವಹರಣವೂ ಬೇರೆ ಬೇರೆ ಅಲ್ಲ. ತುರ್ತಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡಬಹುದಲ್ಲವೇ?” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ
“ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ, ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ-ಅನರ್ಹ ಸಾವು ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ. ಸಾವಿನಲ್ಲೂ ಅರ್ಹತೆ, ಅನರ್ಹತೆ ಹುಡುಕುವ ಈ ಕ್ರೂರತೆಗೆ ಏನೆಂದು ಹೇಳುವುದು? ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ?” ಎಂದು ವಾಗ್ದಾಳಿ ನಡೆಸಿದ್ದಾರೆ.
“ನನ್ನ ಮನವಿ ಇಷ್ಟೇ; ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ. ಸರ್ಕಾರ ಇಂತಹ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು. ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು. ವಿಳಂಬ ಸರಿಯಲ್ಲ” ಎಂದು ಒತ್ತಾಯಿಸಿದ್ದಾರೆ.