ದಲಿತ ವಿರೋಧಿಯಾಗಿರುವ ಸಚಿವ ಡಿ. ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ನಿಲ್ಲಿಸಬೇಕು ಎಂದು ರಾಯಚೂರು ಜಿಲ್ಲಾ ಜೆಡಿಎಸ್(ಪರಿಶಿಷ್ಟ ಜಾತಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಸಚಿವ ಡಿ.ಸುಧಾಕರ ನೇತೃತ್ವದ ಮತ್ತು ಒಡೆತನದ ಸೆವೆನ್ ಹಿಲ್ಸ್ ಡೆವಲಪರ್ಸ್ಗೆ ಸೇರಿದ ಗೂಂಡಾಗಳು ಮತ್ತು ಭೂಗಳ್ಳರಿಂದ ದಲಿತರಿಗೆ ಸೇರಿದ ಯಲಹಂಕ ಸೀಮಾಂತರದ ಸರ್ವೆ ನಂ 308/1ರ ಭೂಮಿಯನ್ನು ಕಬಳಿಕೆ ಮಾಡಿ ಕುಟುಂಬದವರ ಮನೆಗಳನ್ನು ಜೆಸಿಬಿ ಯಂತ್ರದ ಮೂಲಕ ಧ್ವಂಸಗೊಳಿಸಿ ದಲಿತರ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಮಾಡಿದ್ದಾರೆ” ಎಂದು ಆರೋಪಿಸಿದರು.
“ಸಚಿವರ ಮೇಲೆ ಮತ್ತು ಅವರ ಗೂಂಡಾಗಳ ಮೇಲೆ ದೌರ್ಜನ್ಯ, ವಂಚನೆ, ಮೋಸ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಅವರನ್ನು ಕೂಡಲೇ ಬಂಧಿಸಲು ಸರ್ವೋಚ್ಛ ನ್ಯಾಯಾಲಯ ಆದೇಶವಿದ್ದರೂ ರಾಜ್ಯ ಸರ್ಕಾರ ತಪ್ಪಿತಸ್ತರ ಬಂಧನಕ್ಕೆ ಮುಂದಾಗುತ್ತಿಲ್ಲ. ದಲಿತರ ಎದುರು ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಕೂಡಲೇ ಬಂಧಿಸಬೇಕು. ಸಚಿವ ಡಿ ಸುಧಾಕರ್ನನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತ ದೌರ್ಜನ್ಯ; ಸೆ.18ರ ಹಿರೇಕೂಡ್ಲಿಗಿ ಚಲೋ ಮುಂದೂಡಿಕೆ
“ದಲಿತರಿಗೆ ಮೀಸಲಿಟ್ಟಿದ್ದ ಎಸ್ಸಿಪಿ ಮತ್ತು ಟಿಎಸ್ಪಿಗೆ ಮೀಸಲಿಟ್ಟ 11 ಸಾವಿರ ಕೋಟಿ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಬಳಸುವುದನ್ನು ನಿಲ್ಲಿಸಬೇಕು. ಈ ಅನುದಾನ ಬೇರೆ ಯೋಜನೆಗಳಿಗೆ ಬಳಸುವಂತಿಲ್ಲವೆಂದು ಕಾಯಿದೆ ಹೇಳುತ್ತದೆ. ಆದರೆ, ಸಂಪೂರ್ಣ ಉಲ್ಲಂಘನೆಯಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ದಲಿತರಿಗೆ ಮಾಡಿದ ಅನ್ಯಾಯವಾಗಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಾಮೂಹಿಕವಾಗಿ ಸಂವಿಧಾನ ಓದಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ, ರಾಜ್ಯ ಮುಖಂಡ ನರಸಿಂಹ ನಾಯಕ, ಕಾರ್ಯಾದ್ಯಕ್ಷ ಶಿವಶಂಕರ ವಕೀಲ, ಯೂಸೂಫ್ ಖಾನ್, ತಿಮ್ಮಾರೆಡ್ಡಿ, ವಿಶ್ವನಾಥ ಪಟ್ಟಿ, ಲಕ್ಷ್ಮಪತಿ ಗಾಣಧಾಳ, ರಾಮಕೃಷ್ಣ, ನರಸಿಂಹಲು ಆಶಾಪುರ, ಮಹೇಶ ಕುಮಾರ, ನರಸಿಂಹಲು ಸೇರಿದಂತೆ ಇತರರು ಇದ್ದರು.