ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ, ನಗರದಲ್ಲಿರುವ ಜನತೆ ಎಲೆ, ಬಾಳೆ, ಪೂಜಾ ಸಾಮಗ್ರಿ, ಹೂವು-ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ನಗರದ ಕೆ.ಆರ್.ಮಾರ್ಕೆಟ್, ರಾಜಾಜಿನಗರ, ನವರಂಗ್ ಬ್ರಿಡ್ಜ್, ಮಲ್ಲೇಶ್ವರಂ, ವಿಜಯನಗರ ಸೇರಿದಂತೆ ಹಲವೆಡೆ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ.
ಬೆಳ್ಳಂಬೆಳಗ್ಗೆ ಗಣೇಶನನ್ನು ಪೂಜೆ ಮಾಡಿ ಮನೆಗೆ ಕರೆದುಕೊಂಡು ಹೋಗಲು ಜನರು ಉತ್ಸುಕರಾಗಿದ್ದು ನಗರದ ಹಲವೆಡೆ ಕಂಡುಬಂದಿತು. ಗಂಡು ಮಕ್ಕಳು ಯಾವ ಗಣಪತಿಯನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎಂಬ ಆಯ್ಕೆಯಲ್ಲಿ ಮಗ್ನರಾಗಿದ್ದರೆ, ಹೆಣ್ಣುಮಕ್ಕಳು ಹೂವು, ಹಣ್ಣು ಸೇರಿದಂತೆ ಇನ್ನಿತರ ಆಲಂಕಾರಿಕ ವಸ್ತುಗಳ ಆಯ್ಕೆಯಲ್ಲಿ ತೊಡಗಿದ್ದು ಮಾರುಕಟ್ಟೆಯಲ್ಲಿ ಕಂಡುಬಂದಿತು.
ಗಣೇಶ ಹಬ್ಬದ ದಿನವಾದ ಇಂದು ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ಮೋದಕ, ಕಡುಬು, ಚಕ್ಕುಲಿ, ಉಂಡೆ ಸೇರಿದಂತೆ ಗಣೇಶನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಗಣೇಶನಿಗೆ ಅರ್ಪಿಸುತ್ತಾರೆ.
ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣಿನ ಬೆಲೆ ಕೊಂಚ ಏರಿಕೆ ಕಂಡಂತಿದ್ದು, ಮಲ್ಲಿಗೆ ಹೂವು ಕೆಜಿಗೆ ₹1000 ರಿಂದ ₹1200 ಇದೆ. ಸೇವಂತಿಗೆ ₹250 ರಿಂದ ₹350, ಗುಲಾಬಿ ₹150 ರಿಂದ ₹200, ಕನಕಾಂಬರ ₹1000 ದಿಂದ ₹1200, ಮಳ್ಳೆ ಹೂವು ₹650 ರಿಂದ ₹800 ಇದೆ.
ಹಣ್ಣುಗಳಲ್ಲಿ ಏಲಕ್ಕಿ ಬಾಳೆ ₹120 ರಿಂದ ₹140, ಅನಾನಸ್ ಹಣ್ಣು ₹30 ರಿಂದ ₹70, ದಾಳಿಂಬೆ ₹50 ರಿಂದ ₹100, ಸೇಬು ₹180 ರಿಂದ ₹250, ಸೀಬೆ ₹60 ರಿಂದ ₹80 ಇದೆ.
ಅದರಂತೆ ತರಕಾರಿ ದರ ಕೆಜಿಗೆ ಹಾಗಲಕಾಯಿ ₹60, ಬಿಟ್ರೋಟ್ ₹40, ಬೀನ್ಸ್ ₹80, ಬದನೆಕಾಯಿ ₹60, ಎಲೆಕೋಸು ₹80, ಮೂಲಂಗಿ ₹60, ಹಸಿರುಮೆಣಸಿನ ಕಾಯಿ ₹60, ಬೆಂಡೆಕಾಯಿ ₹40, ನುಗ್ಗೆಕಾಯಿ ₹60, ಟೋಮಾಟೋ ₹15, ಈರುಳ್ಳಿ ₹30, ಬೆಳ್ಳುಳ್ಳಿ ₹80 ಇದೆ.
ಕಳೆದ ಯುಗಾದಿ ಹಬ್ಬ ಮತ್ತು ಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ತರಕಾರಿ, ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಈ ಬಾರಿ ತರಕಾರಿ ಬೆಲೆ ಎಲ್ಲವೂ ಕಡಿಮೆಯಿದೆ. ಆದರೆ, ಹೂವು-ಹಣ್ಣಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಹಬ್ಬದ ಸಂಭ್ರಮದಲ್ಲಿ ಮುಳುಗಿರುವ ಜನತೆ ವ್ಯಾಪಾರದಲ್ಲಿ ತೊಡಗಿದ್ದಾರೆ.
ಈ ಸುದ್ದಿ ಓದಿದ್ದೀರಾ? 2026ರ ವೇಳೆಗೆ ಕೆ.ಆರ್.ಪುರಂ – ಕೆಐಎ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಸಿದ್ಧ
ಹಲಾಲ್ ಮುಕ್ತ ಗಣೇಶೋತ್ಸವಕ್ಕೆ ಕರೆ
ಯುಗಾದಿ ಬಳಿಕ ಹಿಂದುತ್ವವಾದಿ ಕೋಮು ಸಂಘಟನೆಗಳು ಈ ಬಾರಿ ಹಲಾಲ್ ಮುಕ್ತ ಗಣೇಶೋತ್ಸವಕ್ಕೆ ಕರೆ ನೀಡಿವೆ. ಗಣೇಶ ಮಂಡಳಿಗಳಿಗೆ ಭೇಟಿ ನೀಡುತ್ತಿರುವ ಹಿಂದುತ್ವವಾದಿ ಕೋಮು ಸಂಘಟನೆಗಳ ಕಾರ್ಯಕರ್ತರು ಹಲಾಲ್ ಪ್ರಮಾಣಿಕೃತ ವಸ್ತುಗಳ ಖರೀದಿ ಮಾಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.