- ಮಧು ಬಂಗಾರಪ್ಪ ಬೆಂಬಲಿಗರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪ
- ಪೊಲೀಸ್ ಕಮಿಷನರ್ ಭೇಟಿ ಮಾಡಿ, ದೂರು ನೀಡುವೆ ಎಂದ ಸ್ವಾಮೀಜಿ
ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ಕೊಲೆ ಬೆದರಿಕೆ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸ್ವಾಮೀಜಿ, “ಮಧು ಬಂಗಾರಪ್ಪ ಬೆಂಬಲಿಗರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಇವತ್ತು ಪೊಲೀಸ್ ಕಮಿಷನರ್ ಭೇಟಿ ಮಾಡಿ, ಮಧು ಬಂಗಾರಪ್ಪ ವಿರುದ್ಧ ದೂರು ನೀಡುವೆ” ಎಂದಿದ್ದಾರೆ.
“ಹರಿಪ್ರಸಾದ್ ಅವರು ಹಿಂದುಳಿದ ವರ್ಗದವರು. ಅವರಿಗೆ ಸ್ಥಾನಮಾನ ಕೇಳುವುದರಲ್ಲಿ ಏನು ತಪ್ಪಿದೆ? ಬೇರೆ ಸಮುದಾಯದವರು ಹೋರಾಟ ಮಾಡಿಲ್ವಾ? ಈಡಿಗ ಸಮುದಾಯಕ್ಕೆ ಮಧು ಬಂಗಾರಪ್ಪ ಕೊಡುಗೆ ಏನು?” ಎಂದು ಪ್ರಶ್ನಿಸಿದರು.
“ಈಡಿಗ ಸಮುದಾಯವನ್ನು ಸರ್ಕಾರವೇ ಒಡೆಯುತ್ತಿದೆ. ಸ್ವಾಮೀಜಿಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ. ನಾರಾಯಣ ಗುರು ರಥ ಬಂದಾಗ ಒಂದೇ ಒಂದು ಹಾರವನ್ನು ಮಧು ಬಂಗಾರಪ್ಪ ಹಾಕಿದರಾ. ನಾನು ಸಮುದಾಯದ ಭೂಮಿ ಕೊಳ್ಳೆ ಹೊಡೆದಿಲ್ಲ. ಸೈಟ್ ಮಾಡಿ ಮಾರಾಟ ಮಾಡಿಲ್ಲ. ಬಿ ಕೆ ಹರಿಪಸ್ರಾದ್ ಭೂಮಿ ಕಳ್ಳತನ ಮಾಡಿದವರಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಮೂವರು ಡಿಸಿಎಂ ನೇಮಕ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆಯುತ್ತೇವೆ: ಸಚಿವ ಕೆ ಎನ್ ರಾಜಣ್ಣ
“ನಾನು ಸ್ವಾಮೀಜಿ ಅಲ್ಲ ಅಂತ ಹೇಳಲು ಅವರಿಗೆ ಹಕ್ಕು ಕೊಟ್ಟವರು ಯಾರು. ಸಮುದಾಯಕ್ಕೆ ಅನ್ಯಾಯವಾದರೆ ಅದಕ್ಕೆ ನೀವೇ ಹೊಣೆ. ನಿಮ್ಮ ಹಿನ್ನೆಲೆ ಏನು ಅಂತ ನಿಮಗೆ ಗೊತ್ತಿದೆ. ಸಮುದಾಯಕ್ಕೆ ನಿಮ್ಮ ಸಾಧನೆ ಏನು? ಈಗ ಜೆಡಿಎಸ್ನಿಂದ ಕಾಂಗ್ರೆಸ್ಸಿಗೆ ಬಂದಿದ್ದೀರಾ. ಮುಂದೆ ಯಾವ ಪಕ್ಷಕ್ಕೆ ಹೋಗುತ್ತೀರಾ ಅಂತ ಗೊತ್ತಿಲ್ಲ” ಎಂದು ಕಿಡಿಕಾರಿದರು.
“ಸಿಎಂ ಸಿದ್ದರಾಮಯ್ಯನವರು ಮಧು ಬಂಗಾರಪ್ಪ ಮಾತಿಗೆ ಕಡಿವಾಣ ಹಾಕಬೇಕು. ಸ್ಪೀಕರ್ ಭೇಟಿ ಮಾಡಿ ಮಧು ಬಂಗಾರಪ್ಪ ವಿರುದ್ಧ ದೂರು ಕೊಡುತ್ತೇವೆ. ಕಾನೂನು ಹೋರಾಟ ಕೂಡ ಮಾಡುತ್ತೇವೆ” ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.
ಯಾರಿಗೆ ಬೇಕಾದರೂ ದೂರು ಕೊಡಲಿ: ಮಧು ಬಂಗಾರಪ್ಪ
ಪ್ರಣವಾನಂದ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, “ಪ್ರಣವಾನಂದಶ್ರೀ ಯಾಕೆ ಕಣ್ಣೀರು ಹಾಕಿದ್ದಾರೆ, ತಪ್ಪು ಮಾಡಿದ್ದಾರಾ? ಪ್ರಣವಾನಂದಶ್ರೀ ಇಂತಹ ಬುರುಡೆಗಳನ್ನ ಬಿಟ್ಟುಕೊಂಡೇ ಬಂದಿದ್ದಾರೆ. ಪ್ರಣವಾನಂದಶ್ರೀ ನಮ್ಮ ಸಮಾಜದವರೇ ಅಲ್ಲ. ಅವರೇನು ಈಡಿಗ ಸಮಾಜದವರಾ? ಅವರ ಹಿನ್ನೆಲೆ ಕೆದಕಿ ನಿಮಗೆ ಗೊತ್ತಾಗುತ್ತದೆ. ನನ್ನ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮಿಷನರ್, ಸ್ಪೀಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಯಾರಿಗೆ ಬೇಕಾದರೂ ದೂರು ಕೊಡಲಿ” ಎಂದಿದ್ದಾರೆ.