- ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಮೂವರು ಡಿಸಿಎಂ ಅಗತ್ಯವಿದೆ
- ಸಂಸದ ಡಿ ಕೆ ಸುರೇಶ್ ವಿರುದ್ಧ ನಾನು ಹೇಳಿಕೆ ನೀಡುತ್ತಿಲ್ಲ: ರಾಜಣ್ಣ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲಬೇಕಿದೆ. ಇದಕ್ಕೆ ಎಲ್ಲ ಸಮುದಾಯಗಳ ಬೆಂಬಲ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಹೈಕಮಾಂಡ್ ಕೋರುತ್ತೇವೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮೂವರು ಡಿಸಿಎಂಗಳಾದರೆ ಚುನಾವಣೆಯಲ್ಲಿ ಅನುಕೂಲವಾಗಲಿದೆ. ಹೀಗಾಗಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಕೋರಿ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆಯಲಾಗುವುದು” ಎಂದರು.
“ಪರಿಶಿಷ್ಟ ಜಾತಿ–ಪಂಗಡ, ಅಲ್ಪಸಂಖ್ಯಾತರು, ವೀರಶೈವ ಲಿಂಗಾಯತ ಸಮುದಾಯಕ್ಕೆ ತಲಾ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಕೇಳಿಕೊಳ್ಳಲಾಗುವುದು. ಅಕ್ಟೋಬರ್ ಮೊದಲ ವಾರ ಹೈಕಮಾಂಡ್ ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು” ಎಂದು ಹೇಳಿದರು.
“ಮೂವರು ಡಿಸಿಎಂ ನೇಮಕ ವಿಚಾರಕ್ಕೆ ಸಹಮತ ವ್ಯಕ್ತಪಡಿಸುವ ಮುಖಂಡರನ್ನು ಒಳಗೊಂಡ ನಿಯೋಗವನ್ನು ಹೈಕಮಾಂಡ್ ಬಳಿಗೆ ಕರೆದುಕೊಂಡು ಹೋಗುವ ಬಗ್ಗೆ ಚಿಂತಿಸಲಾಗುವುದು” ಎಂದು ರಾಜಣ್ಣ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ
ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಬರುವ ಬಗ್ಗೆ ಮಾಹಿತಿ ಇದೆ. ಮತ್ತೊಬ್ಬ ಮುಖಂಡ ವಿ.ಸೋಮಣ್ಣ ಪಕ್ಷಕ್ಕೆ ಬಂದು ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಗಾಳಿ ಸುದ್ದಿ. ಜೆಡಿಎಸ್ ಮಾಜಿ ಶಾಸಕ ಡಿ ಸಿ ಗೌರಿಶಂಕರ್ ಪಕ್ಷಕ್ಕೆ ಬರುವ ಬಗ್ಗೆ ಮಾಹಿತಿ ಇಲ್ಲ” ಎಂದರು.
ಡಿ ಕೆ ಸುರೇಶ್ ವಿರುದ್ಧ ಹೇಳಿಕೆ ನೀಡುತ್ತಿಲ್ಲ
“ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ವಿರುದ್ಧ ನಾನು ಹೇಳಿಕೆ ನೀಡುತ್ತಿಲ್ಲ. ಶಿವಕುಮಾರ್ ಈಗಾಗಲೇ ಉಪಮುಖ್ಯಮಂತ್ರಿ ಇದ್ದಾರೆ. ಇತರರಿಗೂ ಅವಕಾಶ ನೀಡಬೇಕು ಎಂಬುದು ನನ್ನ ವಾದವಾಗಿದೆ. ಅವಕಾಶ ಕೇಳುವುದರಲ್ಲಿ ತಪ್ಪೇನಿದೆ” ಎಂದು ಪ್ರಶ್ನಿಸಿದರು.